“ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಬನ್ನಿ”
“ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ
“ಗೃಹಿಣೀ ಗೃಹಮುಚ್ಯತೇ ಅರ್ಪಿತಾ ದೇಶಮ್ ಉಚ್ಯತೇ”

ಅರ್ಥಾತ್ ಎಲ್ಲಿ ನಾರಿಯರನ್ನು ಪೂಜ್ಯ ಭಾವನೆಯಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಹೌದು ನಮ್ಮ ದೇಶ ಸಮಾಜದಲ್ಲಿ ಸ್ತ್ರೀಗೆ ಪೂಜ್ಯನೀಯ ಸ್ಥಾನ ನೀಡಿದ್ದೇವೆ. ಏಕೆಂದರೆ ನಮ್ಮ ದೇಶದ ಸಂಸ್ಕೃತಿಯೇ ಅಂತದ್ದು. ಸ್ತ್ರೀಯ ತ್ಯಾಗ,ಸೇವೆ, ಆದರ್ಶಗಳೇ ಅಂತದ್ದು. ಹೆಣ್ಣಿನ ರೂಪ, ನೀತಿ, ನಿಷ್ಪಕ್ಷಪಾತ, ಅತಿಥಿಸತ್ಕಾರ, ಪಾಲನೆ ಪೋಷಣೆ, ಸಹನಾಶೀಲತೆ, ಸಾಂತ್ವನಗಳ ನಿಧಿ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಈಕೆಯನ್ನು “ಕಾರ್ಯೆಷು ದಾಸಿ, ಕರುಣೇಶು ಮಂತ್ರಿ, ಭೋಜೇಷು ಮಾತಾ, ರೂಪೇಶು ಲಕ್ಷ್ಮಿ, ಕ್ಷಮಯಾ ಧರಿತ್ರಿ” ಎಂದು ಕರೆದು ಪೂಜ್ಯನೀಯ ಸ್ಥಾನ ನೀಡಿದ್ದೇವೆ. ಈ ಜಗತ್ತಿನಲ್ಲಿ ಮಹಿಳಾ ಜೀವನದ ಮಹತ್ವ ಎತ್ತಿ ಹಿಡಿಯುವ ದೃಷ್ಟಿಯಿಂದ ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವ ಮಹಿಳಾ ದಿನ ಆಚರಿಸುತ್ತೇವೆ.

12ನೇ ಶತಮಾನದಲ್ಲಿ ಮಹಾ ಮಾನವತಾವಾದಿ ಬಸವಣ್ಣನವರ ಪ್ರಭಾವ, ಅಲ್ಲಮಪ್ರಭುವಿನ ಮಾರ್ಗದರ್ಶನದಲ್ಲಿ ಮಹಿಳೆಗೆ ಅಭಿವ್ಯಕ್ತಿ ಸ್ವಾತಂತ್ರ ಸಿಕ್ಕು ವಚನ ಸಾಹಿತ್ಯ ಸೃಷ್ಟಿಸಿ ಮಾನವೀಯ ಮೌಲ್ಯ ಪ್ರಚಾರ ಮಾಡಿದರು. ನಂತರ 19ನೇ ಶತಮಾನದ ಹೊತ್ತಿಗೆ ಮಹಿಳೆಯು ಕೌಟುಂಬಿಕ ಕ್ಷೇತ್ರಕ್ಕೆ ಸೀಮಿತವಾದದ್ದು ದೌರ್ಬಲ್ಯ. 1975ರಲ್ಲಿ ವಿಶ್ವ ಸಂಸ್ಥೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಘೋಷಣೆ ನಂತರ ಮಹಿಳೆಗೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಕ್ಕುಗಳು ದೊರೆಯುವಂತಾದದ್ದು ಸತ್ಯ. ಆದರೂ ಲಿಂಗ ತಾರತಮ್ಯ ಸಮಸ್ಯೆ, ಸ್ತ್ರೀಯ ಶಿಕ್ಷಣ, ನಿರ್ಲಕ್ಷತೆ, ಸ್ತ್ರೀ ಮೇಲಿನ ದೌರ್ಜನ್ಯ, ಅತ್ಯಾಚಾರ, ಸ್ತ್ರೀ ಅಪಹರಣ, ಸಾಂಸಾರಿಕ ದೌರ್ಜನ್ಯಗಳನ್ನು ಸ್ತ್ರೀ ಇಂದಿಗೂ ಎದುರಿಸುತ್ತಿದ್ದಾಳೆ. ಇದು ನಿಲ್ಲುವುದು ಯಾವಾಗ?

ನಾಗರಿಕತೆ ಮುಂದುವರಿದ ಹಾಗೆ ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಸಬಲೀಕರಣ, ಜಾಗತೀಕರಣದಿಂದಾಗಿ ಇಂದು ಆದರ್ಶವೆಂಬ ಪದ ಅರ್ಥ ಕಳೆದುಕೊಳ್ಳುತ್ತಿದೆ. ಮನಸ್ಸಿನ ಮೂಲೆಯಲ್ಲಿ ಕೂಡಿ ಬಾಳುವಾಸೆ ಇದ್ದರೂ ಸ್ವಾರ್ಥ, ದ್ವೇಷ, ಅಸೂಯೆಗಳೇ ಅವಿಭಕ್ತ ಕುಟುಂಬಗಳನ್ನು ಕಡಿಮೆ ಮಾಡುತ್ತಿವೆ. ಸ್ತ್ರೀಯ ವೈಯಕ್ತಿಕ ಸಾಧನೆಗೆ ಪ್ರೇರಣೆಗೆ ಸಹಕಾರಕ್ಕೆ ಯಾರ ಅಡ್ಡಿ ಇದೆ? ತ್ಯಾಗ, ಸೇವೆ, ಆದರ್ಶ, ಶಿಸ್ತು, ಶ್ರದ್ಧೆ, ಸ್ತ್ರೀಯನ್ನು ಉನ್ನತ ಮಟ್ಟಕ್ಕೆ ಏರಿಸಬಲ್ಲದು. ಹುಟ್ಟಿಸಿದ ದೇವರು ಹುಲ್ಲಿನ ವ್ಯವಸ್ಥೆ ಮಾಡಿರುತ್ತಾನೆ. ಆದರೆ ಹಸು ಹುಡುಕಿ ಮೇಯುವ ಕೆಲಸ ಮಾಡಬೇಕು ಇದು ನಿಯಮ. ನಿಯಮದಂತೆ ಸ್ತ್ರೀಯ ವೈಯಕ್ತಿಕ ಸಾಧನೆಗಳಿಂದ ಗುರುತಿಸೋಣ. ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ, ಸೊಸೆಯಾಗಿ, ಸಮಾಜ ಸೇವಕಿಯಾಗಿ, ನಿಸ್ವಾರ್ಥ ವೈಯಕ್ತಿಕ ಸಾಧನೆ ಗೈಯುತ್ತಿದ್ದಾಳೆ. ಇಂಥ ಸಾಧಕ ಮಹಿಳೆಯರನ್ನು ಗುರುತಿಸುವ ಕಾರ್ಯವನ್ನು ಶಿಕಾರಿಪುರ ಕರ್ನಾಟಕ ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ, ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಧರ್ಮಪರ್ವ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ, ಸಹಕಾರ ಸಂಘಗಳ ಜನಕ, ಸಹಕಾರ ರತ್ನ, B.D. ಭೂಕಾಂತ್ ಮಾರ್ಗದರ್ಶನದಲ್ಲಿ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ 08-03-2026ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿದೆ. ಮಹಿಳೆಯರಿಗಾಗಿಯೇ ನಡೆಯುವ ಈ ಕಾರ್ಯಕ್ರಮದಲ್ಲಿ ರೈತ ಗೀತೆ, ಸಮೂಹ ಗೀತೆ, ಭರತನಾಟ್ಯ,ಕೋಲಾಟ, ಜಾನಪದ ನೃತ್ಯ, ಭಜನೆ, ಯಕ್ಷಗಾನ, ಮುಂತಾದವು ನಮ್ಮನ್ನು ರಂಜಿಸಲಿವೆ. ಪ್ರೇಮವನ್ನು ನಿಂದನೆಯನ್ನು ಸಮವಾಗಿ ಸ್ವೀಕರಿಸಿದ ನೂರಕ್ಕೂ ಹೆಚ್ಚು ಮಹಿಳಾ ಸಾಧಕಿಯರಿಗೆ ಸನ್ಮಾನಿಸಲಾಗುತ್ತಿದೆ. ಇದರಲ್ಲಿ ವೈಯಕ್ತಿಕ ಸಾಧನೆಗೈದ ಮಹಿಳೆಯರಿದ್ದಾರೆ,
ನೂರಾರು ಉಳಿ ಏಟು ತಿಂದು ಶಿಲೆಗಳಾಗಿ ಸಾಧನೆಗೈದ ಮಹಿಳೆಯರಿದ್ದಾರೆ,ಸಾಧನೆಗೆ ಅಡ್ಡಿ ಬಂದವರಿಗೆ ಗುಟುರು ಹಾಕುವ ಗೂಳಿಯಂತೆ ಹೂಂಕರಿಸಿ ಹಿಮ್ಮೆಟ್ಟಿಸಿ ಸಾಧನೆಗೈದವರಿದ್ದಾರೆ, ಸಾಧನೆಗೆ ಎದುರು ಬಂದ ಕೋಣನ ಕೊಂಬು ಹಿಡಿದು ಮೈಸವರಿ ಪಕ್ಕಕ್ಜೆ ಸರಿಸಿ ಮುಂದೆ ಹೋದ ಮಹಿಳೆಯರಿದ್ದಾರೆ, ಜನರೆಸೆದ ಕಲ್ಲುಗಳನ್ನು ಕೈಯಲ್ಲಿ ಹಿಡಿದು ಸರಕ್ಕನೆಂದು ಮುಂದೆ ಸಾಗಿದ ಮಹಿಳೆಯರಿದ್ದಾರೆ. ಹೀಗಾಗಿಯೇ ‘ಧೈರ್ಯಂ ಸರ್ವತ್ರ ಸಾಧನಂ’ ಹೀಗೆ ಸಾಧನೆಗೈದ ಈ ಮಹಿಳೆಯರನ್ನು ಹರಸಿ ಒಂದು ಚಪ್ಪಾಳೆ ತಟ್ಟಿ ಆಶೀರ್ವದಿಸೋಣ ಬನ್ನಿ.

ಚಿಕ್ಕಜೋಗಿಹಳ್ಳಿ ನಾಗರಾಜ ಕಲಾವಿದರು, ಲೇಖಕರು, ಹೊನ್ನಾಳಿ.
ದೂ:9449093902

Leave a Reply

Your email address will not be published. Required fields are marked *