ದಾವಣಗೆರೆ ಸೆ.30
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ
ಮಾರ್ಗಸೂಚಿಯನ್ವಯ ಈ ಬಾರಿ ಅ. 02 ರಂದು ಮಹಾತ್ಮಾ
ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿ
ಆಚರಣೆಯನ್ನು ಜಿಲ್ಲಾಡಳಿತದ ವತಿಯಿಂದ ಸರಳವಾಗಿ
ಆಚರಿಸಲಾಗುವುದು.
ಉಭಯ ಮಹನೀಯರ ಜಯಂತಿ ಆಚರಣೆಯನ್ನು ಅ.
02 ರಂದು ಬೆಳಿಗ್ಗೆ 09 ಗಂಟೆಗೆ ದಾವಣಗೆರೆ ಮಹಾನಗರಪಾಲಿಕೆ
ಆವರಣದಲ್ಲಿ ಆಚರಿಸಲಾಗುವುದು. ಕೋವಿಡ್ ಸೋಂಕು
ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಹೊರಡಿಸಿರುವ
ಮಾರ್ಗಸೂಚಿಯನ್ವಯ ಎಲ್ಲ ಶಿಷ್ಠಾಚಾರಗಳನ್ನು ಪಾಲಿಸಿ,
ಜಯಂತಿ ಕಾರ್ಯಕ್ರಮವನ್ನು ಸರಳವಾಗಿ
ಆಚರಿಸಲಾಗುವುದು.
ಅಂದು ಬೆಳಿಗ್ಗೆ ಮಹಾತ್ಮಾ ಗಾಂಧೀಜಿಯವರ ಹಾಗೂ ವಿವಿಧ
ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ
ಮಾಡಲಾಗುವುದು. ಬಳಿಕ ವೇದಿಕೆ ಕಾರ್ಯಕ್ರಮ
ನೆರವೇರಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ
ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಯವರ ಜೀವನ ಸಾಧನೆ
ಕುರಿತಂತೆ ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು.
ಗಾಂಧೀಜಿಯವರಿಗೆ ಪ್ರಿಯವಾಗಿದ್ದ ರಘುಪತಿ ರಾಜಾರಾಂ,
ವೈಷ್ಣವಜನತೋ ಸೇರಿದಂತೆ ಇತರೆ ಹಾಡುಗಳ ಗೀತ
ಗಾಯನ ಪ್ರಸ್ತುತಪಡಿಸಲಾಗುವುದು. ಪ್ರತಿಬಾರಿ
ಕಾರ್ಯಕ್ರಮಕ್ಕೆ ಮಕ್ಕಳನ್ನು ಆಹ್ವಾನಿಸಿ ಅದ್ಧೂರಿಯಾಗಿ
ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಭೀತಿಯ
ಕಾರಣಕ್ಕಾಗಿ ಸರಳವಾಗಿ ಆಚರಿಸಲಾಗುವುದರಿಂದ ಗೀತ
ಗಾಯನಕ್ಕೆ ಈ ಸಲ ಸಂಗೀತ ಶಿಕ್ಷಕರನ್ನು
ನಿಯೋಜಿಸಲಾಗುವುದು.
ಕೋವಿಡ್ ನಿಯಂತ್ರಣ ಮಾರ್ಗಸೂಚಿಯಂತೆ
ಸಮಾರಂಭದಲ್ಲಿ ಸಾಮಾಜಿಕ ಅಂತರ
ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮಾಸ್ಕ್
ಧರಿಸುವುದು, ಸ್ಯಾನಿಟೈಜರ್ ಬಳಕೆ ವ್ಯವಸ್ಥೆ ಇರುತ್ತದೆ.
ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕಡ್ಡಾಯವಾಗಿ
ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್ ಬಳಸಿ ಪರೀಕ್ಷೆ ಮಾಡಿ
ಪ್ರವೇಶ ನೀಡುವ ವ್ಯವಸ್ಥೆ ಕೈಗೊಳ್ಳಲಾಗುವುದು.
ಕಾರ್ಯಕ್ರಮಕ್ಕೆ ಎಲ್ಲ ಇಲಾಖೆ, ಅಧಿಕಾರಿ ಸಿಬ್ಬಂದಿಗಳು
ಕಡ್ಡಾಯವಾಗಿ ಹಾಜರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.