ದಾವಣಗೆರೆ ಜು.13
ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು
ಇಂದು ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಸಂವಾದ ನಡೆಸಿ,
ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಕೈಗೊಳ್ಳಲಾದ ನಿಯಂತ್ರಣ
ಕ್ರಮಗಳು, ಮರಣ ಪ್ರಮಾಣ ಇಳಿಕೆ, ಮಳೆ ಬೆಳೆ, ಬೀಜ,
ರಸಗೊಬ್ಬರ ಲಭ್ಯತೆ, ಕುಡಿಯುವ ನೀರಿನ ಸಮಸ್ಯೆ,
ಅವಶ್ಯಕತೆ ಇರುವೆಡೆ ಬೋರ್‍ವೆಲ್ ಸೌಲಭ್ಯ ಒದಗಿಸುವಂತೆ
ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ,
ಜಿಲ್ಲೆಯಲ್ಲಿ ಈವರೆಗೆ 536 ಕೋವಿಡ್ ಪ್ರಕರಣ ದೃಢಪಟ್ಟಿದ್ದು,
ಈ ಪೈಕಿ 410 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಹೊಂದಿದ್ದಾರೆ. 20 ಜನರು ಮೃತಪಟ್ಟಿದ್ದು, ಪ್ರಸ್ತುತ 104
ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಒಟ್ಟು 126
ಕಂಟೈನ್‍ಮೆಂಟ್ ಝೋನ್‍ಗಳನ್ನು ಸ್ಥಾಪಿಸಿದ್ದು ಇದರಲ್ಲಿ 46
ಝೋನ್‍ಗಳನ್ನು ಡಿನೋಟಿಫೈ ಮಾಡಲಾಗಿದೆ. 86
ವಲಯಗಳ ಪೈಕಿ 20 ಗ್ರಾಮೀಣ ಪ್ರದೇಶಗಳಲ್ಲಿ ಇವೆ.
ಇದುವರೆಗೆ ಜಿಲ್ಲೆಯಲ್ಲಿ 32000 ಸ್ವಾಬ್ ಪರೀಕ್ಷೆ ಮಾಡಿಸಲಾಗಿದ್ದು
ಜೂನ್ ಮಾಹೆಯಲ್ಲಿ 14000 ಮತ್ತು ಜುಲೈ ಮಾಹೆಯಲ್ಲಿ
ಇಲ್ಲಿಯವರೆಗೆ 10149 ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ
ಎರಡು ಖಾಸಗಿ ಮತ್ತು ಒಂದು ಸರ್ಕಾರಿ ಕೋವಿಡ್ ಪರೀಕ್ಷಾ
ಲ್ಯಾಬ್‍ಗಳಿದ್ದು, 1420 ಕೋವಿಡ್ ಬೆಡ್‍ಗಳ ವ್ಯವಸ್ಥೆ
ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವರಾದ ಸುಧಾಕರ್ ಮಾತನಾಡಿ
ಜಿಲ್ಲೆಯಲ್ಲಿ ಸುವ್ಯವಸ್ಥಿತ ವೈದ್ಯಕೀಯ ಸೌಲಭ್ಯಗಳಿದ್ದರೂ
ಸಾವಿನ ಪ್ರಮಾಣ ಹೆಚ್ಚಿದೆ. ಶೇ.3.73 ರಷ್ಟಿದ್ದು ಇದನ್ನು ಕಡಿಮೆ
ಮಾಡಲು ಕ್ರಮ ಕೈಗೊಳ್ಳಬೇಕು. ರ್ಯಾಪಿಡ್ ಆಂಟಿಜೆನ್
ಟೆಸ್ಟ್‍ನೊಂದಿಗೆ, ಸ್ವಾಬ್ ಪರೀಕ್ಷೆಯ ಸಂಖ್ಯೆಯನ್ನು
ಹೆಚ್ಚಿಸಬೇಕು ಎಂದರು.
ಶಿಷ್ಯವೇತನ ಕೊಡಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ
: ವೈದ್ಯಕೀಯ ಸಚಿವರು ಜಿಲ್ಲೆಯ ಜೆಜೆಎಂ ಮೆಡಿಕಲ್ ಕಾಲೇಜಿನ
ಗೃಹವೈದ್ಯರಿಗೆ ಶಿಷ್ಯ ವೇತನವನ್ನು ಕಾಲೇಜಿನ ಆಡಳಿತ
ಮಂಡಿಳಿಯವರೇ ಭರಿಸಬೇಕು ಎಂದು ಸರ್ಕಾರ ತಿಳಿಸಿರುವಂತೆ

ಜಿಲ್ಲಾಧಿಕಾರಿಗಳು ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಚರ್ಚಿಸಿ
ಈ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಗೃಹವೈದ್ಯರೊಂದಿಗೆ
ಈಗಾಗಲೇ ಸಭೆ ನಡೆಸಿದ್ದು ಅವರು ತಮಗೆ ಶಿಷ್ಯವೇತನ
ಸಂಬಂಧ ಆಡಳಿತ ಮಂಡಳಿಯಿಂದ ಲಿಖಿತ ಆದೇಶ ಬರುವವರೆಗೆ
ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು
ಹೇಳಿದ್ದು, ನಾಳೆಯೇ ಆಡಳಿತ ಮಂಡಳಿಯೊಂದಿಗೆ ಸಭೆ
ನಡೆಸಲಾಗುವುದು ಎಂದು ತಿಳಿಸಿದರು.
ಮಾನ್ಯ ಮುಖ್ಯಮಂತ್ರಿಗಳು ವಿಡಿಯೋ ಸಂವಾದದಲ್ಲಿ ಎಲ್ಲ
ಜಿಲ್ಲೆಯ ಅಧಿಕಾರಿಗಳನ್ನು ಉದ್ದೇಶಿಸಿ, ಯಾವುದೇ ಕಾರಣಕ್ಕೂ
ಮೈಮರೆಯುವುದು ಬೇಡ. ಕಟ್ಟುನಿಟ್ಟಿನ
ಕ್ರಮಗಳನ್ನು ಕೈಗೊಂಡು ಪ್ರಸ್ತುತ ಇರುವ
ಸವಾಲನ್ನು ಪರಿಣಾಮಕಾರಿಯಾಗಿ ಎಲ್ಲರೂ ಎದುರಿಸಬೇಕಾಗಿದೆ. ಈ
ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಎಲ್ಲ ಅಧಿಕಾರಿಗಳೊಂದಿಗೆ ಒಗ್ಗೂಡಿ
ಉತ್ತಮ ಪ್ರಯತ್ನ ಮಾಡುತ್ತಿದ್ದೀರ. ಇದೇ ರೀತಿ ರೈತರ
ಹಿತದೃಷ್ಟಿಯಿಂದ ಕೃಷಿಗೆ ಪೂರಕವಾಗಿರುವ ಬಿತ್ತನೆ ಬೀಜ,
ರಸಗೊಬ್ಬರ ಇನ್ನಿತರೆ ಕೊರತೆಯಾಗದಂತೆ ರೈತರ
ಪರವಾಗಿ ನಿಂತು ಎಲ್ಲ ಸವಲತ್ತುಗಳನ್ನು ಸಮಯಕ್ಕೆ
ಸರಿಯಾಗಿ ಒದಗಿಸಿ, ರೈತ ನೆಮ್ಮದಿಯಿಂದ ಬದುಕಲು
ಸಹಕರಿಸುವಂತೆ ಹಾಗೂ ಏನಾದರೂ ಸಮಸ್ಯೆಗಳಿದ್ದಲ್ಲಿ
ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು, ಜಿಲ್ಲಾ ಉಸ್ತುವಾರಿ
ಸಚಿವರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳುವಂತೆ ತಿಳಿಸಿದರು.
ವಿಡಿಯೋ ಕಾನ್ಪರೆನ್ಸ್‍ನಲ್ಲಿ ಎಸ್.ಪಿ.ಹನುಮಂತರಾಯ ಜಿ.ಪಂ
ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪದ್ಮಾ ಬಸವಂತಪ್ಪ,
ಉಪವಿಭಾಗಾಧಿಕಾರಿ ಮಮತಾ ಹೂಸಗೌಡರ್, ಪಾಲಿಕೆ ಆಯುಕ್ತ
ವಿಶ್ವನಾಥ್ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ
ನಿರ್ದೇಶಕಿ ನಜ್ಮಾ ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್
ಡಾ.ನಾಗರಾಜ್, ಡಿಎಸ್‍ಓ ಡಾ.ರಾಘವನ್ ಹಾಗೂ ಇತರೆ ಅಧಿಕಾರಿಗಳು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *