ದಾವಣಗೆರೆ, ಮೇ07ಚೀಟಿ ಅವಧಿ ಮುಕ್ತಾಯವಾದರೂ ಹಣ ಮರುಪಾವತಿಸದೆ ಸೇವಾ ನ್ಯೂನತೆ ಎಸಗಿದ ಚನ್ನಗಿರಿಯ ನಿತ್ಯೋತ್ಸವ ಚಿಟ್ ಫಂಡ್ ಪ್ರೈ.ಲಿ. ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರೀ ದಂಡ ವಿಧಿಸಿದೆ. ಚನ್ನಗಿರಿಯ ಶ್ರೀಮತಿ ಜಬೀನ್ ಖಾನಂ ಅವರು ಸದರಿ ಸಂಸ್ಥೆಯಲ್ಲಿ 50 ಲಕ್ಷ ರೂ. ಮೊತ್ತದ ಚೀಟಿಗೆ ಮಾಸಿಕ 2 ಲಕ್ಷ ರೂ. ನಂತೆ 25 ಕಂತುಗಳನ್ನು ಪಾವತಿಸಿದ್ದರು. ಚೀಟಿ ಮುಕ್ತಾಯದ ನಂತರ ಹಣ ನೀಡದ ಸಂಸ್ಥೆಯ ವಿರುದ್ಧ ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಕುಮಾರಿ ಹೆಚ್.ಎನ್. ಮೀನಾ ಹಾಗೂ ಸದಸ್ಯರಾದ ಶ್ರೀ ಸಿ.ಎಸ್. ತ್ಯಾಗರಾಜನ್ ಅವರು, ದೂರುದಾರರಿಗೆ 50 ಲಕ್ಷ ರೂ. ಅಸಲು ಹಣವನ್ನು ಶೇ. 9 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಆದೇಶಿಸಿದ್ದಾರೆ. ಜೊತೆಗೆ, ಮಾನಸಿಕ ಯಾತನೆ ಮತ್ತು ದೂರು ವೆಚ್ಚಕ್ಕಾಗಿ 35,000 ರೂ. ಪರಿಹಾರವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
