ನ್ಯಾಮತಿ; ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಉಳಿದ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ಮೇಲೆ ಗಮನಹರಿಸುವುದಾಗಿ ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪಕ್ಕದಲ್ಲಿ ರೂ. 3 ಕೋಟಿ ಅಂದಾಜಿನ ನೂತನ 2ನೇ ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಗ್ನಿಶಾಮಕ ಠಾಣೆ ಕಾಮಗಾರಿಗೆ ಸರ್ಕಾರದ ಹಂತದಲ್ಲಿ ಪ್ರಯತ್ನಿಸಿ ಮಂಜೂರು ಮಾಡಿಸಿದ್ದು, ಅಗ್ನಿಶಾಮಕ ಕಟ್ಟಡ ನಿರ್ಮಾಣವಾಗಲಿದ್ದು, ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು, ಕಾಲೇಜು ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮತ್ತು ಎಚ್.ಶಿವಾನಂದಪ್ಪ ಬಡಾವಣೆ ರಸ್ತೆ ಮತ್ತು ಚರಂಡಿಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದರು.
ಸರ್ಕಾರಿ ಸಾರಿಗೆ ಬಸ್‍ಗಳ ಸಂಚಾರವನ್ನು ಹೆಚ್ಚಿಸುವಂತೆ ಕಾಂಗ್ರೆಸ್ ಯುವ ಮುಖಂಡರು ಶಾಸಕರ ಗಮನಕ್ಕೆ ತಂದಾಗ ಆದಷ್ಟು ಬೇಗನೆ ನ್ಯಾಮತಿಯಲ್ಲಿ ಡಿಪೋ ವ್ಯವಸ್ಥಾಪಕ ಸಭೆ ಕರೆದು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.
ಅಗ್ನಿಶಾಮಕ ಠಾಣೆ ಕಟ್ಟಡ ಕಾಮಗಾರಿಯನ್ನು 11 ತಿಂಗಳೊಳಗಾಗಿ ನಿರ್ಮಿಸಲು ಸಮಯ ನಿಗದಿಯಾಗಿದೆ, ಉತ್ತಮ ಕಟ್ಟಡ ನಿರ್ಮಣ ಮಾಡುವುದಾಗಿ ಹೊಸದುರ್ಗ ಆರ್ಕ ಕನ್‍ಸ್ಟ್ರಕ್ಷನ್ ಗುತ್ತಿಗೆದಾರ ಎಂಜಿನಿಯರ್ ಶ್ರುತಿ ತಿಳಿಸಿದರು.
ಹೊಸದುರ್ಗ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಮುಖಂಡರಾದ ಜಿ.ರಾಜೇಂದ್ರ ಮತ್ತು ಹೊಸಮನೆ ಮಲ್ಲಿಕಾರ್ಜುನ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಎನ್.ನಾಗೇಶ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತಕುಮಾರ, ಹೊನ್ನಾಳಿ ಅಗ್ನಿಶಾಮಕ ಠಾಣಾಧಿಕಾರಿ ಟಿ.ಆರ್.ಪರಶುರಾಮಪ್ಪ, ಪ್ರಮುಖರಾದ ಬಸವರಾಜ ಬಿ ಅಕ್ಕಣ್ಣನವರ, ಲಿಂಗರಾಜ, ಭೀಮಸೇನ, ಗಂಗಾನಾಯ್ಕ, ಜಿ.ಎಂ.ವಿನಯ, ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಶಿವಕುಮಾರ, ಮುಖಂಡರಾದ ಕೋಡಿಕೊಪ್ಪ ಶಿವಪ್ಪ, ಎನ್.ಕೆ.ವೇದಮೂರ್ತಿ, ಎನ್.ಡಿ.ಪಂಚಾಕ್ಷರಪ್ಪ, ಬುಡ್ಡಪ್ಪ, ರೆಡ್ಡಿ ಸುರೇಶ, ಎಂ.ನಿತಿನ್, ಎಂ.ಮಿಥುನ, ಯತೀಶ ಗಾದೇರ, ವಾಲ್ಮೀಕಿ ಷಣ್ಮುಖ, ಸುನೀತಾ, ಶಾಂತಮ್ಮ, ಜಿ.ಲೋಕೇಶ, ರವಿ ತೋಂಟದಾರ್ಯ, ಸೋಮಶೇಖರಪ್ಪ, ಪುರೋಹಿತ ಪವನಕುಮಾರ ಉಪಸ್ಥಿತರಿದ್ದರು.
