ಚಿಕ್ಕಮಗಳೂರು, ಜು.೦೫: ಯಾವುದೇ ಪ್ರವಾಸಿ ತಾಣಗಳ ಅಂದವನ್ನು ಹಾಳುಗೆಡವದೆ ಪರಿಸರಕ್ಕೆ ಪೂರಕವಾಗುವಂತೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಹೇಳಿದರು.
ಅವರು ಇಂದು ಮೂಡಿಗೆರೆ ತಾಲ್ಲೂಕಿನ ದೇವರಮನೆಯಲ್ಲಿರುವ ಚೋಳರ ಕಾಲದ ನಿರ್ಮಿತ ಪುರಾಣ ಪ್ರಸಿದ್ಧ ಕಾಲಭೈರವೇಶ್ವರ ದೇವಾಲಯ, ಹೇಮಾವತಿ ನದಿಯ ಉಗಮ ಸ್ಥಾನ, ಹಾಗೂ ಬಲ್ಲಾಳರಾಯನ ದುರ್ಗದ ತಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಮುಖ್ಯ ಉದ್ದೇಶ ಇಲ್ಲಿನ ಪ್ರಕೃತಿ ಸೊಬಗನ್ನು ಸವಿಯಲು ಆ ಹಿನ್ನೆಲೆ ಪರಿಸರಕ್ಕೆ ಪೂರಕವಾಗುವಂತೆ ಯಾವುದೇ ಅಂದವನ್ನು ವಿರೂಪಗೊಳಿಸದೆ ಪ್ರವಾಸಿ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು ರಾಣಿ ಝರಿಯಲ್ಲಿ ತಾಂತ್ರಿಕ ವರದಿ ಪಡೆದು ಅದನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುವುದು ಎಂದರು.
ಪ್ರವಾಸಿಗರು ತಾಣಗಳನ್ನು ಸಂಪರ್ಕಿಸಲು ಸಂಚಾರಕ್ಕೆ ಅನುಕೂಲವಾಗುವಂತೆ ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಜೊತೆಗೆ ಸೂಕ್ತವೆನಿಸಿದ ಜಾಗದಲ್ಲಿ ಟ್ರಕ್ಕಿಂಗ್ ನಿರ್ಮಾಣ, ಕಾಲಭೈರವೇಶ್ವರ ಸನ್ನಿಧಿಯಲ್ಲಿ ರಸ್ತೆ ಪಥ ಸೇರಿದಂತೆ ಆಯ್ದ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಜಿಲ್ಲೆಯಲ್ಲಿರುವ ಪ್ರತಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಹಿನ್ನೆಲೆ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ವಿವಿಧ ಭಾಗಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರ ಸ್ವಾಮಿ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.