ದಾವಣಗೆರೆ,ಜನವರಿ.16: ಸಂತ ಸೇವಾಲಾಲ್ ಅವರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದಲ್ಲಿ 287 ನೇ ಜಯಂತಿಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಅತ್ಯಂತ ಶ್ರದ್ಧೆ ಹಾಗೂ ಅದ್ಧೂರಿಯಾಗಿ ಆಚರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಧಾನಸಭಾ ಉಪಸಭಾಪತಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂತ ಸೇವಾಲಾಲ್ ಜಯಂತಿಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಸರ್ವ ಜನಾಂಗದ ಸಹಭಾಗಿತ್ವದೊಂದಿಗೆ ನಡೆಯಲಿದೆ ಎಂದರು.


ಸೂರಗೊಂಡನಕೊಪ್ಪ ಅಭಿವೃದ್ಧಿಗೆ ಹಿಂದೆ 100 ಎಕರೆ ಜಾಗ ಮೀಸಲಿಟ್ಟಿದ್ದರು. ಆದರೆ ಕಾರಣಾಂತರದಿಂದ ಇದು ಅನುಷ್ಟಾನವಾಗಲಿಲ್ಲ, ಈಗಿನ ಸರ್ಕಾರವೂ ಸಹ ಜಯಂತಿಯ ಆಚರಣೆಗೆ ಪೂರ್ಣ ಸಹಕಾರ ನೀಡುತ್ತಿದೆ ಎಮದರು.
ವಸತಿ ಶಾಲೆ ಹಾಗೂ ಮೂಲಭೂತ ಸೌಕರ್ಯ: ಬಂಜಾರ ಸಮುದಾಯ ಕೆಲಸಕ್ಕಾಗಿ ವಲಸೆ ಹೋಗುವುದು ಸಾಮಾನ್ಯವಾಗಿದ್ದು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕೆಂದು ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡಿದಾಗ ಅವರು ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ಮಾದರಿಯ ವಸತಿ ಶಾಲೆಯನ್ನು ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಿದ್ದು ಶಾಲೆ ಆರಂಭವಾಗಿದೆ. ಈಗ ಇಲ್ಲಿ 700ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯಲಿದ್ದಾರೆ. ಇದರ ಕಟ್ಟಡದ ಭೂಮಿ ಪೂಜೆಯನ್ನು ಜಯಂತಿಯ ಸಂದರ್ಭದಲ್ಲೇ ನೆರವೇರಿಸಲಾಗುವುದು ಎಂದರು.
ಪ್ರವಾಸಿ ತಾಣವಾಗಿ ಅಭಿವೃದ್ಧಿ: ಮಹಾರಾಷ್ಟ್ರದ ಪೌರಾಗಡ್ ಮಾದರಿಯಲ್ಲಿ ಸೂರಗೊಂಡನಕೊಪ್ಪವನ್ನು ಅಭಿವೃದ್ಧಿಪಡಿಸುವ ಆಶಯವಿದೆ. ಈಗಾಗಲೇ ಐಟಿಐ ಕಾಲೇಜು ಇದ್ದು, ಮುಂದಿನ ದಿನಗಳಲ್ಲಿ ಪದವಿ ಹಾಗೂ ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿ ಹೊಂದಲಾಗಿದೆ.
ಫೆಬ್ರವರಿ 13ಕ್ಕೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ 1000 ದಿನ ಪೂರೈಸುವ ಹಿನ್ನೆಲೆಯಲ್ಲಿ, ಹಾವೇರಿಯಲ್ಲಿ ಕಂದಾಯ ಗ್ರಾಮಗಳ ನಿವಾಸಿಗಳಿಗೆ 1 ಲಕ್ಷ ಹಕ್ಕುಪತ್ರವನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಫೆಬ್ರವರಿ 14ರಂದು ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿಯಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಸಮುದಾಯಕ್ಕೆ ಮನವಿ: “ಸಮಾಜವನ್ನು ಕಟ್ಟುವ ರಥವನ್ನು ಸಾಧ್ಯವಾದರೆ ಮುಂದೆ ಎಳೆಯಿರಿ, ಇಲ್ಲದಿದ್ದರೆ ಇದ್ದಲ್ಲಿಯೇ ನಿಲ್ಲಿಸಿ. ಆದರೆ ದಯವಿಟ್ಟು ಹಿಂದಕ್ಕೆ ಎಳೆಯಬೇಡಿ” ಎಂಬ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಉಪಸಭಾಪತಿಗಳು, ಸಮುದಾಯದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ಸಂತ ಶ್ರೀ ಸೇವಾಲಾಲ್ ಜಯಂತಿ ಯಶಸ್ವಿ ಆಚರಣೆಗೆ ಭಕ್ತರು ಹಾಗೂ ಸಾರ್ವಜನಿಕರ ಬೆಂಬಲ ಅಗತ್ಯವಾಗಿದೆ. ಎಲರೂ ಸಮರ್ಪಣಾ ಮನೋಭಾವದಿಂದ ಆಗಮಿಸಬೇಕು, ಕ್ಷೇತ್ರದಲ್ಲಿ ಆಗಬೇಕಾದ ಮೂಲಭೂತ ಸೌಕರ್ಯಗಳನ್ನು ಸರ್ಕಾರದ ನೆರವಿನಿಂದ ಕಲ್ಪಿಸಿಕೊಡಲಾಗುತ್ತದೆ. ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು ದೇವಸ್ಥಾನದ ಅಭಿವೃದ್ದಿಗೆ 8 ಎಕರೆ ಜಮೀನು ಮಂಜೂರು ಮಾಡಿ ಆದೇಶಿಸಲಾಗಿದೆ. ಜಯಂತಿಯಂದು ಆಗಮಿಸುವ ಮಾಲಾಧಾರಿಗಳಿಗೆ, ಭಕ್ತಾಧಿಗಳಿಗೆ ಎಲ್ಲಾ ಸೌಲಭ್ಯ ಕಲ್ಪಿಸಲಾಗುತ್ತದೆ. ಜೊತೆಗೆ ಚಿನ್ನಿಕಟ್ಟೆಯಿಂದ ಸೂರಗೊಂಡನಕೊಪ್ಪಕ್ಕೆ ಕೆಎಸ್‍ಆರ್‍ಟಿಸಿ ಯಿಂದ ಎರಡು ಬಸ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದರು.
ಜಿಲ್ಲಾ ಪೆÇಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ ಸೇವಾಲಾಲ್ ಜಯಂತಿ ಸಂರರ್ಭದಲ್ಲಿ ಕೈಗೊಳ್ಳಬೇಕಾದ ಬಂದೋಬಸ್ತ್ ಕುರಿತು ಮಾತನಾಡಿದರು.
ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಯದೇವನಾಯ್ಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಮರಿಯಮ್ಮ ದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಈಶ್ವರ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್, ಹನುಮಂತನಾಯ್ಕ, ಬೋಜ್ಯಾನಾಯ್ಕ, ಸವಿತಾಬಾಯಿ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *