ದಾವಣಗೆರೆ ಆ 08

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದು ಮುಂದಿನ ಒಂದು ವಾರದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಂಭವವಿರುವುದರಿಂದ ಜಿಲ್ಲಾಡಳಿತ ತಾಲೂಕು ಮಟ್ಟದ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಸಿದ್ದವಿರಬೇಕು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಈಗಾಗಲೆ ಬೆಳೆಹಾನಿ, ಮನೆಹಾನಿ, ಆಗಿರುವವರಿಗೆ ತಕ್ಷಣ ಪರಿಹಾರ ಒದಗಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು.

ಇಂದು ಶನಿವಾರ ನಡೆದ ಗೂಗಲ್ ಮೀಟ್‍ನಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಅದರೊಂದಿಗೆ ಹೆಚ್ಚು ಮಳೆಯಾಗುತ್ತಿರುವುದರಿಂದ ಎರಡೂ ಪರಿಸ್ಥಿತಿಗಳನ್ನು ಒಟ್ಟಾಗಿ ನಿಭಾಯಿಸಬೇಕಾಗಿದೆ ಈಗಾಗಲೆ ತುಂಗಾನದಿಗೆ ಸಾಕಷ್ಟು ನೀರು ಬಂದಿದ್ದು ಕೆಲವೇ ದಿನಗಳಲ್ಲಿ ಭದ್ರಾ ನೀರು ಸೇರಲಿದೆ. ಹಾಗಾಗಿ ನದಿದಂಡೆ ಮತ್ತು ನದಿಪಾತ್ರದಲ್ಲಿರುವ ಜನ- ಜಾನುವಾರುಗಳು ಪ್ರವಾಹಕ್ಕೆ ಒಳಗಾಗುವ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು.

ಪ್ರವಾಹಕ್ಕೆ ಸಿಲುಕುವ ಕುಟುಂಬಗಳನ್ನು ತಕ್ಷಣ ಸ್ಥಳಾಂತರಿಸಿ ಅವರನ್ನು ಕಾಳಜಿ ಕೇಂದ್ರಗಳಿಗೆ ಕಳುಹಿಸಬೇಕು ಈ ಹಿಂದಿನ ದಿನಗಳಲ್ಲಿ ಪ್ರವಾಹ ಊಂಟಾದರೆ ಕಾಳಜಿ ಕೇಂದ್ರಗಳನ್ನು ಮಾಡಿದಂತೆ ಮಾಡಲು ಬರುವುದಿಲ್ಲ ಏಕೆಂದರೆ ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಮುಖ್ಯವಾಗಿರುವುದರಿಂದ ಸುಸಜ್ಜಿತ ಸ್ಥಳಗಳನ್ನು ಗುರುತಿಸಬೇಕು ಸಮುದಾಯಭವನ, ಹಜ್‍ಭವನ, ಗುರುಭವನಗಳನ್ನು ಗುರುತಿಸಿ ಒಂದೇ ಕಡೆ ಅಡುಗೆ ವ್ಯವಸ್ಥೆ ಮಾಡಿ ಅಲ್ಲಿಂದ ಚಿಕ್ಕ ಚಿಕ್ಕ ವಾಹನಗಳ ಮೂಲಕ ಆಹಾರ ಮತ್ತು ನೀರನ್ನು ಸರಬರಾಜು ಮಾಡಬೇಕು.

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದು ಕೃಷಿ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದೆ, ಕೆಲವೆಡೆ ಯೂರಿಯಾ ಅಭಾವದ ದೂರುಗಳಿವೆ ಆದರೆ ಯೂರಿಯಾಗೆ ಯಾವದೇ ತೊಂದರೆ ಇಲ್ಲ ಬೇಡಿಕೆ ಸಲ್ಲಿಸಿ ಪೂರೈಸಲು ವ್ಯವಸ್ಥೆ ಮಾಡಲಾಗುವುದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಎಂದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾಹಿತಿನೀಡಿ, ಜಿಲ್ಲೆಯಲ್ಲಿ ಜೂನ್, ಆಗಸ್ಟ್, ತಿಂಗಳಿನಲ್ಲಿ 273 ಮನೆಗಳು ಭಾಗಶಃ ಹಾನಿಯಾಗಿದೆ ಅವರಿಗೆ 11ಲಕ್ಷ ಪರಿಹಾರ ನೀಡಲಾಗಿದೆ ಹಾಗೂ 785 ಎಕರೆ ಬೆಳೆಹಾನಿ ಆಗಿದ್ದು 1681 ರೈತರಿಗೆ 1.14 ಕೋಟಿ ಪರಿಹಾರ ನೀಡಲಾಗಿದೆ ಎಂದರು.

ಈ ವಾರದಲ್ಲಿ 2 ಮನೆಗಳಿಗೆ ಹಾನಿಯಾಗಿದ್ದು ಸೋಮವಾರ ಆ ಕುಟುಂಬಗಳಿಗೆ ತಲಾ ರೂ 25, ಸಾವಿರ ಪರಿಹಾರ ನೀಡಲಾಗುವುದು ಎಂದರು.

ಹೊನ್ನಾಳಿ ಕೃಷಿಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ತಾಲೂಕಿನಲ್ಲಿ 500 ಎಕರೆ ಮಕ್ಕೆಜೋಳ ಬೆಳೆಹಾನಿ ಆಗಿದ್ದು ಹೊಲಗಳಲ್ಲಿ ಬಹಳಷ್ಟು ನೀರು ನಿಂತಿದ್ದು ಹಾನಿ ಪ್ರಮಾಣ ಅಂದಾಜಿಸಲು ಒಂದೆರಡು ದಿನ ಹಿಡಿಯುತ್ತದೆ ಎಂದರು.

ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ ಮಾಹಿತಿನೀಡಿ, ಅತಿಯಾದ ಮಳೆಯಿಂದ ಸಾರಥಿ- ಚಿಕ್ಕಬಿದರೆ ಸಂಪರ್ಕ ಕಡಿತಗೊಂಡಿದ್ದು ಜನಸಂಚಾರ ಬಂದ್ ಮಾಡಲಾಗಿದೆ ಹಾಗೂ ಆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.

ಸಂಸದರು ಸೇತುವೆ ಮಂಜೂರಾಗಿ 1 ವರ್ಷ ಆದರೂ ಕಾಮಗಾರಿ ಏಕೆ ಆರಂಭವಾಗಿಲ್ಲ ಬೇಗ ಕಾಮಗಾರಿ ಮುಗಿಸಲು ತಿಳಿಸಿ ಎಂದರು.

ಉಕ್ಕಡಗಾತ್ರಿಯ ಕೆಲ ಪ್ರದೇಶ ಮುಳುಗಡೆಯಾಗಿದ್ದು ಸ್ನಾನ ಘಟ್ಟದವರಗೆ ನೀರು ಬಂದಿರುವ ಮಾಹಿತಿ ಇದೆ ಎಂದಾಗ ತಹಶೀಲ್ದಾರ್ ಪ್ರತಿಕ್ರಯಿಸಿ ಉಕ್ಕಡಗಾತ್ರಿ ಸಂಪರ್ಕ ರಸ್ತೆ ಬಂದ್ ಆಗಿದೆ ಆದರೆ ಯಾವುದೇ ತೊಂದರೆ ಇಲ್ಲ ಎಂದರು.

ದಾವಣಗೆರೆ ತಹಶೀಲ್ದಾರ್ ಗಿರೀಶ್ ಮಾಹಿತಿನೀಡಿ, ಆನಗೋಡು ಪ್ರದೇಶದಲ್ಲಿ 4.8.ಮಿ.ಮಿಟರ್ ಮಳೆಯಾಗಿದ್ದು ಈ ಹಿಂದೆ ಹಾನಿಗೊಳಗಾಗಿದ್ದ 42 ಮನೆಗಳಿಗೆ 1ಕೋಟಿ 32ಲಕ್ಷ ಪರಿಹಾರ ನೀಡಲಾಗಿದೆ ಎಂದರು. ಇತ್ತಿಚಿಗೆ 2 ಮನೆಗಳಿಗೆ ಹಾನಿಯಾಗಿದೆ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದರು.

ಕೃಷಿಇಲಾಖೆ ಅಧಿಕಾರಿ ಮಾಹಿತಿನೀಡಿ ಸ್ವಲ್ಪ ಮಟ್ಟಿಗಿನ ಯೂರಿಯಾ ಕೊರತೆ ಇದೆ ಆನಗೋಡು, ಅಣಜಿ, ಆಲೂರುಗಳ ಬೆಳೆಹಾನಿ ಪ್ರದೇಶಗಳ ಪಟ್ಟಿ ಮಾಡಲಾಗಿದೆ ಎಂದರು, ಜುಲೈ ತಿಂಗಳ ಕೋಟಾ ಯೂರಿಯಾ ಬಂದಿದ್ದು ಅಗಸ್ಟ್ ತಿಂಗಳ ಕೋಟಾ ಬರಬೇಕಿದೆ ಎಂದರು.

ರಾಜನಹಳ್ಳಿ ಸಮೀಪ ಹೊಳೆಯಲ್ಲಿ ಮರದ ಮೇಲೆ ಸಿಲುಕಿರುವ ಕೋತಿಗಳನ್ನು ಸುರಕ್ಷಿತವಾಗಿ ದಂಡೆಗೆ ತಲುಪಿಸಲು ಸಂಸದರು ಸೂಚಿಸಿದರು, ಪ್ರತಿಕ್ರಯಿಸಿದ ಪೊಲೀಸ್ ಅಧಿಕಾರಿ ಶಿವಪ್ರಸಾದ ಈಗಾಗಲೇ ಬೊಟ್ ಮೂಲಕ ಹಗ್ಗದ ಸಹಾಯದಿಂದ ಕೋತಿಗಳನ್ನು ರಕ್ಷಿಸುವ ಕಾರ್ಯ ಆರಂಭವಾಗಿದೆ ಎಂದರು.

ಚನ್ನಗಿರಿ ತಹಶೀಲ್ದಾರ್ ಪುಟ್ಟರಾಜು ಮಾಹಿತಿನೀಡಿ, ಉತ್ತಮ ಮಳೆಯಾಗುತ್ತಿದ್ದು ಉಬ್ರಾಣಿ ಭಾಗದಲ್ಲಿ 13 ಮನೆಗಳಿಗೆ ಹಾನಿಆಗಿದೆ ಈ ಕುರಿತು ಪ್ರಸ್ತಾವನೆ ಸಿದ್ದಪಡಿಸಲಾಗಿದೆ 58 ಎಕರೆ ಮಕ್ಕೆಜೋಳ ಹಾನಿಗೀಡಾಗಿದ್ದು ಕಂದಾಯ ಮತ್ತು ಕೃಷಿ ಇಲಾಖೆಯಿಂದ ಅಂದಾಜು ನಷ್ಟ ಸಿದ್ದಪಡಿಸಲಾಗುತ್ತಿದೆ ಎಂದರು.

ಜಗಳೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿ, ನಮ್ಮಲಿ ಯಾವುದೇ ಬೆಳೆಹಾನಿ ಆಗಿಲ್ಲ ಉತ್ತಮ ಮಳೆಯಾಗಿದೆ ಎಂದರು.

ತಹಶೀಲ್ದಾರ್ ಮಾಹಿತಿ ನೀಡಿ, ಉತ್ತಮ ಮಳೆಯಿಂದ ಕರೆಗಳಿಗೆ ನೀರು ಬಂದಿದೆ ಕೆಲ ಜಮೀನುಗಳು ಜಲಾವೃತವಾಗಿವೆ ಆ ಜಮೀನಿನ ರೈತರ ಪಟ್ಟಿಮಾಡಿ ಕೃಷಿ ಇಲಾಖೆಗೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಎಂಥದ್ದೇ ಪರಿಸ್ಥಿತಿ ಬಂದರು ನಿಭಾಯಿಸಲು ನಮ್ಮ ತಂಡ ಸಿದ್ದವಿದೆ ಪ್ರವಾಹ ಮತ್ತು ಕೋವಿಡ್‍ನಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ಮಾರ್ಗದರ್ಶನದಂತೆ ನಮ್ಮ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.

ಸಭೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ದೇವರಾಜ್ ಇದ್ದರು.

Leave a Reply

Your email address will not be published. Required fields are marked *