ದಾವಣಗೆರೆ, ಜ.21ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸಲು ಮತ್ತು ಜಿಲ್ಲೆಯನ್ನು ಮೊದಲ 5 ರ ಸ್ಥಾನದಲ್ಲಿರುವಂತೆ ಶಿಕ್ಷಕರು, ಮುಖ್ಯೋಪಾಧ್ಯಯರು ಶ್ರಮವಹಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಅವರು ಬುಧವಾರ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಉಪ ಪ್ರಾಂಶುಪಾಲರ ಸಂಘದ ವತಿಯಿಂದ ಗುರುಭವನದಲ್ಲಿ ಏರ್ಪಡಿಸಿದ್ದ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಪಾಟಿಸಿ ಮಾತನಾಡಿದರು.
ವಿಧ್ಯಾರ್ಥಿಗಳು 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗ ಅವರಿಗೆ ಪ್ರತಿ ವಿಷಯಕ್ಕೆ ಎರಡು ಅಧ್ಯಾಯಗಳ ನಂತರ ಕಿರುಪರೀಕ್ಷೆಗಳನ್ನು ಆಯೋಜಿಸಿ, ನಂತರ ಅವರು ಯಾವ ವಿಷಯದಲ್ಲಿ ಹಿಂದುಳಿದಿರುವ ಬಗ್ಗೆ ಗಮನ ಹರಿಸಿ, ಅವರಿಗೆ ವಿಶೇಷ ತರಗತಿಗಳನ್ನು ಏರ್ಪಡಿಸಿಕೊಂಡು ಬರಬೇಕು, ಅಲ್ಲದೆ ಅವರನ್ನು ಸತತವಾಗಿ ಗಮನಿಸಿದಲ್ಲಿ ಮಾತ್ರ ಆ ವಿದ್ಯಾರ್ಥಿ ಹೆಚ್ಚು ಅಂಕ ಪಡೆಯಲು ಪ್ರಯತ್ನಿಸುತ್ತಾರೆ. ಅದರ ಫಲವನ್ನು ನೀವು ನೋಡಬಹುದು, ಪರೀಕ್ಷೆ ಸಮೀಪದಲ್ಲಿ ನಾವು ಮಕ್ಕಳಿಗೆ ಕಠಿಣ ಪಠ್ಯಕ್ರಮ ನೀಡುವ ಅವಶ್ಯಕತೆ ಇರುವುದಿಲ್ಲ. ಪ್ರತಿ ಶಿಕ್ಷಕರಲ್ಲಿ ನಾವು ಸಾವಿತ್ರಿಭಾಯಿ ಪುಲೆ ಮತ್ತು ಜ್ಯೋತಿಬಾಪುಲೆ ಅವರನ್ನು ಕಾಣುತ್ತೇವೆ, ನೀವು ಅಭ್ಯಾಸಿಸಿ ವಿದ್ಯಾರ್ಥಿಗಳಿಗೆ ಅದನ್ನೆ ಮನದಟ್ಟು ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಪೌರಾಣಿಕ ಕಥೆಗಳು, ಸ್ಪೂರ್ತಿದಾಯಕ ಕಥೆಗಳನ್ನು ಅವರಲ್ಲಿ ತುಂಬಬೇಕು, ಜೊತೆಗೆ ಹೆಚ್ಚು ಅಂಕ ಪಡೆದ ಹಳೆಯ ವಿದ್ಯಾರ್ಥಿಗಳ ಯಶೋಗಾಥೆಯನ್ನು ಅವರಿಗೆ ವಿವರಿಸಿ ಹೇಳಬೇಕು. ಜಿಲ್ಲೆಯಲ್ಲಿ ಕ್ಲಸ್ಟರ್ ಗಳನ್ನು ಮಾಡಿಕೊಂಡು, ಶಿಕ್ಷಕರು ಕೊರತೆ ಇದ್ದಲ್ಲಿ ಹತ್ತಿರದಲ್ಲಿನ ಆಯಾ ವಿಷಯದ ಶಿಕ್ಷಕರನ್ನು ನಿಯೋಜಿಸಬೇಕು. ಎಲ್ಲಾ ಚಟುವಟಿಕೆಗಳನ್ನು ಕೈಗೊಂಡು ಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಉತ್ತಮಗೊಳಿಸಲು ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸುವಂತೆ, ಎಲ್ಲಾ ಶಾಲೆಗಳಲ್ಲಿ ಶೇ. 100 ರಷ್ಟು ಫಲಿತಾಂಶ ಬರಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಶ್ರಮವಹಿಸುವಂತೆ ತಿಳಿಸಿದರು.
ಡಿಡಿಪಿಐ ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಕಳೆದ ಬಾರಿ ರಾಜ್ಯ ಮಟ್ಟದಲ್ಲಿ 24 ನೇ ಸ್ಥಾನ ಪಡೆದಿದ್ದು ಈ ವರ್ಷ ಇನ್ನೂ ಹೆಚ್ಚಿನ ಸ್ಥಾನ ಪಡೆಯಲು ಕ್ರಮವಹಿಸಲಾಗಿದೆ. ಈ ಬಾರಿ ಜೂನ್ ತಿಂಗಳಿಂದ ಕ್ರಿಯಾ ಯೋಜನೆಯನ್ನು ತಯಾರಿಸಿದ್ದು ಡಿಸೆಂಬರ್ ತಿಂಗಳೊಳಗೆ ಪಠ್ಯವನ್ನು ಮುಗಿಸಿದ್ದು ಜನವರಿ ತಿಂಗಳಿಂದ ಪಠ್ಯ ಪುಸ್ತಕ ಆಧಾರಿತ 130-150 ಪ್ರಶ್ನೆಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡಿ ಪ್ರಶ್ನೆಗಳನ್ನು ಯಾವ ರೀತಿ ಉತ್ತರವನ್ನು ಬರೆಯಬೇಕು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ.
ಅನೇಕ ಶಾಲೆಗಳಲ್ಲಿ ಬೆಳಿಗ್ಗೆ 8 ರಿಂದ ಪ್ರಾರಂಭಿಸಿ ರಾತ್ರಿ 8 ರಿಂದ 9 ಗಂಟೆ ಯವರೆಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಹಾಗೂ ರಜೆ ದಿನಗಳಂದು ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಪೆÇೀಷಕರ ಅನುಮತಿ ಪಡೆದು ಬೆಳಿಗ್ಗೆ ಮಕ್ಕಳಿಗೆ 5 ಗಂಟೆಗೆ ಕಾಲ್ ಮಾಡಿ ಓದಲು ಕರೆ ಮಾಡಲಾಗುವುದು. ಈಗಾಗಲೇ ಪರೀಕ್ಷಾ ಮಂಡಳಿ 4 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದು ಅದರ ತಯಾರಿ ಸಹ ವಿದ್ಯಾರ್ಥಿಗಳಿಗೆ ಮಾಡಲಾಗಿದೆ. 3 ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಕ್ರಮವಹಿಸಿ ಈಗ ಒಂದು ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಏರ್ಪಡಿಸಲಾಗಿದೆ. ಪರೀಕ್ಷೆಯನ್ನು ಯಾವ ರೀತಿ ಎದುರಿಸಬಹುದು ಎಂಬುದನ್ನು 36 ಜನ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಅವರಿಂದಲೇ ಯಾವ ರೀತಿ ಉತ್ತರ ಬರೆಯಬೇಕು ಎಂಬುದನ್ನು ತಿಳಿಸಲಾಗುತ್ತಿದೆ. ಪೂರ್ವ ಸಿದ್ಧತಾ ಪರೀಕ್ಷೆ ಯಲ್ಲಿ ಕಡಿಮೆ ಬಂದಿರುವ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಹಾಗೂ ಶೇಕಡಾ 100 ರಷ್ಟು ಫಲಿತಾಂಶ ಬರಲು ಕ್ರಮ ವಹಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ ಶಾಲೆಗಳಿಗೆ ಸ್ಮರಣಿಕೆ ಮತ್ತು ರೂ. 25000/- ನಗದ ಬಹುಮಾನವನ್ನು ವಿತರಿಸಿದರು.
ಸಭೆಯಲ್ಲಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *