ದಾವಣಗೆರೆ ಅ.22
ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ಕರ್ತವ್ಯ ನಿರ್ವಹಿಸಿದಾಗ ಮಾತ್ರ ನಮ್ಮ ಹಕ್ಕು ಕೇಳಲು ಅರ್ಹರಾಗುತ್ತೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಸಂಘಟನೆ ಸಂಯುಕ್ತಾಶ್ರಯದಲ್ಲಿ ನಗರದ ಹಳೇ ಕೋರ್ಟ್ ಆವರಣದಲ್ಲಿ ಗುರುವಾರ ಸಂವಿಧಾನ ದಿನಾಚರಣೆ ಅಭಿಯಾನ ಅಂಗವಾಗಿ ಆಯೋಜಿಸಲಾಗಿದ್ದ ‘ಮೂಲಭೂತ ಕರ್ತವ್ಯಗಳು’ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರು ಇಂದು ಕೇವಲ ಹಕ್ಕುಗಳನ್ನು ಮಾತ್ರ ಕೇಳುತ್ತಿದ್ದಾರೆ. ಆದರೆ ತಮ್ಮ ಮೂಲಭೂತ ಕರ್ತವ್ಯಗಳನ್ನು ಮರೆಯುತ್ತಿದ್ದು, ಇದು ಸರಿಯಲ್ಲ. ಭಾರತ ದೇಶ ಹಲವು ಜಾತಿ, ಮತ, ಪಂಥ, ಧಾರ್ಮಿಕ ಹಾಗೂ ಸಾಂಸ್ಕøತಿಕ ವೈವಿಧ್ಯತೆ ಹೊಂದಿದೆ. ಈ ಹಿನ್ನೆಲೆಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರಬೇಕಾಗಿದೆ ಎಂದರು.
ವಕೀಲ ಅನಿಸ್ ಪಾಶಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಮೂಲಭೂತ ಕರ್ತವ್ಯಗಳು ಜನಸಾಮಾನ್ಯರಿಗೆ ಅಷ್ಟೇ ಅಲ್ಲ, ಜನಪ್ರತಿನಿಧಿಗಳಿಗೂ ತಿಳಿಯಪಡಿಸಬೇಕಿದೆ. ಬಂದ್ ಸಂದರ್ಭದಲ್ಲಿ ಸಾರ್ವಜನಿಕ ಸ್ವತ್ತುಗಳನ್ನು ಯಾರೂ ನಾಶ ಮಾಡಬಾರದು. ಅವುಗಳನ್ನು ಸಂರಕ್ಷಿಸಬೇಕಾಗಿದ್ದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದೇಶವು ನಮ್ಮ ಮನೆ ಎಂದು ತಿಳಿದು ಸಾರ್ವಜನಿಕ ಸ್ವತ್ತುಗಳ ರಕ್ಷಣೆಗೆ ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕು ಎಂದರು.
1975ರಲ್ಲಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಸ್ವರ್ಣಸಿಂಗ್ ಆಯೋಗದ ಮೂಲಕ 51ಎ ಅನುಸೂಚಿತ 42ನೇ ತಿದ್ದುಪಡಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಜಾರಿಗೆ ತರಲಾಯಿತು. ಜೊತೆಗೆ ಪ್ರತಿಯೊಬ್ಬರಿಗೂ ಶಿಕ್ಷಣ ಲಭಿಸುವ ಸಲುವಾಗಿ 2006 ರ 86ನೇ ತಿದ್ದುಪಡಿಯಲ್ಲಿ 6 ವರ್ಷದಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕು ಕಾಯ್ದೆ ಜಾರಿಗೆ ತರಲಾಗಿದೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರಾದ ಸದಸ್ಯ ಅರುಣಕುಮಾರ್ ಎಲ್.ಎಚ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ಎಲ್ಲ ಮಹನೀಯರನ್ನು ನೆನಪಿಸಿಕೊಂಡು, ಗೌರವಿಸುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ. ಅಂದು ದೇಶಕ್ಕಾಗಿ ಹೋರಾಡಿ 27ನೇ ವರ್ಷ ವಯಸ್ಸಿನಲ್ಲಿಯೇ ಬ್ರಟಿಷ್‍ರ ನೇಣಿಗೆ ಕೊರಳೊಡ್ಡಿದ ಕ್ರಾಂತಿಕಾರಿ ಅಷ್ಪಾಖುಲ್ಲಾ ಖಾನ್ ರವರ ಜನ್ಮದಿನವಾಗಿದೆ ಎಂದು ಸ್ಮರಿಸಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಲಿಂಗರಾಜ್ ಬಿ.ಎಸ್ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರವು ಅವಿರತ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಕಾನೂನಿನ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ. ಅದೇ ರೀತಿ ನಾವೆಲ್ಲರೂ ಸಮಾಜದಲ್ಲಿ ಮೌಢ್ಯತೆ ಕಂದಾಚಾರ ತೊಡೆದು ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೀಡಿ ಕಾರ್ಮಿಕರ ಸಂಘದ ಯೂನಿಯನ್ ಅಧ್ಯಕ್ಷೆ ಜಬೀನ ಖಾನಂ, ವಕೀಲರಾದ ಕಲೀಂ, ಅಬ್ದುಲ್ ಜಬ್ಬಾರ್, ಅಬ್ದುಲ್ ಸಮದ್ ಮತ್ತಿತರರು ಇದ್ದರು.
(ಫೋಟೊ ಇದೆ)