ದಾವಣಗೆರೆ ಅ.1
    ‘ಪುಸ್ತಕ ಜ್ಞಾನಕ್ಕಿಂತ ಹಿರಿಯರ ಅನುಭವದ ಜ್ಞಾನ
ಹೆಚ್ಚಾಗಿದ್ದು, ಮನೆಯಲ್ಲಿ ಹಿರಿಯರು ಇರದಿದ್ದರೆ ಬದುಕಿಗೆ
ಸ್ಫೂರ್ತಿ ಹಾಗೂ ದಾರಿಗಳಿಲ’್ಲ ಎಂದು ಉಪವಿಭಾಗಾಧಿಕಾರಿ ಮಮತಾ
ಹೊಸಗೌಡರ್ ಅಭಿಪ್ರಾಪಟ್ಟರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಮತ್ತು
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಹಿರಿಯ
ನಾಗರಿಕರ ಸಂಘ ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರಿಕರ
ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸಂಘ
ಸಂಸ್ಥೆಗಳು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ
ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ
ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳ ಮಠದಲ್ಲಿ
ಗುರುವಾರ ಆಯೋಜಿಸಲಾಗಿದ್ದ ‘ವಿಶ್ವ ಹಿರಿಯ ನಾಗರಿಕರ
ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು
ಮಾತನಾಡಿದರು.
    ಕಾರ್ಯಕ್ರಮದಲ್ಲಿ ಪಾಲಕರ ಜೊತೆಗೆ ಮಕ್ಕಳನ್ನು
ಕರೆತರುವ ಪ್ರಯತ್ನ ಮಾಡಬೇಕು. ಆ ಮೂಲಕ ಅವರಿಗೆ
ತಿಳಿ ಹೇಳುವುದರೊಂದಿಗೆ ಸ್ಫೂರ್ತಿ ತುಂಬುವ
ಕೆಲಸವಾಗಬೇಕಿದೆ ಎಂದ ಅವರು, ಕುಟುಂಬ ನಿರ್ವಹಣೆಯಲ್ಲಿ
ಹಿರಿಯರ ಪಾತ್ರ ಮಹತ್ತರವಾಗಿದೆ. ಹಿರಿಯರಿಂದ
ಸಂಬಂಧಗಳು ಗಟ್ಟಿಯಾಗುತ್ತವೆ ಎಂದು ಹೇಳಿದರು.
    ಇದೊಂದು ಅರ್ಥಗರ್ಭಿತ ಕಾರ್ಯಕ್ರಮವಾಗಿದೆ. ಆದರೆ
ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ
ಹೆಚ್ಚಳವಾಗಿದ್ದು, ಇದು ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ.
ಮಕ್ಕಳು ತಂದೆ ತಾಯಿಗಳು ಇರದಿದ್ದರೆ ಅನಾಥಶ್ರಮ
ಸೇರುತ್ತಾರೆ. ಆದರೆ ಬದಲಾದ ಕಾಲಘಟ್ಟದಲ್ಲಿ ಮಕ್ಕಳಿದ್ದರೂ
ತಂದೆ ತಾಯಂದಿರು ವೃದ್ಧಾಶ್ರಮ ಸೇರುತ್ತಿದ್ದಾರೆ ಇದು

ಸರಿಯಲ್ಲ. ಮಕ್ಕಳು ಹೆತ್ತವರನ್ನು ಚೆನ್ನಾಗಿ
ನೋಡಿಕೊಳ್ಳುವ ಮೂಲಕ ವೃದ್ಧಾಶ್ರಮಗಳ ಸಂಖ್ಯೆ
ಕಡಿಮೆಯಾಗಿಸಬೇಕಿದೆ ಎಂದು ಕಿವಿಮಾತು ಹೇಳಿದರು.
    ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾದ
ಎಸ್.ಟಿ.ಕುಸುಮಶ್ರೇಷ್ಠಿ ಮಾತನಾಡಿ, ಸರ್ಕಾರದ
ಮಾರ್ಗಸೂಚಿಯನ್ವಯ ಅತ್ಯಂತ ಸರಳವಾಗಿ
ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ. ಹಿರಿಯ
ನಾಗರಿಕರ ಸಮಸ್ಯೆ ಬಗೆಹರಿಸಲು ಸರ್ಕಾರದ
ನಿಯಮಗಳಡಿಯಲ್ಲಿ ಅಧಿಕಾರಿಗಳು ಸ್ಪಂದಿಸಬೇಕು. ಆ
ಮೂಲಕ ನ್ಯಾಯ ಒದಗಿಸಲು ಪ್ರಯತ್ನಿಸಬೇಕು ಎಂದರು.
    ಮಕ್ಕಳು ವಯಸ್ಸಾದ ತಂದೆ ತಾಯಿಯನ್ನು
ವೃದ್ಧಾಶ್ರಮಕ್ಕೆ ಸೇರಿಸದಂತೆ ನೋಡಿಕೊಳ್ಳಬೇಕು.
ಹೆತ್ತವರನ್ನು ಗೌರದಿಂದ ನೋಡಿಕೊಳ್ಳಬೇಕು ಎಂದ
ಅವರು, ಕೊರೊನಾ ಸಂದರ್ಭ ಇದಾಗಿದೆ ಹಿರಿಯ ನಾಗರಿಕರು
ತಮ್ಮ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕು
ಎಂದು ಸಲಹೆ ನೀಡಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ
ಸಾಕಮ್ಮ ಗಂಗಾಧರನಾಯ್ಕ್, ಮಹಾನಗರಪಾಲಿಕೆ ಸದಸ್ಯ
ಮಂಜುನಾಥ್ ಗಡಿಗುಡಾಳ್, ಜಿಲ್ಲಾ ಹಿರಿಯ ನಾಗರಿಕರ ಸಂಘದ
ಗೌರವ ಕಾರ್ಯದರ್ಶಿ ಎಸ್.ಗುರುಮೂರ್ತಿ, ಹಿರಿಯ ನಾಗರಿಕರ
ಸಂಘದ ಸದಸ್ಯರಾದ ದೇವಾಚಾರ್, ಹಾಲಪ್ಪ, ಎ.ಜಯಣ್ಣ,
ವೆಂಕಟ್‍ರೆಡ್ಡಿ ಹಾಗೂ ಸಂಘದ ಪ್ರತಿನಿಧಿಗಳು ಹಾಜರಿದ್ದರು.

Leave a Reply

Your email address will not be published. Required fields are marked *