ದಾವಣಗೆರೆ ಅ.02
‘ಮತ್ತೊಬ್ಬರಲ್ಲಿ ಕಾಣ ಬಯಸುವ ಬದಲಾವಣೆ ಮೊದಲು
ನಿನ್ನಲ್ಲಿ ಆಗಲಿ’ ಎಂಬ ಗಾಂಧೀಜಿಯವರ ತತ್ವವನ್ನು ನಾವು
ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಶಾಂತಿ,
ನೆಮ್ಮದಿ ಮತ್ತು ಸುಧಾರಣೆ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ
ಮೊದಲು ನಾವು ಸತ್ಯ, ಧರ್ಮ, ಅಹಿಂಸೆಯನ್ನು ನಮ್ಮಲ್ಲಿ
ಕಂಡುಕೊಳ್ಳುವ ನಿರ್ಧಾರ ಇಂದು ಮಾಡೋಣ ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.
ಶುಕ್ರವಾರ ಮಹಾನಗರಪಾಲಿಕೆ ಆವರಣದಲ್ಲಿ ಕೋವಿಡ್
ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ
ಮಾರ್ಗಸೂಚಿಯನ್ವಯ ಸರಳವಾಗಿ ಏರ್ಪಡಿಸಲಾಗಿದ್ದ
ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ಅವರ
ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಗಾಂಧಿ ತತ್ವಗಳು, ಮೌಲ್ಯಗಳು ಎಂದಿಗೂ
ಆದರ್ಶಪ್ರಾಯ. ಸತ್ಯ, ಅಹಿಂಸೆ, ಧರ್ಮದ ಮಾರ್ಗದಲ್ಲಿ
ನಾವೆಲ್ಲರೂ ನಡೆಯುವ ಪ್ರಯತ್ನವನ್ನು ಮಾಡಬೇಕು.
ಸತ್ಯದ ಮಾರ್ಗವನ್ನು ಮೊದಲು ನಮ್ಮಲ್ಲಿ
ಅಳವಡಿಸಿಕೊಳ್ಳಬೇಕು, ಧರ್ಮದ, ಶಾಂತಿಯ ಮಾರ್ಗವನ್ನು
ಮೊದಲು ನಮ್ಮಲ್ಲಿ ನಾವು ಅಳವಡಿಸಿಕೊಂಡಲ್ಲಿ ಗಾಂಧೀಜಿಯವರ
ರಾಮರಾಜ್ಯದ ಕನಸು ನನಸಾಗುವುದು. ಅವರ ಹಾಗೆ ಬದುಕಿ
ನೋಡಿದಲ್ಲಿ ಮಾತ್ರ ಗಾಂಧೀಜಿ ಏನು ಎಂದು ತಿಳಿಯಲು ಸಾಧ್ಯ.
ಅವರನ್ನು ಮೊದಲು ಅಧ್ಯಯನ ಮಾಡಬೇಕು. ಆಗ ಅವರ
ಬಗ್ಗೆ ಹಗುರವಾಗಿ ಮಾತನಾಡಲು ಸಾಧ್ಯವಿಲ್ಲ. ಹಗುರವಾಗಿ
ಮಾತನಾಡುವವರನ್ನು ಉದಾಸೀನ ಮಾಡಿ, ಅವರ ಮಾರ್ಗದಲ್ಲಿ
ನಡೆಯುವ ಪ್ರಯತ್ನ ಮಾಡಬೇಕೆಂದರು.
ಜಗ ಮೆಚ್ಚಿದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್
ಶಾಸ್ತ್ರೀಜಿಯವರ ಸರಳ, ಸಜ್ಜನಿಕೆ ನಮಗೆ ಮಾದರಿಯಾಗಿದೆ.
ಸರಳತೆ ಅವರ ಜೀವನ ಸಂದೇಶವಾಗಿದೆ ಎಂದರು.
ಮಹಾನಗರಪಾಲಿಕೆ ಮಹಾಪೌರರಾದ ಬಿ.ಜಿ.ಅಜಯಕುಮಾರ್
ಮಾತನಾಡಿ, ಗಾಂಧೀಜಿಯವರ ಮುಖ್ಯವಾದ ತತ್ವಗಳಾದ
ಸತ್ಯ, ಅಹಿಂಸೆ, ನ್ಯಾಯದ ಹಾದಿಯಲ್ಲಿ ನಡೆಯಬೇಕಿದ್ದು,
ಇಂತಹ ಹಿರಿಯರ ಮಾರ್ಗದಲ್ಲಿ ನಡೆದರೆ ದೇಶ
ಸಮೃದ್ದಿಯಾಗುತ್ತದೆ. ಮನುಕುಲಕ್ಕೆ ಒಳಿತಾಗಲು
ಏನೇನು ಅಂಶಗಳು ಬೇಕೋ ಅವೆಲ್ಲವೂ ಅವರ
ನಡೆಯಲ್ಲಿವೆ. ಆದ ಕಾರಣ ನಾವೆಲ್ಲ ಗಾಂಧೀಜಿಯವರಂತಹ
ಹಿರಿಯರ ಮಾರ್ಗದಲ್ಲಿ ಸಾಗಬೇಕು ಎಂದರು.
ದೂಢಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ,
ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ
ಜಯಂತಿಯಂದು ನಮ್ಮ ಇತಿಹಾಸ ನೆನಪು
ಮಾಡಿಕೊಳ್ಳುತ್ತಿದ್ದೇವೆ. ಗಾಂಧೀಜಿಗೂ ನಮ್ಮ ಪಾಲಿಕೆ
ಮುಂದಿರುವ ಗಾಂಧಿ ಸ್ಮಾರಕಕ್ಕೂ ನಂಟಿದೆ. 1942 ರ ಆಗಸ್ಟ್ 9
ರಂದು ಗಾಂಧೀಜಿ ಕರೆ ನೀಡಿದ್ದ ಬ್ರಿಟಿಷರೇ ಭಾರತ ಬಿಟ್ಟು
ತೊಲಗಿ ಚಳುವಳಿಯ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ
ನಡೆದ ಪ್ರತಿಭಟನೆ ವೇಳೆ 6 ಜನ ಸ್ವಾತಂತ್ರ್ಯ
ಹೋರಾಟಗಾರರು ಬ್ರಿಟಿಷರ ಗುಂಡಿಗೆ ಬಲಿದಾನವಾದ ಸ್ಮರಣಾರ್ಥ
ಇಲ್ಲಿ ಗಾಂಧಿ ಸ್ಮಾರಕವನ್ನು ಸ್ಥಾಪಿಸಲಾಗಿದೆ ಎಂದರು.
ಗಾಂಧಿ ರಾಮರಾಜ್ಯದ ಕನಸು ಕಂಡಿದ್ದರು. ಸತ್ಯ, ಧರ್ಮ,
ಅಹಿಂಸೆಯ ಮಾರ್ಗಗಳನ್ನು ತೋರಿಸಿಕೊಟ್ಟರು. ಇವರ
ಹಾದಿಯಲ್ಲಿ ಹಿಂದೆಯೂ ಹಾಗೂ ಪ್ರಸ್ತುತದಲ್ಲಿಯೂ
ಅನೇಕರು ನಡೆಯುತ್ತಿದ್ದಾರೆ. ಗಾಂಧಿವಾದ ನಮ್ಮೆಲ್ಲರಿಗೂ
ಬೇಕಿದೆ. ಅಹಿಂಸೆ ಮತ್ತು ಕ್ರಾಂತಿಕಾರಕ ಹೋರಾಟದ ಫಲವಾಗಿ
ನಮಗೆ ಸ್ವಾತಂತ್ರ್ಯ ಲಭಿಸಿದೆ ಎಂದ ಅವರು ಲಾಲ್ ಬಹದ್ದೂರ್
ಶಾಸ್ತ್ರಿಯವರ ಪ್ರಾಮಾಣಿಕ ಆಡಳಿತ ಆದರ್ಶನೀಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ಗಾಂಧಿಯವರು ‘ನನ್ನ ಬದುಕೇ ನನ್ನ ಸಂದೇಶ’ ಎನ್ನುವ
ರೀತಿಯಲ್ಲಿ ಬದುಕಿದರು. ಅವರ ಮೌಲ್ಯಗಳು,
ತತ್ವಾದರ್ಶಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಲ್ಲಿ
ನಮ್ಮ ವೈಯಕ್ತಿ ಮತ್ತು ವೃತ್ತಿ ಜೀವನ
ಆದರ್ಶಪ್ರಾಯವಾಗುತ್ತದೆ ಎಂದರು.
ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಗಾಂಧೀಜಿ
ನಮ್ಮಂತೆ ಸಾಮಾನ್ಯ ವ್ಯಕ್ತಿಯಂತಿದ್ದರೂ ಅವರ ನಿಲುವು
ನಿರ್ಧಾರಗಳಿಂದ ಅವರು ಮಹಾತ್ಮರಾಗಿದ್ದಾರೆ. ಎಲ್ಲ
ಧರ್ಮಗ್ರಂಥಗಳ ಸಾರವನ್ನು ಅರಿತು ನಮಗೆ ತಿಳಿಸಿದ್ದಾರೆ.
ಗಾಂಧೀಜಿಯವರ ಬಗ್ಗೆ ಹಗುರವಾಗಿ ಕೆಲವರು
ಮಾತನಾಡುತ್ತಾರೆ. ಆದರೆ ಹಾಗೆ ಮಾಡುವ ಮುನ್ನ ಅವರ
ಜೀವನದ ವಾಸ್ತವಾಂಶಗಳನ್ನು ತಿಳಿದುಕೊಳ್ಳಬೇಕು. ಹರಿಜನ
ಉದ್ದಾರಕರಾದ ಅವರು ಹೆಣ್ಣುಮಕ್ಕಳು ಮಧ್ಯರಾತ್ರಿಯಲ್ಲಿ
ಸ್ವತಂತ್ರವಾಗಿ ಓಡಾಡುವ ಸ್ಥಿತಿ ಬಂದಾಗ ನಮಗೆ ನಿಜವಾದ
ಸ್ವಾತಂತ್ರ್ಯ ಸಿಕ್ಕಹಾಗೆ ಎಂದಿದ್ದರು. ಈ ಕನಸು ನನಸಾಗುವ
ದಾರಿ ತುಂಬಾ ಉದ್ದವಾಗಿದೆ. ನಾವೆಲ್ಲ ಸೇರಿ ಅವರ ಕನಸನ್ನು
ನನಸು ಮಾಡುವ ಪ್ರಯತ್ನ ಮಾಡಬೇಕೆಂದರು.
ಸುಶ್ರಾವ್ಯ ಗಾಂಧಿ ಪ್ರಿಯ ಗಾಯನ : ಕಾರ್ಯಕ್ರಮದಲ್ಲಿ
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕರು
ಗಾಂಧೀಜಿಯವರಿಗೆ ಪ್ರಿಯವಾಗಿದ್ದ ವೈಷ್ಣವಜನತೋ,
ರಘುಪತಿ ರಾಜಾರಾಂ ಸೇರಿದಂತೆ ಇತರೆ ಗೀತೆಗಳ ಸುಶ್ರಾವ್ಯ
ಗಾಯನ ಪ್ರಸ್ತುತಪಡಿಸಿದರು. ಹಾಗೂ ಸರ್ವಧರ್ಮ
ಪ್ರಾರ್ಥನೆಯನ್ನು ಮಾಡಿದರು.
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸ್ವಾಗತಿಸಿದರು.
ಸಂಗೀತ ಶಿಕ್ಷಕ ಅಜಯ್ ನಾರಾಯಣ್ ಪ್ರಾರ್ಥಿಸಿದರು. ಶಿಕ್ಷಣ
ಸಂಯೋಜಕ ಕೆ.ಜಿ.ಗೌಡ್ರು ನಿರೂಪಿಸಿದರು. ಡಿಡಿಪಿಐ
ಸಿ.ಆರ್.ಪರಮೇಶ್ವರಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವರದಿಗಾರರ ಕೂಟ ಹಾಗೂ
ಕ್ಯಾನ್ಸರ್ ಫೌಂಡೇಷನ್ ವತಿಯಿಂದ ಅ.10 ರಂದು ನಗರದಲ್ಲಿ
ಏರ್ಪಡಿಸಲಾಗಿರುವ ‘ಕ್ಯಾನ್ಸರ್ ನಡೆ ಕೋವಿಡ್ ತಡೆ’
ಅಭಿಯಾನಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಗಣ್ಯರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಮಹಾಪೌರರಾದ ಸೌಮ್ಯ
ನರೇಂದ್ರಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀರೇಶ್,
ಪ್ರಸನ್ನ ಕುಮಾರ್, ಪಾಲಿಕೆ ವಿರೋಧ ಪಕ್ಷದ
ನಾಯಕರಾದ ಎ. ನಾಗರಾಜ್, ಪಾಲಿಕೆ ಸದಸ್ಯರು, ಅಪರ
ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತರಾದ
ವಿಶ್ವನಾಥ್ ಮುದಜ್ಜಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್,
ದೂಢಾ ಆಯುಕ್ತ ಕುಮಾರಸ್ವಾಮಿ,
ನಗರಾಭಿವೃದ್ದಿಕೋಶದ ಯೋಜನಾ ನಿರ್ದೇಶಕಿ ನಜ್ಮಾ,
ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ದಾವಣಗೆರೆ
ತಹಶೀಲ್ದಾರ್ ಗಿರೀಶ್ ಇತರೆ ಅಧಿಕಾರಿಗಳು ಹಾಜರಿದ್ದರು.