ಮುಗಿಲೆತ್ತರದ ಗಿರಿ, ಉದ್ದಕ್ಕೂ ಮಲಗಿರುವ ಬೆಟ್ಟಗಳ ಸಾಲು, ಗಿರಿಯ ಮಧ್ಯೆ ಭಕ್ತಿ, ವೈರಾಗ್ಯ ಜ್ಞಾನದ ಪ್ರಸಾರಕ್ಕೆಂದೇ ಹುಟ್ಟಿದೆಯೇನೋ ಎಂಬಂತೆ ಕಂಗೊಳಿಸುತ್ತಿರುವ ಪ್ರಕೃತಿ ದೇವಿಯ ಮಡಿಲಲ್ಲಿ ಮಲಗಿರುವ ಮುದ್ದು ಕರುವಿನಂತೆ ಕಾಣುವ ವಿಶಿಷ್ಟ ವಾಸ್ತು ಶಿಲ್ಪವನ್ನೊಳಗೊಂಡ ದೇವಾಲಯ. ಇದು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಕೇಂದ್ರದಿಂದ ೧೦ ಕಿ.ಮೀ ಮತ್ತು ಹೊನ್ನಾಳಿ ತಾಲೂಕು ಕೇಂದ್ರದಿಂದ ೨೦ ಕಿ.ಮೀ ದೂರದಲ್ಲಿರುವ ಜಿಲ್ಲೆಯಲ್ಲಿಯೇ ಅತಿ ರಮಣೀಯವೂ ಪ್ರೇಕ್ಷಣೀಯವೂ ಆದ ಪವಿತ್ರ ಯಾತ್ರಸ್ಥಳ ಶ್ರೀ ತೀರ್ಥರಾಮೇಶ್ವರ ಕ್ಷೇತ್ರ,
ಸುಂದರ ದೇಗುಲ
ಪಾಪ ತೊಳೆಯುವ ಗಂಗಾತೀರ್ಥ- ಆದರ್ಶಪ್ರಾಯನಾದ ಶ್ರೀರಾಮ ಜಗದ್ರಕ್ಷಕ ಈಶ್ವರ ಲಿಂಗ ಈ ಮೂವರ ಸಮ್ಮಿಲನವೇ ಈ ತೀರ್ಥರಾಮೇಶ್ವರ ಕ್ಷೇತ್ರ,
ಪುಣ್ಯಸ್ನಾನದ ರಮ್ಯತಾಣ
ಹಸಿರಿನ ಮರಗಳ ನಡುವೆ ಚಿಲಿಪಿಲಿಗುಟ್ಟುವ ಹಕ್ಕಿಗಳ ನಾದ ಕೇಳುತ್ತ ಒಂದೊಂದು (೨೭೦)ಮೆಟ್ಟಿಲು ಏರುವುದು ಎಂದರೆ ಸ್ವರ್ಗಾರೋಹಣವೇ ಸರಿ. ಎದುರಾಗುವ ವಿವಿಧ ಚಿತ್ತಾರಗಳಿಂದ ರಚಿತವಾದ ನಾಲ್ಕು ಕಂಬಗಳುಳ್ಳ ಐದು ಬಾಗಿಲುಗಳುಳ್ಳ ಬೃಹತ್ ಕಲ್ಲಿನದೇವಾಲಯದ ಗರ್ಭಗುಡಿಯಲ್ಲಿ ಉದ್ಭವ ಲಿಂಗದ ಎದುರು ಜೋಡಿ ಬಸವಣ್ಣ ಇರುವುದು. ದೇವಾಲಯದ ಬಲಕ್ಕೆ ಕೆಳಗೆ ಗಂಗಾದೇವಿ ದೇವಾಲಯ, ದೇವಾಲಯದಲ್ಲಿ ಗಂಗಾಮೂರ್ತಿಯ ಕೆಳಗೆ ಶಿಲಾಮಯವಾದ ಸಿಂಹದ ಮುಖದಿಂದ ಸತತವಾಗಿ ಸುರಿಯುತ್ತಿರುವ ಶುಭ್ರವಾದ ಗಂಗಾತೀರ್ಥ ಮತ್ತು ತೀರ್ಥದಕೊಳ ಇರುತ್ತದೆ.
ಇದು ಗಂಗಾ ತೀರ್ಥವೇ?
ಸನ್ಯಾಸಿಯೋರ್ವನು ಕಾಶಿ ವಿಶ್ವನಾಥನ ಸನ್ನಿಧಿಯ ಗಂಗಾನದಿಯಲ್ಲಿ ಸಂಧ್ಯಾವಂದನೆಯನ್ನು ಮಾಡಿ ವಿಶ್ವನಾಥನ ಧ್ಯಾನದಲ್ಲಿ ಮೈಮರೆತಿರುವಾಗ, ವಿಶ್ವನಾಥನಿಂದ ಮಂತ್ರಿಸಲ್ಪಟ್ಟ ‘ಓಂ’ ಎಂದು ಕೆತ್ತಲಾದ ‘ಮಂತ್ರದ ಬೆತ್ತ ನದಿಯಲ್ಲಿ ತೇಲಿಹೋಯಿತು. ಎಷ್ಟು ಹುಡುಕಿದರೂ ಬೆತ್ತ ಸಿಗಲಿಲ್ಲ. ಸನ್ಯಾಸಿಯು ನಾಡಿನ ಪವಿತ್ರ ಕ್ಷೇತ್ರಗಳ ದರ್ಶನ ಮಾಡುತ್ತ ತೀರ್ಥರಾಮೇಶ್ವರ ಕ್ಷೇತ್ರಕ್ಕೆ ಬಂದರು. ಇಲ್ಲಿಗೆ ಬಂದ ಸನ್ಯಾಸಿಗೆ ಆಶ್ಚರ್ಯವೊಂದು ಕಾದಿತ್ತು ಗಂಗಾನದಿಯಲ್ಲಿ ಕಳೆದ ಬೆತ್ತ ತೀರ್ಥರಾಮೇಶ್ವರ ಕೊಳದಲ್ಲಿ ಸಿಕ್ಕಿತ್ತು. ಹೀಗಾಗಿ ಇದು ಕಾಶಿಯಿಂದ ಬಂದ ಗಂಗೆಯೆಂದು ತಿಳಿದು ಬರುತ್ತದೆ. ಕಾಶಿಯ ತೀರ್ಥದಷ್ಟೇ ರುಚಿ ಹೊಂದಿರುವ ತೀರ್ಥದಲ್ಲಿ ಮಿಂದು ನಾವು ಈಶ್ವರನ ದರ್ಶನಕ್ಕೆ ಹೋಗಬೇಕು. ಈ ತೀರ್ಥದ ಕೊಳತುಂಬಿ ಭರ್ತಿಯಾದರೂ ಹನಿನೀರು ಹೊರಕ್ಕೆ ಚೆಲ್ಲದಿರುವುದೇ ಈ ಕ್ಷೇತ್ರದ ಮಹಿಮೆಗೆ ಸಾಕ್ಷಿ.
ಸ್ವಲ್ಪ ಮೇಲುಗಡೆ ಗುಡ್ಡದ ಭಾಗದಲ್ಲಿ ಹರಿಯುತ್ತಿರುವ ಹುಚ್ಚುಗಂಗೆ ತೀರ್ಥದ ಕೊಳ ಇರುತ್ತದೆ. ದೇವಾಲಯದ ಬಲಭಾಗದಲ್ಲಿರುವ ಈ ಗಂಗೆಯಲ್ಲಿ ಸ್ನಾನ ಮಾಡಿದರೆ “ಹುಚ್ಚು ಬಿಡುತ್ತದೆ. ಮುಟ್ಟು, ಮಾಟ, ಮೈಲಿಗೆಗೆ ಇಲ್ಲಿಯ ತೀರ್ಥಾಭ್ಯಂಜನದಲ್ಲಿ ದೋಷ ನಾಶ ಮಾಡುವ ಶಕ್ತಿ ಇದೆ. ಹೊಲಗದ್ದೆಗಳಲ್ಲಿ ಬೆಳೆದ ಪೈರಿಗೆ ರೋಗ ಬಂದರೆ ಹುಳು ಹತ್ತಿದರೆ ಈ ಕಾಶಿ ತೀರ್ಥ ಚಿಮ್ಮಿಸಿ ರೋಗವನ್ನು ನಿವಾರಿಸಿಕೊಳ್ಳುತ್ತಿದ್ದಾರೆ. ಈಗಲೂ ರೋಗರುಜಿನಗಳಿಗೆ ಈ ತೀರ್ಥ ಸಂಜೀವಿನಿ ಇದ್ದಹಾಗೆ,
ದುಷ್ಟ ಶಕ್ತಿಗಳು ಮೇಲೆಹೋಗದಂತೆ ತಡೆಯಲು ನಿಂತಿರುವ ಆಳೆತ್ತರದ ಬ್ರಹ್ಮದೇವ, ಮೂರುತಲೆಯ ನಾಗಸರ್ಪಕ್ಕೆ ಒಂದು ತಲೆಯ ಕಾಳಿಂಗಸರ್ಪ, ಸರಪಳಿ ರೂಪದಲ್ಲಿ ಬಿಗಿದಿರುವ ಪ್ರೇಮಬಂಧನದ ಆದಿಶೇಷ, ಚತುರ್ಮುಖ ಬ್ರಹ್ಮ ದೇಗುಲವಿದ್ದು ಬ್ರಹ್ಮನ ಬಲಕ್ಕೆ ಅಲ್ಲಿಯೂ ಕಾಶಿ ವಿಶ್ವನಾಥ, ಎಡಕ್ಕೆ ವಿಷ್ಣು ಹೀಗೆ ತ್ರಿಮೂರ್ತಿಗಳ ಸಂಗಮ ದೇವಾಲಯ. ದೇವಾಲಯದ ನಂದಿ ಪಕ್ಕದ ವಿಶಾಲಾಕ್ಷಿ ದೇವಾಲಯ ಆಗಿದೆ. ಈ ದೇವಾಲಯದ ಎದುರು ಬೆಟ್ಟದ ಕಲ್ಲಿನಿಂದಲೇ ಪ್ರತಿಷ್ಠಾಪಿಸಿರುವ ಆದಿ ಶಕ್ತಿ, ಗವಿಸಿದ್ದೇಶ್ವರ ಸ್ವಾಮಿ, ಕಣಿವೆ ಈರಣ್ಣ, ಬಸವಣ್ಣನ ಗುಡಿ ಹೀಗೆ ಅನೇಕ ದೇವಾಲಯಗಳಿಂದ ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ.
ಬಂಗಾರದ ಅದಿರು ವಿವಿಧ ಗಿಡಮೂಲಿಕೆಗಳಿಂದ ಸಮೃದ್ಧವಾದ ತೀರ್ಥಗಿರಿ, ತುಪ್ಪದಗಿರಿ, ಈರಣ್ಣನ ಕಣಿವೆ, ಗಂಗವ್ವನಸರ ಮುಂತಾದ ಬೆಟ್ಟಗುಡ್ಡಗಳಿಂದ ಕಂಗೊಳಿಸುತ್ತಾ ತ್ರೇತಾಯುಗದ ರಾಮ, ಸೀತೆ, ಲಕ್ಷ್ಮಣ, ದ್ವಾಪರಯುಗದ ಪಂಚಪಾಂಡವರು ಹೀಗೆ ತ್ರಿಕಾಲ ಪೂಜೆ ನಿತ್ಯಾನುಷ್ಠಾನಗಳಿಂದ ಭಕ್ತರನ್ನು ಆಶೀರ್ವದಿಸುವ ಅನುಗ್ರಹಿಸುವ ತಾಣವಾಗಿ ಪುರಾಣ ಪ್ರಸಿದ್ಧಿಯನ್ನು ಸಾಂಸ್ಕೃತಿಕ ಪರಂಪರೆಯನ್ನು ಈ ನಾಡಿಗೆ ಸಾರುತ್ತಿದೆ.
ಸ್ಥಳ ಪುರಾಣ
ಶ್ರೀರಾಮಚಂದ್ರನ ಹದಿನಾಲ್ಕು ವರ್ಷ ವನವಾಸದ ಸಮಯದಲ್ಲಿ ಸೀತಾದೇವಿ, ಲಕ್ಷ್ಮಣರೊಂದಿಗೆ ಈ ಪವಿತ್ರ ನೆಲಕ್ಕೆ ಬಂದನು. ಪ್ರಯಾಣದಿಂದ ಬಳಲಿದ ಅವರಿಗೆ ಕುಡಿಯಲು ನೀರೂ ಸಹ ಸಿಗಲಿಲ್ಲ. ಇದೇ ವೇಳೆಗೆ ಲೋಕಮಾತೆಯಾದ ಸೀತಾದೇವಿ ರಜಸ್ವಲೆಯಾದಳು. ಈ ಕರ್ಮದಿಂದ ಮುಕ್ತಿಹೊಂದಲು ಸೀತಾಮಾತೆ ರಾಮ ಲಕ್ಷ್ಮಣರಿಗೆ ನೀರು ಬೇಡಿದಳು. ಎಲ್ಲಿ ಹುಡುಕಿದರೂ ನೀರು ಸಿಗಲಿಲ್ಲ. ಆಗ ಶ್ರೀರಾಮಚಂದ್ರನು ನೆಲಕ್ಕೆ ಬಾಣ ಬಿಟ್ಟನು. ಆಗ ನೀರು ಚಿಮ್ಮಿತು. ರಾಮಲಕ್ಷ್ಮಣರು ನೀರು ಕುಡಿದು ಸಂತೃಪ್ತರಾದರು. ಸೀತಾದೇವಿ ಜಳಕ ಮಾಡಿ ಪವಿತ್ರಳಾದಳು. ಅಲ್ಲೇ ಇದ್ದ ಶಿವಲಿಂಗಕ್ಕೆ ಪೂಜೆ ಮಾಡುತ್ತ ಕೆಲಕಾಲ ತಂಗಿದ್ದು ಲಿಂಗಾನುಗ್ರಹ ಪಡೆದು ಪ್ರಯಾಣ ಬೆಳೆಸಿದರು.
ಕ್ಷೇತ್ರ ಚರಿತ್ರೆ
ಚಾರಿತ್ರಿಕವಾಗಿ : ವಿಜಯನಗರದ ಬುಕ್ಕ ರಾಯನ ಆಡಳಿತಕ್ಕೆ ಒಳಪಟ್ಟಿದ್ದ ಈ ಕ್ಷೇತ್ರವನ್ನು ಆನೆಗುಂದಿಯ ದೊರೆ ಚಲುವರಂಗಪ್ಪನಾಯಕನು ನೋಡಿಕೊಳ್ಳುತ್ತಿದ್ದನು. ಆತನೇ ಇಲ್ಲಿನ ವಿವಿಧ ‘ಚಿತ್ತಾರಗಳಿಂದ ಕೂಡಿದ ಸೊಬಗಿನ ಕಲ್ಲಿನ ಬೃಹತ್ ದೇವಾಲಯವನ್ನು ಊರ ಪ್ರಮುಖರ ಸಹಾಯದಿಂದ ನಿರ್ಮಿಸಿದನು.
ರಸ್ತೆ, ವಿದ್ಯುತ್, ಕಲ್ಯಾಣಮಂದಿರ, ಅತಿಥಿಗೃಹ ಮುಂತಾದ ಸೌಲಭ್ಯಗಳು ಸಾರ್ವಜನಿಕರ ಸಹಕಾರದಿಂದ ಕಟ್ಟಿಸಲಾಗಿದೆ. ಈ ಪ್ರಶಾಂತ ತೀರ್ಥರಾಮೇಶ್ವರ ಕ್ಷೇತ್ರ ಕರ್ನಾಟಕದ ಪ್ರವಾಸಿ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪಾಪಕರ್ಮದಿಂದ ಮುಕ್ತಿ ಹೊಂದಬೇಕೆಂಬ ಯಾತ್ರಿಕರಿಗೆ ಸಂಕ್ರಾಂತಿಯ ಪುಣ್ಯ ಸ್ನಾನಕ್ಕೆ ಈ ತೀರ್ಥರಾಮೇಶ್ವರ “ದಕ್ಷಿಣದ ಕಾಶಿ”.
ಚಿಕ್ಕಜೋಗಿಹಳ್ಳಿ ನಾಗರಾಜ್
ದುರ್ಗಿಗುಡಿ ಉತ್ತರ ಭಾಗ
೨ನೇ ತಿರುವು.
ಹೊನ್ನಾಳಿ. ದಾವಣಗೆರೆ ಜಿ. ೫೭೭೨೧೭
ಮೊ:೯೪೪೯೦೯೩೯೦೨.
