ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಜಿಲ್ಲಾ ಸ್ವೀಪ್ (SVEEP) ಸಮಿತಿಯು ಸಮರೋಪಾದಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದರು.
ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಸಂಬಂಧ ಭಾರತ್ ಕಾಲೋನಿ ಮತ್ತು ಬಸಾಪುರ ನಗರಗಳಲ್ಲಿ ಹಮ್ಮಿಕೊಂಡಿದ್ದ ವಾಕ್ ಥಾನ್ ಗೆ ಚಾಲನೆ ನೀಡಿ ಮಾತನಾಡಿದರು.
ಮತದಾರರಲ್ಲಿ ಅರಿವು ಮೂಡಿಸಲು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಪ್ರತಿದಿನವೂ ವಿಭಿನ್ನ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ವಾಕಥಾನ್, ಸೈಕಲ್ ರ್ಯಾಲಿ, ಬೈಕ್ ರ್ಯಾಲಿ, ಚುಂಬಾ ಡ್ಯಾನ್ಸ್ ಹಾಗೂ ಕ್ಯಾಂಡಲ್ ಲೈಟ್ ಮೆರವಣಿಗೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ, ಮತದಾರರಿಗೆ ಪೂರಕ ವಾತಾವರಣ ಕಲ್ಪಿಸಲು ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ, ಮಹಿಳಾ ಮತದಾರರನ್ನು ಪ್ರೋತ್ಸಾಹಿಸಲು ಮಹಿಳಾ ಸಿಬ್ಬಂದಿಗಳೇ ನಿರ್ವಹಿಸುವ ಮತಗಟ್ಟೆ, ವಿಕಲಚೇತನರಿಗೆ ಸುಲಭವಾಗಿ ಮತದಾನ ಮಾಡಲು ಬೇಕಾದ ಅಗತ್ಯ ಸೌಲಭ್ಯಗಳಿರುವ ಕೇಂದ್ರ, ಯುವ ಮತಗಟ್ಟೆ: ಮೊದಲ ಬಾರಿಗೆ ಮತದಾನ ಮಾಡುವ ಯುವ ಸಮೂಹಕ್ಕೆ ಸ್ಫೂರ್ತಿ ತುಂಬಲು ‘ಫೀಲ್ ಗುಡ್’ (Feel Good) ಪರಿಕಲ್ಪನೆಯಡಿ ಯುವ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಗಿತ್ತೆ ಮಾಧವ ವಿಠಲ ರಾವ್ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಮತದಾನದ ಪ್ರಮಾಣವು ಶೇ. 80 ರಿಂದ 90 ರಷ್ಟಿದ್ದರೂ, ನಗರದ ಕೆಲವು ಬೂತ್ಗಳಲ್ಲಿ ಶೇ. 49 ರಷ್ಟು ಕಡಿಮೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶದ ಮತದಾರರನ್ನು ಸೆಳೆಯಲು ವಿಶೇಷ ಒತ್ತು ನೀಡಲಾಗುತ್ತಿದೆ. ಮತದಾನವು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ಎಲ್ಲಾ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಮೇ 9 ರಂದು ತಪ್ಪದೇ ಮತಗಟ್ಟೆಗೆ ಬಂದು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕೆಂದು ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಮನವಿ ಮಾಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ವಾಕ್ ಥಾನ್ ನಲ್ಲಿ ಭಾಗವಹಿಸಿದ್ದರು.
