ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ 2ನೇ ಕ್ಯಾಂಪ್ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ, ದಾಸೋಹ, ಟೆಲಿವಿಜನ್ ನಲ್ಲಿ ನೇರ ಶಬರಿಮಲೆಯ ಜ್ಯೋತಿಯ ದರ್ಶನದ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಅಯ್ಯಪ್ಪ ಸ್ವಾಮಿಯ ನೂರಾರು ಮಾಲಾಧಾರಿಗಳು ದೇವಾಲಯದಲ್ಲಿ ಇರುಮುಡಿ ಕಟ್ಟಿಕೊಂಡು ಲಿಂಗಾಪುರ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಿಂದ ಅಯ್ಯಪ್ಪ ಸ್ವಾಮಿಯ ಆಭರಣಗಳನ್ನು ವಿವಿಧ ಕಲಾ ತಂಡಗಳ ಮೆರವಣಿಗೆಯ ಮೂಲಕ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತಂದು, ಒಡವೆಗಳ ಅಲಂಕಾರ ಪೂಜೆ ಮಾಡಲಾಯಿತು.
ಸುತ್ತಮುತ್ತಲಿನ ಹಳ್ಳಿಯ ಸಾವಿರಾರು ಸಂಖ್ಯೆಯ ಭಕ್ತ ಸಮೂಹ ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸ್ವಾಮಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.
ದಾವಣಗೆರೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬಂದಂತಹ
ಹರಿಹರ ತಾಲೂಕು ಬೆಳ್ಳೊಡಿ ಗ್ರಾಮದ ರೇವಣಸಿದ್ದಪ್ಪ ಮತ್ತು ಸ್ನೇಹಿತರ ಡೊಳ್ಳು ಕಲಾತಂಡ,
ಹರಪನಹಳ್ಳಿ ತಾಲೂಕು ನಂದಿಬೇವೂರು ಗ್ರಾಮದ ವೀರೇಶ್ ಮತ್ತು ಸ್ನೇಹಿತರ ನಂದಿಕೋಲು ಕಲಾತಂಡ, ದಾವಣಗೆರೆ ನಗರದ ಮೀನಾಕ್ಷಮ್ಮ ಮತ್ತು ಸ್ನೇಹಿತೆಯರ ಮಹಿಳಾ ವೀರಗಾಸೆ ಕಲಾತಂಡ ಆಭರಣ ಮೆರವಣಿಗೆ ಉತ್ಸವದಲ್ಲಿ ಕಲಾ ಪ್ರದರ್ಶನ ಮಾಡುವ ಮೂಲಕ ಉತ್ಸವಕ್ಕೆ ಮೆರಗು ತಂದವು.
