ಜಿಲ್ಲೆಯಲ್ಲಿ ತಂಬಾಕು ಬಳಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ದಾವಣಗೆರೆ ಜಿಲ್ಲೆಯನ್ನು ಸಂಪೂರ್ಣ ತಂಬಾಕು ಮುಕ್ತ ಜಿಲ್ಲೆಯನ್ನಾಗಿಸುವ ಯುವ ಪೀಳಿಗೆಯನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಜೂನ್ ತಿಂಗಳಾದ್ಯಂತ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಮತ್ತು ಜಿಲ್ಲೆಯ 10 ಹಳ್ಳಿಗಳನ್ನು ತಂಬಾಕು ಮುಕ್ತ ಹಳ್ಳಿಗಳೆಂದು ಘೋಷಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಡಿ ಹಮ್ಮಿಕೊಳ್ಳಲಾಗಿದ್ದ ಪ್ರಸಕ್ತ ಸಾಲಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಜೂನ್ 1 ರಿಂದ ಜೂನ್ 30 ರವರೆಗೆ ಒಂದು ತಿಂಗಳ ಕಾಲ ಜಿಲ್ಲಾದ್ಯಂತ ವಿಶೇಷ ತಂಬಾಕುಮುಕ್ತ ಅಭಿಯಾನ ನಡೆಯಲಿದೆ. “ಆಕರ್ಷಕ ಮುಖವಾಡವನ್ನು ಕಳಚುವುದು: ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ತಡೆಯುವುದು“ ಎಂಬ ಪ್ರಸಕ್ತ ಸಾಲಿನ ಧ್ಯೇಯವಾಕ್ಯದೊಂದಿಗೆ ಯುವ ಪೀಳಿಗೆಯನ್ನು ತಂಬಾಕು ಮುಕ್ತಗೊಳಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ದಾವಣಗೆರೆ ತಾಲ್ಲೂಕಿನ ಒಪ್ಪನನಹಳ್ಳಿ ಒಂಟಿಹಾಳ್, ಉಳುಪಿನಕಟ್ಟೆ, ಸುಲ್ತಾನಿಪುರ; ಹರಿಹರ ತಾಲ್ಲೂಕಿನ ತಿಮ್ಮಲಾಪುರ; ಹೊನ್ನಾಳಿ ತಾಲ್ಲೂಕಿನ ಹಟ್ಟಿಹಾಳ್ ಹಾಗೂ ಜಗಳೂರು ತಾಲ್ಲೂಕಿನ ನರೇನಹಳ್ಳಿ ಸೇರಿದಂತೆ ಒಟ್ಟು 7 ಗ್ರಾಮಗಳಲ್ಲಿ ತಂಬಾಕು ನಿಯಂತ್ರಣ ನಿಯಮಾವಳಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಮೇ 31 ರಂದು ಈ ಗ್ರಾಮಗಳ ಪ್ರವೇಶದ್ವಾರದಲ್ಲಿ ‘ತಂಬಾಕು ಮುಕ್ತ ಗ್ರಾಮ‘ ಎಂಬ ಸ್ವಾಗತ ಫಲಕಗಳನ್ನು ಅಳವಡಿಸಿ, ಸ್ಥಳೀಯರ ಸಮ್ಮುಖದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗುವುದು. ಉಳಿದ 3 ಗ್ರಾಮಗಳನ್ನು ಜೂನ್ ಅಂತ್ಯದೊಳಗೆ ತಂಬಾಕು ಮುಕ್ತವೆಂದು ಘೋಷಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಂಬಾಕು ಮಾರಾಟ ಮಾಡುವ ಅಂಗಡಿಗಳು ಶಾಲಾ-ಕಾಲೇಜುಗಳಿಂದ ಕನಿಷ್ಠ 100 ಮೀಟರ್ ದೂರವಿರಬೇಕು. ಅಂಗಡಿಗಳ ಮುಂದೆ “ಇಲ್ಲಿ ಧೂಮಪಾನ ನಿಷೇಧಿಸಲಾಗಿದೆ” ಮತ್ತು “21 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರಾಟ ಮಾಡಲಾಗುವುದಿಲ್ಲ” ಎಂಬ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50 ಹಾಗೂ ಪುರಸಭೆ/ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 25 ತಂಬಾಕು ಮಾರಾಟ ಪರವಾನಗಿಗಳನ್ನು (Tobacco Vending License) ನೀಡುವ ಗುರಿ ಹೊಂದಲಾಗಿದ್ದು, ಕಿರಾಣಿ ಅಂಗಡಿಗಳ ಟ್ರೇಡ್ ಲೈಸೆನ್ಸ್ ಜೊತೆಗೆ ತಂಬಾಕು ಲೈಸೆನ್ಸ್ ಅನ್ನು ಕಡ್ಡಾಯವಾಗಿ ಜೋಡಿಸಲು ಸೂಚಿಸಲಾಗಿದೆ. ಕೋಟ್ಪಾ ಕಾಯ್ದೆಯಡಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತನಿಖಾ ದಳ ರಚಿಸಿ, ವಾರಕ್ಕೆ ಎರಡು ಬಾರಿ ಜಂಟಿ ದಾಳಿ ನಡೆಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜುಗಳನ್ನು ತಂಬಾಕು ಮುಕ್ತಗೊಳಿಸಲು ಹಾಗೂ ವಿದ್ಯಾರ್ಥಿಗಳಿಂದ ತಂಬಾಕು ಮುಕ್ತ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಗಿದೆ. ತಂಬಾಕುಮುಕ್ತ ಶೈಕ್ಷಣಿಕ ಸಂಸ್ಥೆ (TOFEI) ಆಪ್‌ನಲ್ಲಿ ಕಳೆದ ವರ್ಷ ಜಿಲ್ಲೆಯು ಶೇ. 70 ರಷ್ಟು ಪ್ರಗತಿ ಸಾಧಿಸಿದ್ದು, ಈ ವರ್ಷ ಜೂನ್ 30 ರೊಳಗಾಗಿ ಜಿಲ್ಲೆಯ ಎಲ್ಲಾ ಮುಖ್ಯೋಪಾಧ್ಯಾಯರುಗಳು ಈ ಆಪ್ ಅನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡು ಶೇ. 100 ರಷ್ಟು ಪ್ರಗತಿ ದಾಖಲಿಸುವಂತೆ ಡಿಡಿಪಿಐ ರವರಿಗೆ ಸೂಚಿಸಿದರು. ಇದೇ ವೇಳೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲೂ ಪ್ರತಿಜ್ಞಾವಿಧಿ ಹಮ್ಮಿಕೊಳ್ಳಲು ತಿಳಿಸಲಾಯಿತು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ರಾಘವನ್ ಜಿ.ಡಿ ಅವರು, ತಂಬಾಕು ನಿಯಂತ್ರಣ ಕೋಶದ ವತಿಯಿಂದ 63 ಜಂಟಿ ದಾಳಿ ನಡೆಸಿ ರೂ. 1,30,750/-, ಪೊಲೀಸ್ ಇಲಾಖೆ ವತಿಯಿಂದ 7,105 ಪ್ರಕರಣಗಳಲ್ಲಿ ರೂ. 7,54,240/- ಹಾಗೂ ಮಹಾನಗರ ಪಾಲಿಕೆ ವತಿಯಿಂದ 397 ಪ್ರಕರಣಗಳನ್ನು ದಾಖಲಿಸಿ ರೂ. 94,300/- ಗಳ ದಂಡ ವಸೂಲಿ ಮಾಡಲಾಗಿದೆ. ಸಿ.ಜೆ.ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಲ್ಲಿ 12,653 ವ್ಯಸನಿಗಳನ್ನು ತಪಾಸಣೆಗೊಳಪಡಿಸಲಾಗಿದ್ದು, 5,734 ಜನರಿಗೆ ಕೌನ್ಸಿಲಿಂಗ್ ಮಾಡಲಾಗಿದೆ. ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ (NRT) ಮೂಲಕ ಈ ವರ್ಷ 59 ಜನರು ಯಶಸ್ವಿಯಾಗಿ ತಂಬಾಕು ವ್ಯಸನದಿಂದ ಮುಕ್ತರಾಗಿದ್ದಾರೆ ಮತ್ತು ಗ್ರಾಮ ಮಟ್ಟದಲ್ಲಿ ಸಭೆ ಮತ್ತು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ತನಿಖಾ ದಾಳಿಗಳು ಸಮರ್ಪಕವಾಗಿ ನಡೆಸಲಾಗುತ್ತಿದೆ ಎಂದು ಸಭೆಗೆ ವಿವರಿಸಿದರು.
ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ: ಎಎಸ್ಪಿ
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ. ಪ್ರಸಕ್ತ ವರ್ಷದಲ್ಲಿ ಈಗಾಗಲೇ 3,700 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಸರಾಸರಿ ತಿಂಗಳಿಗೆ 950 ಪ್ರಕರಣಗಳು ದಾಖಲಾಗುತ್ತಿವೆ. ರೈಲ್ವೆ ಸುರಕ್ಷತಾ ಮಂಡಳಿ ಹಾಗೂ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲು ಇಲಾಖೆ ಸಿದ್ಧವಿದೆ ಎಂದರು.
ವಿಶೇಷವಾಗಿ ಸಂಜೆ 6 ಗಂಟೆಯ ನಂತರ ಶಾಲಾ-ಕಾಲೇಜುಗಳ ಸುತ್ತಮುತ್ತ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಅಕ್ರಮ ದಾಸ್ತಾನು ಅಥವಾ ಸಾಗಾಟದ ಮಾಹಿತಿ ಇದ್ದಲ್ಲಿ ಧೈರ್ಯವಾಗಿ ಇಲಾಖೆಯೊಂದಿಗೆ ಹಂಚಿಕೊಳ್ಳಬಹುದು, ಮಾಹಿತಿ ನೀಡುವವರ ವಿವರಗಳನ್ನು ಅತ್ಯಂತ ಗೌಪ್ಯವಾಗಿಡಲಾಗುವುದು ಎಂದು ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳು ‘ತಂಬಾಕು ವ್ಯಸನಮುಕ್ತ ಉಪಗ್ರಹ ಕೇಂದ್ರ’ದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.
ಸಭೆಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಎಸ್.ಬಿ. ಘಂಟಿ, ಡಿಡಿಪಿಯು ಪಳನಿವೇಲು, ಡಿಡಿಪಿಐ ಕೊಟ್ರೇಶ್, ಕಾರಾಗೃಹ ಅಧೀಕ್ಷಕ ಆನಂದ್
…

