ದಾವಣಗೆರೆ, ಜ.14 : ಜಿಲ್ಲೆಯಲ್ಲಿ ಬಾಲ್ಯವಿವಾಹ ನಿಷೇದ, ಪೋಕ್ಸೊ ಪ್ರಕರಣಗಳು, ಬಾಲ ಕಾರ್ಮಿಕತೆ ಸೇರಿದಂತೆ ಮಕ್ಕಳಿಗೆ ಸಂಬಂಧಪಟ್ಟಂತಹ ವಿಷಯಗಳ ಬಗ್ಗೆ ಅಧಿಕಾರಿಗಳು ಹೆಚ್ಚು ಕ್ರಮವಹಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಮ.ಕರೆಣ್ಣವರ ಅವರು ಸೂಚನೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಕ್ಕಳ ರಕ್ಷಾಣ ಘಟಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೋಕ್ಸೊ ಪ್ರಕರಣದಡಿ 2025-26 ನೇ ಸಾಲಿನಲ್ಲಿ 6 ಪ್ರಕರಣಗಳು ದಾಖಲಾಗಿದ್ದು ಈ ಪ್ರಕರಣಗಳು ತಡೆಗಟ್ಟಲು ಅರಿವು ಮೂಡಿಸಲು ಕ್ರಮವಹಿಸಿ, ಬಾಲ್ಯವಿವಾಹ ಮಾಡಿಸುವ ಪೋಷಕರು ಮತ್ತು ಪೂಜಾರಿಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮವಹಿಸುವಂತೆ ತಿಳಿಸಿದರು. ಶಾಲೆಗೆ ಬಾರದೇ ಇರುವಂತಹ ಮಕ್ಕಳ ಮಾಹಿತಿಯನ್ನು ಕಲೆಹಾಕಬೇಕು. ಅವರು ಯಾವ ಕಾರಣಕ್ಕಾಗಿ ಶಾಲೆಯನ್ನು ತೊರದಿದ್ದಾರೆ, ಎಂಬುದನ್ನು ಪತ್ತೆ ಹಚ್ಚಬೇಕು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕೆಳಕಂಡ ಮಾಹಿತಿಯನ್ನು ಸಭೆಗೆ ನೀಡಿದರು.
ವಿಶೇಷ ಪಾಲನಾ ಯೋಜನೆಯಡಿ 403 ಫಲಾನುಭವಿಗಳಿಗೆ ಮಾಸಿಕ ತಲಾ ರೂ. 2000/- ಗಳಂತೆ ಇದುವರೆವಿಗೆ 47,80,000/- ಗಳನ್ನು ಡಿ ಬಿ ಟಿ ಪೋರ್ಟಲ್ ಮೂಲಕ ಅನುಮೋದನೆ ನೀಡಲಾಗಿದ್ದು ಕೇಂದ್ರ ಕಚೇರಿಯಿಂದ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಕ್ರಮವಹಿಸಲಾಗಿದೆ.
ಪ್ರಾಯೋಜಕತ್ವ ಯೋಜನೆಯಡಿ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗಿದ್ದು, ನಂತರ ಕುಟುಂಬಕ್ಕೆ ಸೇರ್ಪಡೆಯಾದ ಮಕ್ಕಳು, ಮಕ್ಕಳ ಹೆತ್ತವರು ಜೈಲಿನಲ್ಲಿದ್ದರೆ, ಅನಾಥ ಮಕ್ಕಳು, ಏಕಪೋಷಕ ಮಕ್ಕಳಿಗೆ, ಮಿಷನ್ ವಾತ್ಸಲ್ಯ ಯೋಜನೆಯಡಿ ಅದ್ಯತೆಯ ಮೇರೆಗೆ 504 ಮಕ್ಕಳಿಗೆ ಮಾಸಿಕ ರೂ. 4000/- ಗಳಂತೆ ಡಿ.ಬಿ.ಟಿ ಮೂಲಕ ಮಕ್ಕಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
PM CARE ಪ್ರಾಯೋಜಕತ್ವ ಯೋಜನೆಯಡಿ 2 ಫಲಾನುಭವಿಗಳಿಗೆ ತಲಾ 24,000/- ಗಳನ್ನು ಡಿ ಬಿ ಟಿ ಪೋರ್ಟಲ್ ಮೂಲಕ ಅನುಮೋದನೆ ನೀಡಲಾಗಿದ್ದು ಕೇಂದ್ರ ಕಚೇರಿಯಿಂದ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಕ್ರಮವಹಿಸಲಾಗಿದೆ.
ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ತಲಾ 21,000/- ಗಳಂತೆ ಕೋವಿಡ್ – 19 ರ ಕಾರಣದಿಂದ ಪೋಷಕರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳು, ವಿಸ್ತೃತ ಕುಟುಂಬದ ಆರೈಕೆಯಲ್ಲಿ ಪಾಲನೆ ಮತ್ತು ರಕ್ಷಣೆ ಪಡೆಯುತ್ತಿದ್ದು 2 ಫಲಾನುಭವಿಗಳಿಗೆ ಮಾಹೆಯಾನ ರೂ.3500/- ಗಳ ಆರ್ಥಿಕ ಸೌಲಭ್ಯವನ್ನು ನೀಡಲಾಗುತ್ತಿದೆ.
