ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲರ ಜನ್ಮಸ್ಥಾನ ಭಾಯಾಗಡ್ನಲ್ಲಿ ಶುಕ್ರವಾರ ಸೇವಾಲಾಲರ 287ನೇ ಜಯಂತ್ಯುತ್ಸವದಲ್ಲಿ ಸೇವಾಲಾಲರ ಉತ್ಸವ ಮೂರ್ತಿ, ಮರಿಯಮ್ಮದೇವಿ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.
ಸಪ್ಪ ಮಾತೃಕೆಯರ ಕೊಳದ ಬಳಿ ಪೂಜೆ ಸಲ್ಲಿಸಿ ಸಕಲ ಮಂಗಳ ವಾದ್ಯಗಳೊಂದಿಗೆ, ಕಲಾ ತಂಡದೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರಲಾಯಿತು. ಮೆರವಣಿಗೆಯಲ್ಲಿ ಮಾಲಾಧಾರಿಗಳು ಭಕ್ತಿ ಪರವಶರಾಗಿ ಭಜನೆ ಹಾಡುತ್ತ ಕುಣಿಯುತ್ತ ಸಾಗಿದರು. ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು.
ಪವಿತ್ರ ವೃಕ್ಷದ ಬಳಿ ಸಾವಿರಾರು ವ್ರತಕೈಗೊಂಡ ಮಾಲಾಧಾರಿಗಳು ಹೂವಿನಹಡಗಲಿ ಧರ್ಮಗುರು ಹೀರಾನಾಯ್ಕ ಅವರ ಸಮ್ಮುಖದಲ್ಲಿ ರುದ್ರಾಕ್ಷಿಸರವನ್ನು ಧಾರ್ಮಿಕ ವಿಧಿಗಳೊಂದಿಗೆ ವಿಸರ್ಜನೆ ಮಾಡಿದರು.
ರಾಜ್ಯದ ವಿವಿಧ ಭಾಗಗಳಿಂದ ಭಾಯಾಗಡ್ಗೆ ಲಕ್ಷಾಂತರ ಭಕ್ತಸಾಗರ ಹರಿದು ಬರುತ್ತಿದೆ. ಮಾಲಾಧಾರಿಗಳು ಪಾದಯಾತ್ರೆ ಮೂಲಕ ಬಂದರೆ, ಇನ್ನುಳಿದ ಭಕ್ತರು ವಿವಿಧ ವಾಹನಗಳಲ್ಲಿ ಆಗಮಿಸುತ್ತಿದ್ದು, ಭಾಯಾಗಡ್ನಲ್ಲಿ ಭಕ್ತರು ಜಯ್ ಸೇವಾಲಾಲ್ ಮಹಾರಾಜ್ ಎಂಬ ಘೋಷಣೆ ಮುಗಿಲು ಮುಟ್ಟುವಂತಿದೆ.
ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಶೌಚಾಲಯ ವ್ಯವಸ್ಥೆ, ಸಾರಿಗೆ,ಬೆಳಕಿನ ವ್ಯವಸ್ಥೆ ಹಾಗೂ ಆಯ್ದ ಭಾಗಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್ಗಳ ಮೂಲಕ ನೀರಿನ ವ್ಯವಸ್ಥೆ ಹಾಗೂ ತಾಂಡ ಅಭಿವೃದ್ದಿ ನಿಗಮದಿಂದ ಮಜ್ಜಿಗೆ ವಿತರಣೆ ಮಾಡಲಾಯಿತು.
