ಚಿಕ್ಕಮಗಳೂರು.ಅ.೧೧: ಗ್ರಾಮಗಳ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಕಳೆದ ೨೦೧೮ ಚುನಾವಣೆ ನಂತರದಲ್ಲಿ ಹಿರೇಕೊಳಲೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೭ ಕೋಟಿ ೪೨ ಲಕ್ಷ ರೂ ಮಂಜೂರು ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಹೇಳಿದರು.
ಅವರು ಇಂದು ಹಿರೇಕೊಳಲೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಹಿರೇಕೊಳಲೆ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ರೂ. ೨ ಕೋಟಿ ೬೮ ಲಕ್ಷಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು ಕಾಮಗಾರಿ ಪ್ರಾರಂಭವಾಗುವುದು ಮಾತ್ರ ಬಾಕಿ ಇದೆ ಹಾಗೂ ಕಳೆದ ೨ ವರ್ಷಗಳ ಅವಧಿಯಲ್ಲಿ ಹಿರೇಕೊಳಲೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೭ ಕೋಟಿ ೪೨ ಲಕ್ಷ ರೂ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಇತ್ತೀಚಿಗೆ ಚಿಕ್ಕಮಗಳೂರು ರಾಜ್ಯ, ಹೊರರಾಜ್ಯಗಳ ಪ್ರವಾಸಿಗರ ಗಮನ ಸೆಳಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮುಳ್ಳಯನಗಿರಿ, ಕುದುರೆಮುಖ, ದೇವರಮನೆ, ಹಿರೇಕೊಳಲೆ, ಅಯ್ಯನಕೆರೆ ಹಾಗೂ ಗಿರಿಶ್ರೇಣಿ ಪ್ರದೇಶಗಳಿಗೆ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಸ್ವಿಡ್ಜರ್‌ಲ್ಯಾಂಡ್‌ಗೂ ಮೀರಿಸುವ ನಿಸರ್ಗ ಸೌಂದರ್ಯ ಚಿಕ್ಕಮಗಳೂರಿನ ಭಾಗಗಳಲ್ಲಿದ್ದು ಈ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಸಿಗರನ್ನು ಸೆಳೆದು ಸ್ಥಳೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಶೃಷ್ಠಿಸಲು ಸಾಧ್ಯವಾಗುತ್ತದೆ ಎಂದರು.
ಈಗಾಗಲೇ ಚಿಕ್ಕಮಗಳೂರಿನಿಂದ ಬೇಲೂರಿಗೆ, ಬೇಲೂರಿನಿಂದ ಹಾಸನಕ್ಕೆ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಕಲ್ಪಿಸಲು ಕೇಂದ್ರ ಸಚಿವರಾದ ನಿತಿನ್ ಘಡ್ಕರಿಯವರನ್ನು ಭೇಟಿ ಮಾಡಿ ಚರ್ಚಿಸಲಾಗಿದ್ದು, ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಭರವಸೆಯನ್ನು ನೀಡಿದ್ದಾರೆ ಹಾಗೂ ಕಡೂರು-ಚಿಕ್ಕಮಗಳೂರು ಹಾಗೂ ಮೂಡಿಗೆರೆ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು ಸಾಕಷ್ಟು ಕೆಲಸ ಮುಗಿದಿವೆ ಮತ್ತು ಚಿಕ್ಕಮಗಳೂರಿನಿಂದ ಹಾಸನಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವುದಕ್ಕೂ ಈಗಾಗಲೇ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.
ಜಿಲ್ಲೆಯ ಬಹುದಿನಗಳ ಕನಸಾದ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದು ಕೆಲದಿನಗಳಲ್ಲೇ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇರಿಸಿಕೊಂಡು ಆದ್ಯತೆಯ ಮೆರೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ಹಿರೇಕೊಳಲೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಬ್ಯಾಗದಹಳ್ಳಿ- ಹೆದ್ದರಹಳ್ಳಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ೧ ಕೋಟಿ, ಬ್ಯಾಗದಹಳ್ಳಿ ಕೋಳಿಫಾರಂ ರಸ್ತೆ ಹಾಗೂ ಪರಿಶಿಷ್ಟ ಜಾತಿಯವರ ಮನೆಗಳಗೆ ಹೋಗುವ ಕಾಂಕ್ರೀಟ್ ರಸ್ತೆಗೆ ೨೫ ಲಕ್ಷ, ವಡಯರಪುರ ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ ೨೦ ಲಕ್ಷ, ಹಿರೇಕೊಳಲೆ ಬಸ್ ನಿಲ್ದಾಣದಿಂದ ಧರಗುಣಿ ರಸ್ತೆ ಅಭಿವೃದ್ಧಿಗೆ ೬೦ ಲಕ್ಷ, ಹೊಸಪುರ ಹರಿಜನ ಕಾಲೋನಿ ರಸ್ತೆಗೆ ೧ ಕೋಟಿ, ಹೊಸಪುರ ಕ್ರಾಸ್‌ನಿಂದ ಉರುಳ್ಪಾಲ್ ರಸ್ತೆ ಅಭಿವೃದ್ಧಿಗೆ ೬೦ ಲಕ್ಷ ರೂಗಳನ್ನು ಮಂಜೂರು ಮಾಡಿ ಕೆಲವು ರಸ್ತೆಗಳ ಉದ್ಘಾಟನೆ ಹಾಗೂ ಶಂಕುಸ್ಥಾನೆ ಕಾರ್ಯಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆ ಅಭಿವೃದ್ಧಿ ಪಡಿಸುತ್ತಿರುವ ಬಗ್ಗೆಯೂ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದು, ಮುಂದಿನ ಮೂರು ವರ್ಷಗಳ ನಂತರದಲ್ಲಿ ಕೆರೆಯ ಅಭಿವೃದ್ಧಿಯಾದ ನಂತರ ಅವರುಗಳಿಗೆ ಉತ್ತರ ದೊರೆಯಲಿದೆ ಹಾಗೂ ಇನ್ನೂ ಯಾವ-ಯಾವ ಕಾಮಗಾರಿಗಳು ಬಾಕಿ ಇದೆ ಅವುಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜೆ. ಸೋಮಶೇಖರಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಿಗಳಾದ ರಮೇಶ್, ರೇಖಾ ಅನಿಲ್‌ಕುಮಾರ್, ದ್ರಾಕ್ಷಾಯಿಣಿ ಪೂರ್ಣೇಶ್, ಎ.ಪಿ.ಎಂ.ಸಿ ಅಧ್ಯಕ್ಷ ಶಿವಣ್ಣ ಹಾಗೂ ಮುಖಂಡ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.