ಹೊನ್ನಾಳಿ: ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಕ್ಷೇತ್ರಭೇಟಿ ಕಾರ್ಯಕ್ರಮದ ಅಂಗವಾಗಿ ಇಂದು ಹೊನ್ನಾಳಿಯ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ ಅಗ್ನಿ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಸವಿಸ್ತಾರವಾದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಠಾಣಾಧಿಕಾರಿ ಪರಶುರಾಮ್ ಟಿ.ಆರ್ ಅವರು, ಅಗ್ನಿ ದುರಂತಗಳನ್ನು ಅವುಗಳ ಸ್ವರೂಪಕ್ಕೆ ಅನುಗುಣವಾಗಿ ಎ, ಬಿ, ಸಿ ಮತ್ತು ಡಿ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ ಎಂದು ವಿವರಿಸಿದರು. ಸಾಮಾನ್ಯ ವಸ್ತುಗಳಿಂದ ಉಂಟಾಗುವ ಬೆಂಕಿಯನ್ನು ನೀರಿನ ಮೂಲಕ ಸುಲಭವಾಗಿ ನಂದಿಸಬಹುದಾದರೂ, ಎಣ್ಣೆ ಹಾಗೂ ದಹನಶೀಲ ದ್ರವಗಳಿಂದ ಉಂಟಾಗುವ ಬೆಂಕಿಯನ್ನು ನಂದಿಸಲು ಗಾಳಿಯ ಸಂಪರ್ಕವನ್ನು ಕಡಿತಗೊಳಿಸುವುದು ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ಅನಿಲಗಳಿಂದ ಉಂಟಾಗುವ ಅಗ್ನಿ ಅವಘಡಗಳ ಸಂದರ್ಭದಲ್ಲಿ ತಕ್ಷಣವೇ ಗ್ಯಾಸ್ ಸರಬರಾಜನ್ನು ಸ್ಥಗಿತಗೊಳಿಸಬೇಕು ಹಾಗೂ ವಿದ್ಯುತ್ ಅವಘಡಗಳು ಸಂಭವಿಸಿದಾಗ ಮೊದಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಂತರವೇ ಸೂಕ್ತ ಅಗ್ನಿ ನಂದಕ ಉಪಕರಣಗಳನ್ನು ಬಳಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕೇವಲ ಸೈದ್ಧಾಂತಿಕ ಮಾಹಿತಿಗಷ್ಟೇ ಸೀಮಿತವಾಗದೆ, ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ವಿವಿಧ ಅಗ್ನಿಶಾಮಕ ಉಪಕರಣಗಳನ್ನು ಬಳಸುವ ವಿಧಾನದ ಕುರಿತು ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಿದರು ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ 08188-251400 ಕರೆ ಮಾಡಲು ತಿಳಿಸಿದರು.
ಈ ಭೇಟಿಯ ಮೂಲಕ ವಿದ್ಯಾರ್ಥಿಗಳು ಅಗ್ನಿ ದುರಂತಗಳ ಸಮಯದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಪ್ರತ್ಯಕ್ಷವಾಗಿ ಕಂಡು ತಿಳಿದುಕೊಂಡರು.
ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳಾದ ಗದ್ದಿಗೇಶ್, ನಿರಂಜನ್, ಶ್ರೀನಿವಾಸ್, ಪ್ರದೀಪ್ ಕುಮಾರ್, ಶಶಿಕುಮಾರ್ ಹಾಗೂ ಶಾಲಾ ಶಿಕ್ಷಕರಾದ ಗಿರೀಶ್ ಎನ್.ಎಂ, ಅಶೋಕ್ ಎಚ್, ಸಯ್ಯದ್, ಪರಶುರಾಮ್ ಮತ್ತು ಅನುಷಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *