ಸುಂದರ ಪರಿಸರ, ಗ್ರಾಮೀಣ ಸೊಗಡಿನ ಕಥೆ. ನಾಯಕ ನಾಯಕಿಯರ ಮುದ್ದುಮುಖದ ‘ಪ್ರೇಮದ ಊರಲಿ’ ಚಿತ್ರ ಯಶಸ್ವಿಯಾಗಿದ್ದು ಸಂತೋಷ. ಅದೇ ಸುಂದರ ಪರಿಸರ, ಬೆಟ್ಟ ಗುಡ್ಡ, ತೆಂಗು, ಜೋಳದ ಹೊಲ, ಗ್ರಾಮೀಣ ಸೊಗಡಿನ ಕಥೆ, ನಾಯಕ ನಾಯಕಿಯರ ಮುದ್ದುಮುಖದ ಚಿತ್ರ ಈ ಹಿಂದೆ ಬಂದು ಹೋಗಿದೆ ಅದೇ ‘ಬೆಳ್ಳಿ ಬೆಟ್ಟ’ ಬೆಳ್ಳಿ ಬೆಟ್ಟ ಎಂದರೆ ಬೇರಾವುದು ಅಲ್ಲ ಹೊನ್ನಾಳಿ ಸಮೀಪ ಇರುವ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸುಂದರ ತಾಣ ‘ಕರಡಿಕಲ್ ಸಿದ್ದಪ್ಪನ ಬೆಟ್ಟ’. ಪ್ರೇಮದ ಊರಲಿ’ ಚಿತ್ರ ಹಾಸನ, ಬೇಲೂರಿನ ಬೆಟ್ಟ, ಗುಡ್ಡ, ತೆಂಗು, ಜೋಳದ ಹೊಲದಲ್ಲಿ ಚಿತ್ರಿಕರಣವಾಗಿದೆ. ಬೆಳ್ಳಿ ಬೆಟ್ಟ ಶಿವಮೊಗ್ಗ ಹಾಗೂ ಹೊನ್ನಾಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ.
ಆ ಚಿತ್ರ ಮಹಾಭಾರತದ ಅರ್ಜುನ ಬಾಣ ಬಿಟ್ಟು ನೀರು ತರಿಸಿದ ‘ಸೀಗೆ ಬೆಟ್ಟ’ದಲ್ಲಿ ಚಿತ್ರೀಕರಣವಾಗಿದೆ. ಈ ಚಿತ್ರ ರಾಮಾಯಣದ ಶ್ರೀರಾಮ ಬಾಣ ಬಿಟ್ಟು ನೀರು ತರಿಸಿದ ‘ತೀರ್ಥರಾಮೇಶ್ವರದ’ ಪಕ್ಕದಲ್ಲಿ ಚಿತ್ರೀಕರಣವಾಗಿದೆ. ಅಲ್ಲಿ ವಸಂತ-ರುಕ್ಮಿಣಿ ಪಾತ್ರಧಾರಿಗಳು ಇಡೀ ಚಿತ್ರ ಆವರಿಸಿಕೊಂಡಿದ್ದಾರೆ. ಇಲ್ಲಿ ನಾಯಕಿ ಈಶ್ವರಿ ಇಡೀ ಚಿತ್ರವನ್ನು ಎಳೆದು ದಡ ಮುಟ್ಟಿಸಿದ್ದಾಳೆ. ಅಲ್ಲಿ ನಾಯಕ ನಾಯಕಿಯನ್ನು ಅಪ್ಪಿಕೊಳ್ಳುವುದರೊಂದಿಗೆ ಚಿತ್ರ ಸುಖಾಂತ್ಯ ಕಾಣುತ್ತದೆ. ಇಲ್ಲಿ ನಾಯಕನಿಗೆ ನಾಯಕಿಯನ್ನು ಅಪ್ಪಿಕೊಳ್ಳುವ ಮನಸ್ಸಿದ್ದರೂ ಅದನ್ನು ಒಪ್ಪದ ನಾಯಕಿ ದುರಂತ ಸಾವು ಕಾಣುತ್ತಾಳೆ.
ತನಗಾಗಿ ಪರಿತಪಿಸುವ ಪ್ರೇಮಿಯನ್ನು ನಾಯಕಿ ಅಪ್ಪಿಕೊಂಡಿದ್ದರೆ ಸುಖಾಂತ್ಯ ಕಾಣುತ್ತಿತ್ತು, ಚಿತ್ರ ಯಶಸ್ವಿ ಆಗುತ್ತಿತ್ತೇನೋ! ಇದು ನನ್ನ ಅಭಿಪ್ರಾಯ. ಅಲ್ಲಿ ಬಳಲಿ ಬೆಂಡಾದ ಪತಿ ಪತ್ನಿಯನ್ನು ಮನೆಗೆ ಕರೆತರುತ್ತಾನೆ. ಶಾಪಗ್ರಸ್ತರು ಯಾರೋ, ಶಾಪವಿಮೋಚನೆ ಯಾರಿಗೋ, ನಾಯಕಿ ಮಾತ್ರ ತಾನು ವಿದ್ಯೆ ಕಲಿತರೂ, ರೈತ ಮಹಿಳೆ ಎಂದು ಸಾಬೀತು ಮಾಡಿದಳು. ಇದೇ ಚಿತ್ರದ ಯಶಸ್ಸಿನ ಗುಟ್ಟು ಇರಬಹುದು. ಇಲ್ಲಿ ನಾಯಕಿಗೆ ಅನೈತಿಕತೆ, ಕುಟಿಲತೆ, ಸಂಶಯಕ್ಕೆ ಈಡಾಗಿ ಸಾವಿಗೆ ಬಲಿಯಾಗಿದ್ದು ಸತ್ಯ. ಆದರ್ಶಗಳೇ ಮುಳುವಾದರೆ ಸಂಘರ್ಷ, ಆರ್ತನಾದ ಸಾಮಾನ್ಯ. ಇದು ತಿಳಿಯಬೇಕಾದ ಸತ್ಯ.
ಅಪ್ಪ ಮಗನಿಗೆ ತೋರುವ ಪ್ರೀತಿಗೆ, ಲಾಲನೆಗೆ, ನಾಯಕನಿಗೆ ನಾಯಕಿ ಸಿಕ್ಕಾಗ, ಚಿತ್ರಮಂದಿರದಲ್ಲಿ ಕೇಕೆ, ಶಿಳ್ಳೆ, ಚಪ್ಪಾಳೆಗಳು, ಮಳೆ ಬಾರದ ಈ ದಿನಗಳಲ್ಲೂ ಸಿನಿಮಾ ನೋಡುವ ಪ್ರೇಕ್ಷಕರಾದ ನಮಗೆ ನಮ್ಮ ಮೇಲೆಯೇ ಮಳೆ ಸುರಿದ ಅನುಭವವಾಗುತ್ತದೆ. (ಚಿತ್ರದಲ್ಲೂ ಆಗಾಗ ಮಳೆ ಸುರಿಯುತ್ತದೆ) ಯುವಕರೇ ಮಹಾಭಾರತದ ಅರ್ಜುನ ದ್ರೌಪದಿಯನ್ನು ಪಡೆದದ್ದು ಮತ್ಸ್ಯಯಂತ್ರ ಭೇದಿಸಿ, ರಾಮಾಯಣದ ಶ್ರೀರಾಮ ಸೀತೆ ಪಡೆದಿದ್ದು ಶಿವ ಧನಸ್ಸನ್ನು ಮುರಿದು, ಈ ಸ್ವಯಂವರಗಳು ಅಂದಿನಿಂದ ಇಂದಿಗೂ ನಿತ್ಯವೂ ನಡೆಯುತ್ತಿದೆ. ದಾರಿ ಮಾತ್ರ ಬೇರೆ ಬೇರೆ. ಇದಕ್ಕೆ ಇಂದಿನ ಯುವಕರು ಸಿದ್ದರಾಗಬೇಕು. ಯೂಟ್ಯೂಬ್’ನಲ್ಲಿ ಸಿಗುವ ಈ ಸುಂದರ ಚಿತ್ರ ‘ಬೆಳ್ಳಿ ಬೆಟ್ಟ’ ಚಿತ್ರವನ್ನು ಈಗಲೂ ವೀಕ್ಷಿಸಬಹುದು ಒಮ್ಮೆ ವೀಕ್ಷಿಸಿ.
ಆದರೂ ಬೆಳ್ಳಿ ಬೆಟ್ಟಕ್ಕಿಂತ ವಿಭಿನ್ನ ಕಥೆಯನ್ನು ‘ಪ್ರೇಮದ ಊರಲಿ’ಹೊಂದಿದೆ. ಮೂರನೇ ವ್ಯಕ್ತಿಯ ಮಾತು ಸತ್ಯವುಳ್ಳ ಸಂಸಾರವನ್ನು ಹಾಳುಗೆಡಿಸಿತು. ಈ ಚಿತ್ರದಲ್ಲಿ ಹಳ್ಳಿಯ ಬದುಕು, ಕುಟುಂಬದ ಪ್ರೀತಿ, ಹಳೆಯ ಸಂಬಂಧ, ಅಪ್ಪ ಮಗನ ಪ್ರೀತಿಯನ್ನು ಕುಟುಂಬ ಮತ್ತು ಸಮಾಜ ಹೇಗೆ ನೋಡುವುದು ಎಂಬ ಮೌಲ್ಯಗಳು ಒಳಗೊಂಡಿವೆ. ನಮ್ಮೊಳಗಿನ ಊರಿನ ಕಥೆ, ಮರೆತ ಬಾಲ್ಯ, ಪ್ರೇಮದ ತೇರು, ಇವೆಲ್ಲ ಇದೆ. ‘ಪ್ರೀತಿಗಿಂತ ನಂಬಿಕೆ ದೊಡ್ಡದು’ ಇದು ಪ್ರೇಮದ ಊರಲಿ ಕಥೆಯ ತಿರುಳು. ಬೆಳ್ಳಿ ಬೆಟ್ಟದ ಚಿತ್ರದ ತಿರುಳು “ಸತಿ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ” ಪತಿ ಇಲ್ಲದಿದ್ದರೆ..?ಎನೆಂದು ಏಕೆ ಹೇಳಲಿಲ್ಲ ಸರ್ವಜ್ಞ!
ಚಿಕ್ಕಜೋಗಿಹಳ್ಳಿ ನಾಗರಾಜ್
ಕಲಾವಿದರು, ಲೇಖಕರು. ದುರ್ಗಿಗುಡಿ ಉತ್ತರ ಭಾಗ, ಹೊನ್ನಾಳಿ. ದಾವಣಗೆರೆ ಜಿಲ್ಲೆ.
ಮೊ:9449093902

