ದಾವಣಗೆರೆ ಅ.13
ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡಿ, ಬದಲಾದ ಈ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಪ್ರಗತಿ ಮತ್ತು ಶೈಕ್ಷಣಿಕ ಕಲಿಕೆಯ ಉದ್ದೇಶದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ನಡೆಸುವುದು ಅತ್ಯಗತ್ಯವಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ ಅವರು ಹೇಳಿದರು.
ಪಿಯುಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸುವುದರ ಕುರಿತು ದಾವಣಗೆರೆಯಲ್ಲಿ ಪ್ರಾಂಶುಪಾಲರುಗಳಿಗೆ ಆನ್ಲೈನ್ ತರಗತಿಯ ಬಗ್ಗೆ ಇತ್ತೀಚೆಗೆ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡಿದ್ದು, ಇದರ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ. ಬದಲಾದ ಈ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಪ್ರಗತಿ ಮತ್ತು ಶೈಕ್ಷಣಿಕ ಕಲಿಕೆಯ ಉದ್ದೇಶದಿಂದ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ನಡುವೆ ನಿಕಟ ಸಂಪರ್ಕ ಏರ್ಪಡಿಸಲು ಉದ್ದೇಶಿಸಿದೆ. ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ಇರಬೇಕು ಹಾಗೂ ಪರೀಕ್ಷೆಯ ಫಲಿತಾಂಶದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಹೀಗಾಗಿ ಜಿಲ್ಲೆಯ ಆಯಾ ಕಾಲೇಜಿನವರು ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಮಾಡಬೇಕು ಎಂದರು.
ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಸಾದ್ ಬಂಗೇರ.ಎಸ್ ಅವರು, ಜೂಮ್ಮಿಟ್, ಜಿಯೋಮೀಟ್, ಗೂಗಲ್ ಮೀಟ್ ಗಳ ಮೂಲಕ ಆನ್ಲೈನ್ ತರಗತಿಗಳನ್ನು ನಡೆಸುವ ಬಗೆ ಕುರಿತು ಉಪನ್ಯಾಸಕರುಗಳಿಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಂಗನಾಥ್.ಆರ್ ಹಾಗೂ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು ಆನ್ಲೈನ್ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.