ದಾವಣಗೆರೆ,ಜನವರಿ.16:ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಪಾರದರ್ಶಕತೆಯ ಕೊರತೆಯ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆದು ಆಹಾರ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ವಿಳಂಬ ಮತ್ತು ಲೋಪದೋಷಗಳು ಕಂಡು ಬಂದಲ್ಲಿ ಆಯಾ ಆಹಾರ ನಿರೀಕ್ಷರೇ ಜವಾಬ್ದಾರರು ಎಂದು ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶಾಮನೂರು ಟಿ.ಬಸವರಾಜ್ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಡಿತರ ಚೀಟಿದಾರರಿಗೆ ಸರಿಯಾದ ಸಮಯದಲ್ಲಿ ಆಹಾರ ಧಾನ್ಯ ತಲುಪದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮಟ್ರಿಕ್ ಪಡೆದಿದ್ದರೂ ಸಹ ಆಹಾರ ಎತ್ತುವಳಿಗೆ ಬೇರೊಂದು ದಿನ ಆಗಮಿಸಲು ತಿಳಿಸುವುದು ಮತ್ತು ಪ್ರತಿ ಕಾರ್ಡ್‍ಗೆ ರೂ.10, 20 ರೂ.ಗಳನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಜಿ.ಪಂ.ಸಿಇಓ ಸೂಚನೆ ಮೇರೆಗೆ ಒಂದು ನ್ಯಾಯಬೆಲೆ ಅಂಗಡಿ ಅಮಾನತು ಮಾಡಲಾಗಿದೆ. ಆದರೆ ಆಯಾ ತಾಲ್ಲೂಕಿನ ಆಹಾರ ನಿರೀಕ್ಷಕರು ಪ್ರತಿ ತಿಂಗಳು ಕನಿಷ್ಠ ಶೇ 50 ಕ್ಕಿಂತ ಹೆಚ್ಚಿನ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು, ಇಲ್ಲವಾದಲ್ಲಿ ದೂರು ಬಂದಲ್ಲಿ ಮೊದಲು ಆಹಾರ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಿಇಓ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳು ಜಿಲ್ಲೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪುತ್ತಿವೆ ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ಮತ್ತು ತಾಂತ್ರಿಕ ಸಮಸ್ಯೆಗಳಿದ್ದರೆ ಅವುಗಳನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಗೃಹಲಕ್ಷ್ಮಿ ಯೋಜನೆ: ಜಿಲ್ಲೆಯಲ್ಲಿ 374572 ಫಲಾನುಭವಿಗಳಿಗೆ 2025 ರ ಸೆಪ್ಟೆಂಬರ್ ವರೆಗೆ ಅತಿ ಹೆಚ್ಚು ಮೊತ್ತವನ್ನು ಸುಮಾರು 1,690 ಕೋಟಿ ರೂ. ಈ ಯೋಜನೆಗೆ ಬಳಸಲಾಗಿದೆ.
ಶಕ್ತಿ ಯೋಜನೆಯಡಿ 12.30 ಕೋಟಿ ಮಹಿಳೆಯರು ಪ್ರಯಾಣಿಸಿ ಪ್ರಯಾಣ ವೆಚ್ಚವಾಗಿ ರೂ.361.67 ಕೋಟಿ ವೆಚ್ಚ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 1242812 ಫಲಾನುಭವಿಗಳು 346.33 ಕೋಟಿ ಪಡೆದಿದ್ದಾರೆ. ಗೃಹಜ್ಯೋತಿಯಡಿ 516899 ಖಾತೆದಾರರಿಗೆ ತಿಂಗಳಿಗೆ ರೂ.24.08 ಕೋಟಿ ನೀಡಿದೆ. ಯುವನಿಧಿಯಡಿ 10056 ಫಲಾನುಭವಿಗಳು 28.86 ಕೋಟಿ ನಿರುದ್ಯೋಗ ಭತ್ಯೆಯನ್ನು ಪಡೆದಿದ್ದು ಒಟ್ಟು ಐದು ಗ್ಯಾರಂಟಿ ಯೋಜನೆಗಳಿಗಾಗಿ ರೂ. 2,451.50 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಹಣವನ್ನು ವ್ಯಯಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಉಪಾಧ್ಯಕ್ಷರಾದ ಅನೀಷ್ ಪಾಷ, ಕುಕ್ಕುವಾಡ ಮಂಜಣ್ಣ, ನಂಜಾನಾಯ್ಕ, ರಾಜೇಶ್ವರಿ ಟಿ.ಎಂ, ಸದಸ್ಯರಾದ ಡೋಲಿ ಚಂದ್ರು, ಎಸ್.ಎಸ್.ಗಿರೀಶ್, ನಾಗರಾಜ, ಉಮೇಶ್, ಶಿವಶಂಕರ್ ಕೈದಾಳ್, ಷಂಷೀರ್, ಲಿಯಾಕತ್ ಅಲಿ, ಶಿವರಾಮ್‍ನಾಯ್ಕ, ನೀಲಗಿರಿಯಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
