ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ ಪರಿಣಾಮದಿಂದ ಆಶಾ ಕಾರ್ಯಕರ್ತೆಯರು ಅತಿ ಹೆಚ್ಚು ಜವಾಬ್ದಾರಿ ಹೊತ್ತು ಮನೆಮನೆಗೆ ತೆರಳಿ ಕರೋನಾ ಪೀಡಿತರನ್ನು ಗುರುತಿಸಿ ಅವರ ಆರೋಗ್ಯ ತಪಾಸಣೆಗಾಗಿ ಸರ್ಕಾರಕ್ಕೆ ನೆರವಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ಸುರಕ್ಷಿತವಾದ ಅನುಕೂಲಗಳಿಲ್ಲ. ಅವರಿಗೆ ಸರ್ಕಾರದಿಂದ ಕೇವಲ 6 ಸಾವಿರ ರೂಗಳ ಗೌರವಧನ ನೀಡಲಾಗುತ್ತದೆ. ಇದು ಅವರ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತದೆ. ಆಶಾ ಕಾರ್ಯಕರ್ತೆಯರ ಸೇವೆಯನ್ನು ಮತ್ತು ಈ ಸಂದರ್ಭದಲ್ಲಿ ಅವರು ಸ್ವೀಕರಿಸಿರುವ ಸವಾಲನ್ನು ನಾವು ಗೌರವಿಸಬೇಕು.
ಜನರ ಆರೋಗ್ಯದ ರಕ್ಷಣೆಗಾಗಿ ಈ ಮಹಿಳೆಯರು ಹೊರಗೆ ಕರ್ತವ್ಯದಲ್ಲಿ ತೊಡಗಿದ್ದಾರೆ. ಇವರಿಗೆ ಪೂರಕವಾಗಿ ಮೊದಲು ಅವರ ಆರೋಗ್ಯ ರಕ್ಷಣೆ ಮಾಡುವ ವ್ಯವಸ್ಥೆ ನೀಡಬೇಕು. ಯಾವುದೇ ಆರೋಗ್ಯ ರಕ್ಷಣೆ ಮಾಡುವ ಕವಚವಿಲ್ಲದೆ ಹೊರಗೆ ದುಡಿಯುವ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವ ವಸ್ತುಗಳನ್ನು ಆರೋಗ್ಯ ವಿಮೆ ಕಲ್ಪಿಸುವ ಅಗತ್ಯವಿದೆ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳಾದ ತಾವುಗಳು ದಯಮಾಡಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳು, ಮಹಿಳಾ ಆಶಾ ಕಾರ್ಯಕರ್ತೆಯರು, ಮತ್ತು ಮಹಿಳಾ ಪೌರಕಾರ್ಮಿಕರು ಈ ಕೋವಿಡ್ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಗೌರವಧನ ಏರಿಸುವ ಅವರ ಬಹುದಿನಗಳ ಬೇಡಿಕೆಯನ್ನಾದರೂ ತಾವು ಈಗ ಈಡೇರಿಸಬೇಕು. ಇತ್ತೀಚೆಗೆ ಆಶಾ ಕಾರ್ಯಕರ್ತೆಯರು ಸರ್ಕಾರದ ಮೇಲೆ ಒತ್ತಡ ಹೇರಲು ಬೆಂಬಲ ಕೋರಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಹಾಗು ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಇವರ ಪರವಾಗಿ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈಗ ಆಶಾ ಕಾರ್ಯಕರ್ತೆಯರು ಕಳೆದ ಮೂರು ದಿನಗಳಿಂದ ಧರಣಿಗೆ ಮುಂದಾಗಿದ್ದಾರೆ. ಸರ್ಕಾರ ಈಗಲಾದರೂ ಪ್ರಾಣವನ್ನು ಪಣಕ್ಕಿಟ್ಟು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಶಾ ಕಾರ್ಯಕರ್ತೆಯರ ಪರವಾಗಿ ಕೋರುತ್ತೇನೆ. ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ) ಮಾಜಿ ಶಾಸಕರು ಅಧ್ಯಕ್ಷರು – ರಾಜ್ಯ ಹಿಂದುಳಿದ ವರ್ಗಗಳ ವಿಭಾಗ. ಅಧ್ಯಕ್ಷರು – ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.