“ಅಜರಾನರವತ್ ಪ್ರಾಜ್ಞೋವಿಧ್ಯಾಂ
ಅರ್ಥಂ ಚ ಚಿಂತಯೇಕ್”
ಇದು ಮುಪ್ಪಿಲ್ಲ ಸಾವಿಲ್ಲವೆಂದು ಪರಿಭಾವಿಸಿ ಜೀವನದಲ್ಲಿ ವಿದ್ಯೆ ಮತ್ತು ಹಣ ಎರಡನ್ನು ಸಂಪಾದಿಸಬೇಕು ಇದು ಸಂಸ್ಕೃತದ ಒಂದು ನೀತಿ ವಾಕ್ಯ. ಇದೇ ರೀತಿ ಬದುಕಿ ಬಾಳಿದ ಶತಾಯುಷಿ ಕುಂಬಾರ ವೀರಭದ್ರಪ್ಪನವರು.
ಹೊನ್ನಾಳಿಯ ನಿವಾಸಿ, ಟೋಪಿ ಅಜ್ಜ, ಕುಂಬಾರ ವೀರಭದ್ರಪ್ಪನವರಿಗೆ ಇಂದು 100ರ (08-01-26) ಹರೆಯ. ಹೊನ್ನಾಳಿಯ ಚನ್ನೇಶ್ವರ ಕಿರಾಣಿ ಅಂಗಡಿ ಮಾಲೀಕರು,ಚನ್ನಪ್ಪ ಸ್ವಾಮಿ ಮಠದ ಭಕ್ತರು,ಶ್ರೀಮಠದ ಸೇವಾ ಕರ್ತರಾದ ಇವರದು ಅಪಾರವಾದ ಧರ್ಮನಿಷ್ಠೆ, ಅಪಾರವಾದ ಕಾಯಕ ನಿಷ್ಠೆ, ಪ್ರಾಮಾಣಿಕವಾದ ವ್ಯಾಪಾರ ನಿಷ್ಠೆ, ಗುರು ಹಿರಿಯರಲ್ಲೂ ಭಕ್ತಿ, ಸಮಾಜದ ಬಗ್ಗೆ ಅಪಾರವಾದ ಗೌರವ, ಸಮಾಜದ ಒಳಿತಿಗಾಗಿ ಧರ್ಮದ ತಿಳುವಳಿಕೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕ್ರಿಯಾಶೀಲ ವ್ಯಕ್ತಿ, ಆಧ್ಯಾತ್ಮಿಕ ಕಾಯಕ ಜೀವಿ, ನಿತ್ಯ ಪೂಜೆ ನಿಸ್ವಾರ್ಥ ಸೇವೆಯ ಕುಂಬಾರ ವೀರಭದ್ರಪ್ಪನವರು
ಬದುಕಿನ ಬಂಡಿ ಎಳೆಯಲು ವ್ಯಾಪಾರ ಆರಂಭಿಸಿ ಆ ವ್ಯಾಪಾರ ಬದುಕಿನಲ್ಲೇ ಏಳು ಬೀಳು ಕಂಡವರು ವ್ಯಾಪಾರವನ್ನೇ ಜೀವನಾಧಾರ ಮಾಡಿಕೊಂಡು ಬದುಕಿದವರು. ವ್ಯಾಪಾರ ವ್ಯವಹಾರದಲ್ಲಿ ಅಪ್ಪಟ ಪ್ರಗತಿಪರರು. ಸುಖ ಬಂದಾಗ ಹಿಗ್ಗದ, ದುಃಖದಲ್ಲಿ ಕುಗ್ಗದ ಸದಾ ಕ್ರಿಯಾಶೀಲ ವ್ಯಕ್ತಿತ್ವ ಈ ಅಜ್ಜನದು. ಆಚಾರ ವಿಚಾರದಲ್ಲೂ ವಿನಯಶೀಲರು. ಸೇವಾ ಮನೋಭಾವದ ಸದ್ಗುಣಗಳ ಸಿರಿ ಎಂದರೆ ತಪ್ಪಾಗಲಾರದು. ಇವರು ಹುಟ್ಟಿನಿಂದ ದೊಡ್ಡವರಲ್ಲ, ಹುಟ್ಟಿ ದೊಡ್ಡವರಾಗಿ ಬೆಳೆದವರು. ಇದು ತುಳಿತಕ್ಕೆ ಒಳಪಟ್ಟ ಕುಂಬಾರ ಸಮಾಜದಿಂದ ಬಂದ ಅಜ್ಜನ ಸಾಧನೆಯೇ ಸರಿ.
ದಿನಾಂಕ 10-11-1997ರಂದು ಶಿವಮೊಗ್ಗ ನಗರದ ಬಸವೇಶ್ವರ ಬಡಾವಣೆಯಲ್ಲಿ ಕುಂಬಾರ ಸಮಾಜದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯದ ಹಾಸ್ಟೆಲ್ ಕಟ್ಟಡ ಶಂಕುಸ್ಥಾಪನೆಗೆ ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಷ.ಬ್ರ.ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಈ ಕುಂಬಾರ ವೀರಭದ್ರಪ್ಪನವರೊಂದಿಗೆ ಬಂದಿದ್ದರು. ಶಂಕುಸ್ಥಾಪನೆ ನೆರವೇರಿಸಿದ ಸ್ವಾಮೀಜಿಗಳು ಕುಂಬಾರ ಸಮಾಜದ ಹಾಸ್ಟೆಲ್ ಕಟ್ಟಡಕ್ಕೆ 5,000 ದೇಣಿಗೆಯನ್ನು ವೇದಿಕೆಯಲ್ಲಿ ಘೋಷಿಸಿದ್ದರು. ಅದೇ ವೇದಿಕೆಯಲ್ಲಿ ವೀರಭದ್ರಪ್ಪನವರು ಅಂದಿನ ಕಟ್ಟಡದ ಒಂದು ರೂಂ ವೆಚ್ಚ 50,000ಗಳ ವಾಗ್ದಾನ ಮಾಡಿದ್ದರು. ಇವರೊಂದಿಗೆ ಇತರೆ ನಾಲ್ಕು ಜನರೂ ಸಹ 50,000 ವಾಗ್ದಾನ ಮಾಡಿದ್ದರು. ನಂತರ ಹಾಸ್ಟೆಲ್ ಕಟ್ಟಡದ ಜಾಗ ಕೋರ್ಟ್ ಮೆಟ್ಟಿಲೇರಿ ಏಳು ವರ್ಷಗಳು ಕಟ್ಟಡ ನಿರ್ಮಾಣಕ್ಕೆ ತಡೆಯಾಯಿತು.
ನಂತರ ಹಣ ಕೇಳಲು ಅಜ್ಜನ ಬಳಿ ಹೋದಾಗ ಅಜ್ಜ ಒಳ ಕರೆದು 50,000ಗಳಿಗೆ ಒಂದು ರೂಮ್ ಆಗುತ್ತದೆಯೇ ಎಂದು ಕೇಳಿದ್ದರು. ಇಲ್ಲ ಅಜ್ಜ ಈಗ 60,000 ಬೇಕು ಎಂದೆವು ಆಗ ಅಜ್ಜ ನಾನು 50,000 ಕೊಡಲೋ 60,000 ಕೊಡಲೋ ಎಂದಾಗ 50,000ಗಳನ್ನು ಪಡೆದು ಬಂದೆವು.
2000ನೇ ಇಸವಿಯಲ್ಲಿ ಹೊನ್ನಾಳಿಯಲ್ಲಿ ಶಿವಮೊಗ್ಗ ಕುಂಬಾರ ಸಂಘದ ಜನರಲ್ ಬಾಡಿ ಮೀಟಿಂಗ್ ಮಾಡಲು ತೀರ್ಮಾನಿಸಿ ಅಜ್ಜನ ಬಳಿ ಹೋದಾಗ, ಇವರಿಗೆ ಅಡುಗೆಗೆ ಬೇಕಾದ ಎಲ್ಲಾ ಕಿರಣಿ ಸಾಮಾನು ಕೊಡು ಎಂದಾಗ ನಾವುಗಳು ಅಂದು ಪಾಯಸಕ್ಕೆ ಬೇಕಾದ ರವೆ,ಬೆಲ್ಲ,ತುಪ್ಪ ಇತ್ಯಾದಿಗಳನ್ನು ಪಡೆದುಕೊಂಡು ಬಂದೆವು. ಇದು ಅಜ್ಜನ ದಾನ ಗುಣ, ಸಮಾಜದ ಬಗ್ಗೆ ಹೊಂದಿದ ಕಳಕಳಿ, ಸಮಾಜ ಪ್ರೇಮ ತೋರಿಸುತ್ತಿತ್ತು.
ಮಠದ ಜೊತೆ, ಸಂಘ ಸಂಸ್ಥೆಗಳ ಸಮಾಜೋದ್ಧಾರದ ಬಗ್ಗೆಯೂ ಈ ಅಜ್ಜ ಕಾಳಜಿ ಹೊಂದಿದ್ದಾರೆ.
ಅಜ್ಜ ಧರ್ಮಶಾಸ್ತ್ರ ಪಂಡಿತರಲ್ಲ. ಆದರೆ ಧಾರ್ಮಿಕ ವಿವೇಕ ಉಳ್ಳವರಾಗಿದ್ದಾರೆ. ಬಿಳಿ ಪಂಚೆ, ಜುಬ್ಬಾ, ಹೆಗಲ ಮೇಲೊಂದು ಹಾಲ್ನೊರೆಯಂತಹ ತೆಳುವಾದ ಶಲ್ಯೆ, ಎಡಗೈಯಲ್ಲಿ ಹೂವು ಪತ್ರೆಗಳ ಜೋಳಿಗೆ, ಓಡಾಡಲು ಒಂದು TVS. ಮಠಕ್ಕೆ ಹೊರಟ ಅಜ್ಜನನ್ನು ನೋಡುವುದೇ ಒಂದು ಚೆಂದ. ಮಠದ ಎಲ್ಲಾ ದೇವರಿಗೂ ಒಂದೊಂದು ಪತ್ರೆ ಮುಡಿಸುತ್ತಾ ಬದುಕಿನಲ್ಲಿ ಒಂದು ಶಿಸ್ತನ್ನು ರೂಡಿಸಿಕೊಂಡು ಬೆಳೆದವರು. ಸ್ವಾರ್ಥಕ್ಕಾಗಿ ಸಮಾಜವನ್ನು, ಗುರುಗಳನ್ನು, ದುರ್ಬಳಕೆ ಮಾಡಿಕೊಂಡವರಲ್ಲ. ಮಠದ ಹಿಂದಿನ, ಇಂದಿನ, ಮೂವರು ಗುರುಗಳಿಗೂ ವಿಧೇಯರಾಗಿ ನಡೆದುಕೊಂಡವರು.
ಜೀವನವೆಂಬುದು ಋಣದ ಗಣಿ, ಅನ್ನದಾನ ಮಾಡಿ, ಸತ್ಯ ಮಾತನಾಡಿ, ತನ್ನಂತೆ ಪರರನ್ನು ಕಂಡ ಎಲೆಮರೆಯ ಕಾಯಿಯಂತೆ ಬಾಳಿ ಬದುಕುತ್ತಿರುವ ಮೇರು ವ್ಯಕ್ತಿತ್ವದ ತುಂಬ ಜೀವನ ನಡೆಸಿದ ಈ ಮಹಾನ್ ಚೇತನ ಸಮಾಜದ ಹಿರಿಯರಾಗಿ,ಮಾರ್ಗದರ್ಶಕರಾಗಿ, ಅಜ್ಜ ಇನ್ನೂ ನೂರ್ಕಾಲ ಬಾಳಲಿ ಎಂಬುದು ಈ ಶಿಷ್ಯನ ಹಾರೈಕೆ.
ಚಿಕ್ಕ ಜೋಗಿಹಳ್ಳಿ ನಾಗರಾಜ್. ಕಲಾವಿದರು,ಲೇಖಕರು, ಹೊನ್ನಾಳಿ.
ಮೊ:944909390
