ದಾವಣಗೆರೆ ಅ.12
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಅ. 13 ಮತ್ತು 14 ರಂದು ಪಿಜಿಸಿಇಟಿ (ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ) ಹಾಗೂ ಡಿಸಿಇಟಿ (ಡಿಪ್ಲೋಮಾ ಪ್ರವೇಶ ಪರೀಕ್ಷೆ) ಪರೀಕ್ಷೆ ನಡೆಯಲಿದ್ದು, ಕೋವಿಡ್ ಸೋಂಕು ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ದಾವಣಗೆರೆಯ ಸಿಜೆ ಆಸ್ಪತ್ರೆಯಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜನ್ನು ವಿಶೇಷ ಪರೀಕ್ಷಾ ಕೇಂದ್ರವನ್ನಾಗಿ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಪಿಜಿಸಿಇಟಿ ಮತ್ತು ಡಿಸಿಇಟಿ ಪರೀಕ್ಷೆಗಳು ಅ. 13 ಮತ್ತು 14 ರಂದು ದಾವಣಗೆರೆಯ 07 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಪರೀಕ್ಷಾ ಕೇಂದ್ರಗಳ ಜೊತೆಗೆ ಒಂದು ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್ ಎಂದು ಘೋಷಿಸಿ, ಕೋವಿಡ್ ಪಾಸಿಟೀವ್ ಹೊಂದಿರುವ ಅಭ್ಯರ್ಥಿಗಳು ಇಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆಗೊಳಿಸಲಾಗುತ್ತಿದ್ದು, ಇದರನ್ವಯ ದಾವಣಗೆರೆಯ ಸಿಜೆ ಆಸ್ಪತ್ರೆಯಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜನ್ನು ವಿಶೇಷ ಪರೀಕ್ಷಾ ಕೇಂದ್ರವನ್ನಾಗಿ ಕಾಯ್ದಿರಿಸಲಾಗಿದೆ. ಅಲ್ಲದೆ ಈ ಪರೀಕ್ಷಾ ಕೇಂದ್ರಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ್-9740670478 ಇವರನ್ನು ಈ ಕೇಂದ್ರದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅಲ್ಲದೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ದೇವರಾಜ್-9880334729 ಇವರನ್ನು ಪರೀಕ್ಷಾ ಮೇಲ್ವಿಚಾರಕರನ್ನಾಗಿ ನಿಯೋಜಿಸಿದೆ. ನಳೀನಾಕ್ಷಿ, ಪ್ರಾಂಶುಪಾಲರು, ಸರ್ಕಾರಿ ನರ್ಸಿಂಗ್ ಕಾಲೇಜು ಇವರನ್ನು ಕೂಡ ಪರೀಕ್ಷಾ ಕೇಂದ್ರದ ಜವಾಬ್ದಾರಿ ನೀಡಲಾಗಿದೆ. ಕೋವಿಡ್ ಸಹಾಯವಾಣಿ ಕೇಂದ್ರ-1077 ಕ್ಕೆ ಸಂಪರ್ಕಿಸಲು ಅವಕಾಶವಿದೆ.
ಕೋವಿಡ್ ಪಾಸಿಟಿವ್ ಇರುವ ಅಭ್ಯರ್ಥಿ ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಅಂತಹವರ ವಿವರಗಳನ್ನು ನೊಂದಾಯಿಸಿ, ಆ ವಿದ್ಯಾರ್ಥಿಗೆ ಪರೀಕ್ಷೆಗೆ ಹಾಜರಾಆಗಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ನೋಡಲ್ ಅಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಪರೀಕ್ಷಾ ಮೇಲ್ವಿಚಾರಕರು, ಕೋವಿಡ್ ಸೋಂಕಿತ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ಸಂಚಾರ ವ್ಯವಸ್ಥೆ, ಮಧ್ಯಾಹ್ನದ ಊಟೋಪಚಾರದ ವ್ಯವಸ್ಥೆ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.