ದಾವಣಗೆರೆ,ಫೆಬ್ರವರಿ,7: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕದ ಗ್ರಾಮ ಪಂಚಾಯತ್‍ಗಳ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನಗಳನ್ನು ರಾಜ್ಯ ಸರ್ಕಾರ ಬಲವಾಗಿ ವಿರೋಧಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಹೊನ್ನಾಳಿ ತಾಲ್ಲೂಕಿನ ಹೆಚ್.ಗೋಪಗೊಂಡನಹಳ್ಳಿಯಲ್ಲಿ ನಿರ್ಮಾಣ ಮಾಡಿರುವ ನೂತನ ಗ್ರಾಮ ಪಂಚಾಯತ್ ಕಟ್ಟಡ ಹಾಗೂ ಅಂಗನವಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಸ್ವತಃ ಕೇಂದ್ರ ಸರ್ಕಾರದ ಅಧ್ಯಯನ ವರದಿಯೇ ದೃಢಪಡಿಸಿದೆ. ಆದರೆ ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ‘ವಿಕಸಿತ ಭಾರತ್ ಜಿ.ರಾಮ್‍ಜಿ’ ಕಾಯ್ದೆಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇದು ಹಳ್ಳಿಗಳ ಉದ್ಯೋಗದ ಹಕ್ಕನ್ನು ಮತ್ತು ಪಂಚಾಯತ್‍ಗಳ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕಸಿದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪಂಚಾಯತ್‍ಗಳಿಗಿದ್ದ ಸ್ವಾಯತ್ತತೆಯನ್ನು ಹೊಸ ಕಾಯ್ದೆಯ ಮೂಲಕ ನಿಯಂತ್ರಿಸಲು ಹೊರಟಿದೆ. ಕೃಷಿ ಚಟುವಟಿಕೆಗಳ ಅವಧಿಯಲ್ಲಿ 60 ದಿನಗಳ ಕಾಲ ನರೇಗಾ ಕೆಲಸ ನಿμÉೀಧಿಸಿರುವುದು ಮತ್ತು ಗುತ್ತಿಗೆದಾರರ ಹಸ್ತಕ್ಷೇಪಕ್ಕೆ ಅವಕಾಶ ನೀಡಿರುವುದು, ಗ್ರಾಮೀಣ ಕಾರ್ಮಿಕರ ಹಿತಾಸಕ್ತಿಗೆ ಮಾರಕವಾಗಿದೆ.
ಕೇಂದ್ರÀದಿಂದ ರಾಜ್ಯಕ್ಕೆ ಬರಬೇಕಾದ 15ನೇ ಹಣಕಾಸು ಆಯೋಗದ ಅನುದಾನ, ಜೆಜೆಎಂ ಪಾಲಿನ ಹಣ ಹಾಗೂ ನರೇಗಾ ಬಾಕಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಆರ್ಥಿಕ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮಗಳ ವಿರುದ್ಧ ರಾಜ್ಯ ಸರ್ಕಾರವು ಕಾನೂನಾತ್ಮಕ ಮತ್ತು ರಾಜಕೀಯ ಹೋರಾಟವನ್ನು ಮುಂದುವರಿಸಲಿದೆ. ಹಳ್ಳಿಗಳ ಅಭಿವೃದ್ಧಿಯು ಸ್ಥಳೀಯ ತೀರ್ಮಾನಗಳ ಮೂಲಕವೇ ಆಗಬೇಕು ಎಂಬುದು ಸರ್ಕಾರದ ದೃಢ ನಿಲುವಾಗಿದೆ ಎಂದು ಸಮರ್ಥಿಸಿಕೊಂಡರು.
ಗ್ಯಾರಂಟಿ ಯೋಜನೆಗಳ ಸಬಲೀಕರಣ: ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುತ್ತಿದೆ. ಈ ಯೋಜನೆಗಳಿಂದ ಕೋಟ್ಯಂತರ ಕುಟುಂಬಗಳು ಆರ್ಥಿಕ ಶಕ್ತಿಯನ್ನು ಪಡೆದಿದ್ದು, ಇದು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಸಮಾರಂಭದಲ್ಲಿ ಶಾಸಕರಾದ ಜಿ.ಡಿ.ಶಾಂತನಗೌಡ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ , ಡಿ.ಎಸ್.ಅರುಣ್ ಡಾ; ಧನಂಜಯ್ ಸರ್ಜಿ, ಬಯಲು ಸೀಮೆ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಹೆಚ್.ಬಿ.ಮಂಜಪ್ಪ , ಮಾಜಿ ಶಾಸಕರಾದ ಡಾ; ಗಂಗಪ್ಪ, ಆರ್.ಡಿ.ಪಿ.ಆರ್.ಸರ್ಕಾರದ ಕಾರ್ಯದರ್ಶಿ ಸಮೀರ್ ಶುಕ್ಲಾ , ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಸಿಇಒ ಗಿತ್ತೆ ಮಾಧವ್ ವಿಠ್ಠಲ ರಾವ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರಮೀಳಾ ರಮೇಶ್ .ಉಪಸ್ಥಿತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪ್ರಮೀಳಾ ರುದ್ರಯ್ಯ, ಉಪಾಧ್ಯಕ್ಷರಾದ ಆಶಾ ಮಹೇಶ್ವರಪ್ಪ,ಹೊನ್ನಾಳಿ ತಾಲೂಕು ಪಂಚಾಯಿತಿ ಅಧಿಕಾರಿ ಡಿ ಜಿ ಅಶೋಕ್, ನ್ಯಾಮತಿ ತಾಲೂಕ್ ನಿರ್ವಹಣಾಧಿಕಾರಿ ರಾಘವೇಂದ್ರ.H v, ಗ್ರಾಮ ಅಭಿವೃದ್ಧಿ ಅಧಿಕಾರಿ ಭಾರತಿ ಮತ್ತು ಜ್ಯೋತಿ ಎಸ್ ಎಸ್, ಸದಸ್ಯರುಗಳಾದ ಮಂಜುಳಾ, ರಮೇಶ್ ಎಂ ಇ, ಸಂದೀಪ್ ಎಂ, ಸುರೇಶ್ ನಾಯ್ಕ್ ಬಿ ,ಬಸವರಾಜ್, ಹಾಲಮ್ಮ ಪರಮೇಶ್ವರಚಾರ್, ಗುಡ್ಡಾ ಚಾರಿ ,ಮಂಜುಳಾ ಬಾಯಿ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *