ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಚುನಾವಣೆ ಆಯೋಗವು ಸಿದ್ದತೆ ನಡೆಸಿದ್ದು, ಮತದಾರರ ಪಟ್ಟಿ ಪರಷ್ಕರಣೆ ಪ್ರಕ್ರಿಯೆಯೂ ಸಹ ಆರಂಭವಾಗಿದ್ದು, ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳೊಂದಿಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಮತದಾರರ ಪಟ್ಟಿ ಪ್ರಕಟಿಸುವ ಕುರಿತು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2026 ಜನವರಿ 1 ಕ್ಕೆ ಸಂಬಂಧಿಸಿದಂತೆ ಇಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು-ಆಕ್ಷೇಪಣೆಗಳಿದ್ದಲ್ಲಿ ಜನವರಿ 24 ರೊಳಗೆ ಸಲ್ಲಿಸಬೇಕು. ಅಂತಿಮ ಮತದಾರರ ಪಟ್ಟಿಯನ್ನು 2026 ರ ಫೆಬ್ರವರಿ 14 ರಂದು ಪ್ರಕಟಿಸಲಾಗುವುದು ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4907 ಯುವ ಮತದಾರರು, 2542 ವಿಶೇಷಚೇತನ ಮತದಾರರು, 45 ಇತರೆ ಮತದಾರರು, 85 ವರ್ಷ ಮೇಲ್ಪಟ್ಟ ಮತದಾರರು 1838 , ವಿದೇಶಿ ಮತದಾರರ 1 ಮತದಾರರು ಇದ್ದು, ಈ ಪೈಕಿ 113555 ಪುರುಷ, 117558 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,31,158 ಮತದಾರಿದ್ದು, ಒಟ್ಟು 284 ಮತಗಟ್ಟಿಗಳನ್ನೊಳಗೊಂಡಿದೆ ಎಂದು ಮಾಹಿತಿ ನೀಡಿದರು.
