ದಾವಣಗೆರೆ ಸೆ.30
ಕರ್ನಾಟಕ ವಿಧಾನಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಸಂಬಂಧ ವೇಳಾಪಟ್ಟಿಯನ್ನು ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಿಸಿದ್ದಾರೆ.
ವಿಧಾನಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳು ಮತ್ತು ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ, ಜಗಳೂರು ತಾಲ್ಲೂಕುಗಳು ಈ ಕ್ಷೇತ್ರ ವ್ಯಾಪ್ತಿಗೆ ಬರಲಿವೆ.
ವೇಳಾಪಟ್ಟಿ : ಪ್ರಕಟಿತ ವೇಳಾಪಟ್ಟಿಯನ್ವಯ ಚುನಾವಣೆಗಾಗಿ ಅ. 01 ರಂದು ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅ. 08 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಅ. 09 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಅ. 12 ಕೊನೆಯ ದಿನವಾಗಿದ್ದು, ಮತದಾನವು ಅ. 28 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 05 ರವರೆಗೆ ನಡೆಯಲಿದೆ. ಮತಗಳ ಎಣಿಕೆ ಕಾರ್ಯ ನವೆಂಬರ್ 02 ರಂದು ನಡೆಯಲಿದ್ದು, ನ. 05 ರ ಒಳಗಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
ಸ್ಪರ್ಧೆಗೆ ಅರ್ಹತೆ : ಚುನಾವಣೆಗೆ ಸ್ಪರ್ಧಿಸಲು ವಯಸ್ಸು 30 ವರ್ಷ ಮೇಲ್ಪಟ್ಟು ಇರಬೇಕು. ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿರಬೇಕು ಅಲ್ಲದೆ ಯಾವುದೇ ಕಾನೂನಿನಡಿ ಅನರ್ಹರಾಗಿರಬಾರದು. ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಿಸಿದವರು ಮಾತ್ರ ಈ ಚುನಾವನೆಯಲ್ಲಿ ಮತ ಚಲಾಯಿಸಲು ಅರ್ಹರು.
ನಾಮಪತ್ರ ಸಲ್ಲಿಕೆ : ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಬೇಕಾದ ನಮೂನೆಗಳನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಪಡೆದು, ಅ. 01 ರಿಂದ ಅ. 08 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 03 ರವರೆಗೆ ಸಲ್ಲಿಸಬಹುದು. ಪ್ರತಿ ಅಭ್ಯರ್ಥಿಯ ನಾಮಪತ್ರದಲ್ಲಿ ಆಯಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ಕನಿಷ್ಟ 10 ಮತದಾರರು ಸೂಚಕರಾಗಿ ಸಹಿ ಮಾಡಿರಬೇಕು. ಪ್ರತಿ ಅಭ್ಯರ್ಥಿ 10 ಸಾವಿರ ರೂ ಠೇವಣಿ ಮಾಡಬೇಕು. ಪ.ಜಾತಿ, ಪ.ಪಂಗಡದವರಿಗೆ ಠೇವಣಿ ಮೊತ್ತ 5 ಸಾವಿರ ರೂ.ಗಳಾಗಿದ್ದು, ಇದಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ಜಾತಿ ದೃಢೀಕರಣ ಪತ್ರ ಸಲ್ಲಿಸಬೇಕು. ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ. ನಾಮಾಂಕನ ಪತ್ರಗಳನ್ನು ಚುನಾವಣಾಧಿಕರಿಗಳಾದ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರು ವಿಭಾಗ, 2ನೇ ಮಹಡಿ, ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು-27 ಇವರಿಗೆ ಸಲ್ಲಿಸಬೇಕು. ಅಭ್ಯರ್ಥಿಗಳು ನಿಗದಿತ ನಮೂನೆಗಳಲ್ಲಿ (ಫಾರಂ 26) ಪ್ರಮಾಣಪತ್ರವನ್ನು ಮತ್ತು ಹೆಚ್ಚುವರಿ ಪ್ರಮಾಣಪತ್ರವನ್ನು ನೋಟರಿ ಅವರಿಂದ ಪ್ರಮಾಣೀಕರಿಸಿ ನಾಮಪತ್ರದೊಂದಿಗೆ ಸಲ್ಲಿಸಬೇಕು. ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಲು ಇಚ್ಛಿಸುವವರು ಆಯೋಗ ನಿಗದಿಪಡಿಸಿದ ಪ್ರಪತ್ರ-ಎ ಎ, ಪ್ರಪತ್ರ- ಬಿ ಬಿ ಗಳನ್ನು ಅ. 08 ರಂದು ಮಧ್ಯಾಹ್ನ 03 ಗಂಟೆಯೊಳಗೆ ಸಲ್ಲಿಸಬೇಕು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಚೇರಿಗೆ ಅಭ್ಯರ್ಥಿ ಹಾಗೂ ಇತರೆ ನಾಲ್ಕು ಜನ ಅಂದರೆ ಅವರ ಸೂಚಕರು ಸೇರಿದಂತೆ ಒಟ್ಟು ಐದು ಜನರಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುತ್ತದೆ. ಮಾದರಿ ನೀತಿ ಸಂಹಿತೆಯು ಚುನಾವಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೆ. 29 ರಿಂದ ಜಾರಿಯಾಗಿದ್ದು, ನವೆಂಬರ್ 05 ರವರೆಗೆ ಜಾರಿಯಲ್ಲಿರುತ್ತದೆ. ಹೆಚ್ಚಿನ ವಿವರಗಳಿಗೆ ಚುನಾವಣಾಧಿಕಾರಿಗಳು ಅಥವಾ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *