ದಾವಣಗೆರೆ ಅ.01
ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ
ಪದವೀಧರರ ಕ್ಷೇತ್ರದ ಚುನಾವಣೆ 2020 ಕ್ಕೆ
ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗ ವೇಳಾಪಟ್ಟಿ
ಹೊರಡಿಸಿರುವ ಹಿನ್ನೆಲೆ ಇಂದು ಜಿಲ್ಲೆಯ ವಿವಿಧ ರಾಜಕೀಯ
ಪಕ್ಷದ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಕಚೇರಿಯಲ್ಲಿ ಸೆ.30
ರಂದು ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಮಾತನಾಡಿ, ಪಾರದರ್ಶಕ ಮತ್ತು ನಿಷ್ಪಕ್ಷಪಾತ
ಚುನಾವಣೆ ನಡೆಸಲು ಸಕಲ ಸಿದ್ದತೆಗಳನ್ನು
ಮಾಡಿಕೊಳ್ಳಲಾಗಿದೆ. ಈ ಚುನಾವಣೆಯನ್ನು
ಯಶಸ್ವಿಗೊಳಿಸಲು ರಾಜಕೀಯ ಪಕ್ಷಗಳ ಮುಖಂಡರು
ಸಹಕರಿಸಬೇಕೆಂದರು.
ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ
ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 29 ಮತಗಟ್ಟೆಗಳಿದ್ದು,
ಅದರಲ್ಲಿ ಮತಗಟ್ಟೆ ಸಂಖ್ಯೆ 5 ಹರಿಹರ, ಮತಗಟ್ಟೆ ಸಂಖ್ಯೆ
3 ದಾವಣಗೆರೆ ತಾಲ್ಲೂಕು ಮತ್ತು ಮತಗಟ್ಟೆ ಸಂಖ್ಯೆ 27
ಜಗಳೂರು ಈ ಮತಗಟ್ಟೆಗಳಲ್ಲಿ ಒಂದು ಸಾವಿರಕ್ಕಿಂತ
ಹೆಚ್ಚು ಮತದಾರರಿರುವ ಕಾರಣ 3 ಹೆಚ್ಚುವರಿ
ಮತಗಟ್ಟೆಗಳನ್ನು ಮಾಡುವ ಬಗ್ಗೆ ರಾಜಕೀಯ
ಮುಖಂಡರೊಂದಿಗೆ ಚರ್ಚಿಸಲಾಗಿ, ರಾಜಕೀಯ ಪಕ್ಷದ
ಮುಖಂಡರು ಮೌಖಿಕವಾಗಿ ಒಪ್ಪಿಗೆ ಸೂಚಿಸಿದರು.
ವೇಳಾಪಟ್ಟಿ : ಅ.01 ರಂದು ಅಧಿಸೂಚನೆಯನ್ನು
ಹೊರಡಿಸಲಾಗುವುದು. ಅ.08 ರಂದು ನಾಮಪತ್ರ ಸಲ್ಲಿಸಲು
ಕಡೆಯ ದಿನವಾಗಿರುತ್ತದೆ. ಅ.09 ರಂದು ನಾಮಪತ್ರ
ಪರಿಶೀಲನೆ ನಡೆಸಲಾಗುವುದು. ಅ.12 ರಂದು
ನಾಮಪತ್ರಗಳನ್ನು ಹಿಂಪಡೆಯುವ ದಿನವಾಗಿರುತ್ತದೆ.
ಅ.28 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ
ಮತದಾನ ನಡೆಸಲಾಗುವುದು. ನ.02 ರಂದು ಮತ ಎಣಿಕೆ
ಮಾಡಲಾಗುವುದು. ನ.05 ರಂದು ಚುನಾವಣೆ ಮುಕ್ತಾಯ
ದಿನವಾಗಿದೆ.
ಚುನಾವಣಾ ಕ್ಷೇತ್ರದ ವ್ಯಾಪ್ತಿ: ಕರ್ನಾಟಕ ಆಗ್ನೇಯ
ಪದವೀಧರರ ಕ್ಷೇತ್ರ ಚುನಾವಣೆ-2020 ಕ್ಕೆ ಸಂಬಂಧಿಸಿದಂತೆ
ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕುಗಳು
ಚುನಾವಣಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ ಎಂದು
ತಿಳಿಸಿದರು.
ಆಯೋಗದ ನಿರ್ದೇಶನದಂತೆ ಈ ಬಾರಿ ಅಂಚೆ
ಮತಪತ್ರಗಳನ್ನು ಹಿರಿಯ ನಾಗರಿಕರು (80 ವರ್ಷ
ವಯೋಮಾನದ ಮೇಲ್ಪಟ್ಟವರು), ಕೋವಿಡ್-19 ಸೋಂಕಿತರು
ಹಾಗೂ ಅಂಗವಿಕಲರು ಈ 3 ವರ್ಗದ ಮತದಾರರಿಗೆ
ನೀಡಲಾಗುವುದು
ಈಗಾಗಲೇ ಉಪವಿಭಾಗಾಧಿಕಾರಿಗಳು, ದಾವಣಗೆರೆ ಇವರನ್ನು
ಕೋವಿಡ್-19 ಎಸ್‍ಓಪಿ ಅನುಷ್ಠಾನಗೊಳಿಸಲು ಜಿಲ್ಲಾ ನೋಡಲ್
ಅಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಸಲಾಗಿರುತ್ತದೆ.
ಮುಂದುವರೆದು ಅಂಚೆ ಮತಪತ್ರಗಳ ಕಾರ್ಯಕ್ಕೆ
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ
ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ ಎಂದರು.
ಹಿರಿಯ ನಾಗರಿಕರು(80 ವರ್ಷ ಮೇಲ್ಪಟ್ಟವರು) ಇವರಿಗೆ
ಸಂಬಂಧಿಸಿದಂತೆ ಆಯುಕ್ತರು, ಮಹಾನಗರಪಾಲಿಕೆ ದಾವಣಗೆರೆ
ಇವರನ್ನು ಪಾಲಿಕೆ ವ್ಯಾಪ್ತಿಗೆ, ತಹಶೀಲ್ದಾರ್ ಇವರನ್ನು
ಗ್ರಾಮಾಂತರ ವ್ಯಾಪ್ತಿಗೆ, ಹರಿಹರ ತಹಶೀಲ್ದಾರ್ ಇವರನ್ನು
ಹರಿಹರ ತಾಲ್ಲೂಕು ವ್ಯಾಪ್ತಿಗೆ ಮತ್ತು ಜಗಳೂರು
ತಹಶೀಲ್ದಾರ್ ಇವರನ್ನು ಜಗಳೂರು ತಾಲ್ಲೂಕು ವ್ಯಾಪ್ತಿಗೆ
ನೇಮಕ ಮಾಡಿದೆ. ಭಾರತ ಚುನಾವಣಾ ಆಯೋಗದ
ನಿರ್ದೇಶನಗಳಂತೆ ಮೇಲ್ಕಂಡ ಮತದಾರರನ್ನು ಗುರುತಿಸಿ,
ನಮೂನೆ 12ಡಿ ಮತ್ತು ಅಗತ್ಯ ದಾಖಲೆಗಳನ್ನು
ಮತದಾರರಿಂದ ಪಡೆದು ಅ.03 ರೊಳಗಾಗಿ ಅನುಬಂಧ-1 ಲಿಸ್ಟ್
ಆಫ್ ಎವಿಎಸ್‍ಸಿ(ಆಬ್‍ಸೆಂಟಿ ವೋಟರ್ಸ್ ಆಫ್ ಸೀನಿಯರ್ ಸಿಟಿಜನ್ ಕ್ಯಾಟಗರಿ) ರಲ್ಲಿ
ಸಲ್ಲಿಸಬೇಕು.
ಅಂಗವಿಕಲರು ಈ ವರ್ಗಕ್ಕೆ ಸಂಬಂಧಿಸಿದಂತೆ ಆಯುಕ್ತರು,
ಮಹಾನಗರಪಾಲಿಕೆ ದಾವಣಗೆರೆ ಹಾಗೂ ಜಿಲ್ಲಾ ಅಂಗವಿಕಲರ
ಕಲ್ಯಾಣಾಧಿಕಾರಿ ದಾವಣಗೆರೆ ಇವರುಗಳು ತಹಶೀಲ್ದಾರ್,
ದಾವಣಗೆರೆ, ಹರಿಹರ ಮತ್ತು ಜಗಳೂರು ಇವರ
ಸಮನ್ವಯೊಂದಿಗೆ ಮೇಲ್ಕಂಡ ಮತದಾರರನ್ನು ಗುರುತಿಸಿ,
ನಮೂನೆ 12ಡಿ ಮತ್ತು ಅಗತ್ಯ ದಾಖಲೆಗಳನ್ನು
ಮತದಾರರಿಂದ ಪಡೆದು ಅ.03 ರೊಳಗಾಗಿ ಲಿಸ್ಟ್ ಆಫ್ ಎವಿಪಿಡಿ(ಆಬ್‍ಸೆಂಟಿ
ವೋಟರ್ಸ್ ಬಿಲಾಂಗಿಂಗ್ ಟು ಪಿಡಬ್ಲ್ಯುಡಿ ಕ್ಯಾಟಗರಿ)ರಲ್ಲಿ ಸಲ್ಲಿಸಬೇಕು.
ಕೋವಿಡ್ ಸೋಕಿಂತ ಮತದಾರರಿಗೆ ಸಂಬಂಧಿಸಿದಂತೆ
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ತಾಲ್ಲೂಕು
ವೈದ್ಯಾಧಿಕಾರಿಗಳು, ದಾವಣಗೆರೆ ಹರಿಹರ ಮತ್ತು ಜಗಳೂರು
ಇವರ ಸಮನ್ವಯದೊಂದಿಗೆ ಮೇಲ್ಕಂಡ ಮತದಾರರನ್ನು
ಗುರುತಿಸಿ, ನಮೂನೆ ನಮೂನೆ 12ಡಿ ಮತ್ತು ಅಗತ್ಯ
ದಾಖಲೆಗಳನ್ನು ಮತದಾರರಿಂದ ಪಡೆದು ಅ.03 ರೊಳಗಾಗಿ
ಲಿಸ್ಟ್ ಆಪ್ ಎವಿಸಿಓ(ಆಬ್‍ಸೆಂಟಿ ವೋಟರ್ಸ್ ಬಿಲಾಂಗಿಂಗ್ ಟೂ ಕೋವಿಡ್-19)ರಲ್ಲಿ
ಸಲ್ಲಿಸಬೇಕು.
ಸೆ.29 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ
ಪ್ರಯುಕ್ತ ನೀತಿ ಸಂಹಿತೆಗೆ ಸಂಬಂಧಿಸಿದ ನಿರ್ದೇಶಗಳನ್ನು
ಸಭೆಯಲ್ಲಿ ಓದಿ ತಿಳಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ
ಜಿ.ಕೆ.ಕೊಟ್ರಬಸಯ್ಯ, ಜೆಡಿಯು ಪಕ್ಷದ ಹೆಚ್.ಜಯ್ಯಪ್ಪ,
ಬಿಜೆಪಿಯ ವೈ.ಲಿಂಗರಾಜ್, ಸಿಪಿಐ ಪಕ್ಷದ ಹೆಚ್.ಜಿ.ಉಮೇಶ್, ಜೆಡಿಎಸ್‍ನ
ಜೆ.ಅಮಾನುಲ್ಲಾ ಖಾನ್, ಬಿಎಸ್‍ಪಿ ಯ ಹೆಚ್ ಮಲ್ಲೇಶ್, ಅಪರ
ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಮಹಾನಗರಪಾಲಿಕೆ
ಆಯುಕ್ತರಾದ ವಿಶ್ವನಾಥ್ ಮುದಜ್ಜಿ, ಉಪವಿಭಾಗಧಿಕಾರಿ
ಮಮತಾ ಹೂಸಗೌಡರ್, ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ , ಎಲ್ಲಾ
ತಾಲ್ಲೂಕುಗಳ ತಹಶೀಲ್ದಾರರು ಹಾಜರಿದ್ದರು.