ಮಾಯಕೊಂಡ ಪೊಲೀಸ್ ಠಾಣೆಯಲ್ಲಿನ “ಲಾಕಪ್ ಡೆತ್” ಪ್ರಕರಣ.*

ಮಾಯಕೊಂಡ ಪೊಲೀಸ್ ಠಾಣೆಯು ದಾವಣಗೆರೆ ಜಿಲ್ಲೆಯಲ್ಲಿದ್ದು, ದಾವಣಗೆರೆ ಗ್ರಾಮಾಂತರ ವೃತ್ತ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ವ್ಯಾಪ್ತಿಗೆ ಬರುತ್ತದೆ.ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 44 ಹಳ್ಳಿಗಳು ಬರುತ್ತದೆ. ಮಾಯಕೊಂಡ ಪೊಲೀಸ್ ಠಾಣೆಯು 1936 ರಲ್ಲಿ ಆರಂಭವಾಗಿದೆ. ಮಾಯಕೊಂಡ ಠಾಣಾ ವ್ಯಾಪ್ತಿಯಲ್ಲಿ 2011 ರ ಜನಗಣತಿ ಪ್ರಕಾರ ಸುಮಾರು 91,000 ಜನಸಂಖ್ಯೆಯಿದೆ. ಇಲ್ಲಿನ ಜನರು ಪ್ರಮುಖವಾಗಿ ಕೃಷಿಯನ್ನೇ ಅವಲಂಬಿಸಿ ಕಾಯಕ ಜೀವಿಗಳಾಗಿದ್ದಾರೆ. ಇಲ್ಲಿನ ಜನರು ಕಾನೂನು ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಂಡು ಸದಾ ಕಾನೂನನ್ನು ಗೌರವಿಸುತ್ತಾ ಬಂದಿದ್ದಾರೆ.ಇಲ್ಲಿನ ಜನರು ಶಾಂತಿ ಪ್ರಿಯರೆಂದರೆ ಅತಿಶಯೋಕ್ತಿಯಾಗಲಾರದು. ಇದುವರೆಗೂ ಕಾನೂನು ಶಾಂತಿ ಪಾಲನೆಗೆ ಸಂಬಂಧಿಸಿದ ಒಂದೇ ಒಂದು ಗಂಭೀರವಾದ ಪ್ರಕರಣ ಸಂಭವಿಸಿರುವುದಿಲ್ಲ ಎಂಬುದು ಗಮನಾರ್ಹವಾದ ಅಂಶವಾಗಿದೆ.

ನಾನು ಈ ಹಿಂದೆ ದಾವಣಗೆರೆ ಗ್ರಾಮಾಂತರ ವೃತ್ತದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ದಿನಾಂಕ :04-09-2008 ರಿಂದ 09-03-09 ರವರೆಗೆ ಹಾಗೂ ದಿ : 08-07-2009 ರಿಂದ 08-08-2012 ರವರಗೆ ಒಟ್ಟು ಮೂರುವರೆ ವರ್ಷಗಳ ಕಾಲ ಎರಡು ಬಾರಿ ಕರ್ತವ್ಯ ನಿರ್ವಹಿಸಿದ್ದೇನೆ ಎಂಬುದನ್ನು ನೆನಪಿಸಿಕೊಳ್ಳ ಬಯಸುತ್ತೇನೆ.

ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಆದ ಈ ಘಟನೆ ದುರದೃಷ್ಟಕರ ಹೀಗಾಗಬಾರದಿತ್ತು ಎನ್ನುವುದರ ಜೊತೆಗೆ ಇದೊಂದು ಕಾನೂನು ಬಾಹಿರ ನಡೆಯಾಗಿದೆ. ಅದಕ್ಕೂ ಮೀರಿ ಇದು ಸ್ಪಷ್ಟವಾಗಿ “ಲಾಕ್ ಅಪ್ ಡೆತ್”ಪ್ರಕರಣ ಆಗುತ್ತದೆ. ಪ್ರಸ್ತುತ ಇದು ತೀರಾ ಗಂಭೀರವಾದ ಪ್ರಕರಣವೆಂದು ಪರಿಗಣಿಸಿರುತ್ತಾರೆ.

*ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿಯೇ ಕರ್ತವ್ಯ ನಿರ್ವಹಿಸಬೇಕು ಹಾಗೂ ಮಾನವ ಹಕ್ಕುಗಳನ್ನು ಗೌರವಿಸಲೇಬೇಕು. ಪೊಲೀಸರು ಮಾನವ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಲೇಬೇಕು.*

  *ಪೊಲೀಸರು ಸಾರ್ವಜನಿಕರ ಆಸ್ತಿಪಾಸ್ತಿಯ ರಕ್ಷಣೆಯ ಜವಾಬ್ದಾರಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ತರ ಹೊಣೆಗಾರಿಕೆಯಿದೆ. ಪೊಲೀಸರೇ ನಿಯಮ ಪಾಲನೆ ಮಾಡದಿದ್ದರೆ   ಜನರು ಪೊಲೀಸರ ಬಗ್ಗೆ ನಂಬಿಕೆ ವಿಶ್ವಾಸ ಕಳೆದುಕೊಳ್ಳುತ್ತಾರೆ.*
   *ಈಗ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ತಪ್ಪಿತಸ್ಥ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ನಿಯಮಾನುಸಾರ "ಲಾಕಪ್ ಡೆತ್ ಪ್ರಕರಣ"ವನ್ನು ಯಾವುದೇ ರೀತಿ ವಿಳಂಬ ಮಾಡದೆ ದಾಖಲಿಸಿರುತ್ತಾರೆ.ಈ ಪ್ರಕರಣದ ಮುಂದಿನ ತನಿಖೆಯನ್ನು ಸಿಐಡಿ ಘಟಕದ ಅಧಿಕಾರಿಗಳಿಗೆ ಹಸ್ತಾಂತರಿಸಿರುತ್ತಾರೆ.* 

ಈ ಗಂಭೀರವಾದ ಪ್ರಕರಣದಲ್ಲಿ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ನರಸಿಂಹ ವಿ.ತಾಮ್ರಧ್ವಜ ಇವರು ಕೂಡಲೇ ಮಾಯಕೊಂಡ ಪೊಲೀಸ್ ಠಾಣೆಗೆ ಭೇಟಿ ನೀಡಿ ಕ್ರಮಬದ್ಧವಾಗಿ ಲಾಕಪ್ ಡೆತ್ ಪ್ರಕರಣದ ವಿಧಿ ವಿಧಾನ ಅನಸರಿಸಿದ್ಧಾರೆ.ಈ ಲಾಕಪ್ ಡೆತ್ ಪ್ರಕರಣವನ್ನು ಈಗಾಗಲೇ ಸಿಐಡಿ ಘಟಕದ ಪೊಲೀಸ್ ಉಪಾಧೀಕ್ಷಕರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿರುತ್ತಾರೆ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಹನಮಂತರಾಯರವರು ಕೂಡಲೇ ಮಾಯಕೊಂಡ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಟ್ಲಾಪುರದ ನಿವಾಸಿ ಮೃತ ಮರಳಸಿದ್ದಪ್ಪ ಅವರ ಕುಟುಂಬದ ಸದಸ್ಯರು ಅವರ ಎಲ್ಲಾ ಸಂಬಂಧಿಕರು,ಹಾಗೂ ಠಾಣೆಯ ಬಳಿ ನೆರೆದ ಜನರಿಗೆ ಮಾಯಕೊಂಡ ಪೊಲೀಸ್ ಠಾಣೆಯ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕಾನೂನು ಕ್ರಮದ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಮಾಧಾನ ಪಡಿಸಿದ್ದಾರೆ.ಅಲ್ಲದೇ ಸೂಕ್ತ ರೀತಿ ಪರಿಶೀಲಿಸಿ ಮೇಲ್ನೋಟಕ್ಕೆ ಕಂಡುಬಂದ ನಾಲ್ವರು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಪೂರ್ವ ವಲಯದ ಐಜಿಪಿ ಶ್ರೀ ರವಿ ಎಸ್.ಐಪಿಎಸ್, ಇವರು ಠಾಣೆಗೆ ಭೇಟಿ ನೀಡಿ ಸೂಕ್ತ ಪರಿಶೀಲಿಸಿ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಸಕಾಲಿಕ ಮಾರ್ಗದರ್ಶನ ನೀಡಿದ್ದಾರೆ.
ಮಾಯಕೊಂಡ ಪೊಲೀಸ್ ಠಾಣೆಯ ಲಾಕಪ್ ಡೆತ್ ಪ್ರಕರಣದಲ್ಲಿ ನಿಯಮಾನುಸಾರ ಚಾಚೂ ತಪ್ಪದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವುದು ದಾವಣಗೆರೆ ಜಿಲ್ಲೆಯ ಸಾರ್ವಜನಿಕರಲ್ಲಿ ಹೆಚ್ಚಿನ ನಂಬಿಕೆ – ವಿಶ್ವಾಸ ಮೂಡಿಸಿದೆ,ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಸಮಯೋಚಿತವಾಗಿ ಪಾರದರ್ಶಕವಾಗಿ,ಹಾಗೂ ಸಕಾಲಿಕ ವಾಗಿ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ.
ಮಾಯಕೊಂಡ ಪೊಲೀಸ್ ಠಾಣೆಯ “ಲಾಕಪ್ ಡೆತ್” ಪ್ರಕರಣ ತನಿಖೆಯ ಹಂತದಲ್ಲಿ ಇರುವುದರಿಂದ ಪ್ರಕರಣದ ತನಿಖೆಯ ಕುರಿತು ಇಲ್ಲಿ ಯಾವುದೇ ರೀತಿ ಚರ್ಚಿಸುವುದು ಸಮಂಜಸವಲ್ಲ.
ಪ್ರಸ್ತುತ ಸಿಐಡಿ ವಿಶೇಷ ಘಟಕದ ಶ್ರೀ ಗಿರೀಶ್, ಡಿವೈಎಸ್ಪಿ ಇವರು ತನಿಖಾಧಿಕಾರಿಗಳಾಗಿ ಮಾಯಕೊಂಡಕ್ಕೆ ಆಗಮಿಸಿದ್ದು, ನಿಷ್ಪಕ್ಷಪಾತವಾದ ಹಾಗೂ ಪಾರದರ್ಶಕವಾದ ತನಿಖೆಯನ್ನು ನಡೆಸುತ್ತಿದ್ದಾರೆ.
ಜಿ.ಎ.ಜಗದೀಶ್,
ಪೊಲೀಸ್ ಅಧೀಕ್ಷಕರು,(ನಿ)

Leave a Reply

Your email address will not be published. Required fields are marked *