ನ್ಯಾಮತಿ: ತಾಲ್ಲೂಕಿನ ಸೂರಗೊಂಡನಕೊಪ್ಪ ಸಂತ ಸೇವಾಲಾಲ ಜನ್ಮಸ್ಥಾನ ಭಾಯಾಗಡ್‍ನಲ್ಲಿ ಫೆ. 14ರಂದು ನಡೆದ ಸಂತ ಸೇವಾಲಾಲರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ದ ಕಪ್ಪುಪಟ್ಟಿ ಪ್ರದರ್ಶನ ಮಾಡಿದವರ ಮೇಲೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಕೈ ಬಿಡುವಂತೆ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಯ್ಕ ಮಾತನಾಡಿ, ಅವೈಜ್ಞಾನಿಕ ಒಳಮೀಸಲಾತಿ ವರ್ಗಿಕರಣದಿಂದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿರುವುದನ್ನು ಖಂಡಿಸಿ ಕಪ್ಪುಪಟ್ಟಿ ಪ್ರದರ್ಶನ ಮಾಡಿದ್ದಾರೆಯೇ ಹೊರತು ಉಪಮುಖ್ಯಮಂತ್ರಿ, ಸಚಿವರಿಗೆ, ಸಂಸದರಿಗೆ , ಶಾಸಕರಿಗೆ ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಮತಿ ಪೊಲೀಸ್ ಠಾಣೆಯಲ್ಲಿ 30 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಿ ತದನಂತರ ಬಿಡುಗಡೆ ಮಾಡಲಾಗಿದೆ. ಬಂಜಾರ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ದ ಈ ರೀತಿಯ ಆಕ್ರೋಶ ವ್ಯಕ್ತವಾಗಿದ್ದು, ವೈಯಕ್ತಿಕವಾಗಿ ಯಾರನ್ನು ನಿಂದಿಸುವ ಅಥವಾ ಅವಮಾನಿಸುವ ಉದ್ದೇಶ ಇರಲಿಲ್ಲ. ಆದ್ದರಿಂದ ರಾಜ್ಯದ ಗೃಹಮಂತ್ರಿಗಳು, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಾಖಲಾಗಿರುವ ಮೊಕದ್ದಮೆಯನ್ನು ವಾಪಸ್ ಪಡೆಯಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರುದ್ರೇಶನಾಯ್ಕ, ಕಾರ್ಯದರ್ಶಿ ನಾಗರಾಜ ಸ.ಎಂ.ನಾಯ್ಕ, ಉಪಾಧ್ಯಕ್ಷ ರಾಕೇಶನಾಯ್ಕ, ಖಜಾಂಚಿ ಕುಮಾರನಾಯ್ಕ, ಮಹೋಹರನಾಯ್ಕ, ಶಿವರಾಜನಾಯ್ಕ, ವೆಂಕಟೇಶನಾಯ್ಕ, ಕಿರಣ್‍ನಾಯ್ಕ, ಪೀರುನಾಯ್ಕ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *