ಸಮಾಜಮುಖಿ ಸೇವೆಯಲ್ಲಿ ಗೃಹರಕ್ಷಕದಳದ ಪಾತ್ರ
ಹಿರಿದು- ಹನುಮಂತರಾಯ
ದಾವಣಗೆರೆ ಡಿ. 12
ಕೋವಿಡ್-19 ಸೋಂಕು ನಿರ್ಮೂಲನೆ, ಕಾನೂನು ಸುವ್ಯವಸ್ಥೆ ಪಾಲನೆ
ಸೇರಿದಂತೆ ಅನೇಕ ಸಮಾಜಮುಖಿ ಸೇವೆಯಲ್ಲಿ ಗೃಹರಕ್ಷಕದಳದ
ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹನುಮಂತರಾಯ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಗೃಹರಕ್ಷಕದಳದ ಜಿಲ್ಲಾ ಕಚೇರಿ ಆವರಣದಲ್ಲಿ ಶನಿವಾರ
ಏರ್ಪಡಿಸಲಾಗಿದ್ದ ಅಖಿಲ ಭಾರತ ಗೃಹರಕ್ಷಕದಳದ
ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿರ್ಮೂಲನೆಗಾಗಿ ಕೈಗೊಂಡ
ಅನೇಕ ಚಟುವಟಿಕೆಗಳಲ್ಲಿ ಗೃಹರಕ್ಷಕದಳದವರು ಪೊಲೀಸ್
ಇಲಾಖೆಯೊಂದಿಗೆ ಕೈಜೋಡಿಸಿ ಶ್ರಮಿಸಿದ್ದಾರೆ. ಕಾನೂನು ಸುವ್ಯವಸ್ಥೆ
ಸೇರಿದಂತೆ ಅನೇಕ ಸಮಾಜಮುಖಿ ಸೇವೆಯಲ್ಲಿ
ಗೃಹರಕ್ಷಕದಳದವರ ಪಾತ್ರ ಹಿರಿದಾಗಿದೆ. ಶ್ರದ್ಧೆ ಹಾಗೂ ಸೇವಾ
ಮನೋಭಾವನೆ ಗೃಹರಕ್ಷಕದಳದ ಧ್ಯೇಯವಾಗಿದೆ. ಸದ್ಯ
ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ
ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿಯೂ ಡಿ. 22 ಹಾಗೂ 27 ರಂದು
ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು
ಗೃಹರಕ್ಷಕದಳದ ಸೇವೆ ಅತ್ಯಗತ್ಯವಾಗಿದ್ದು, ಚುನಾವಣೆ
ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕೈಜೋಡಿಸಲು 375
ಗೃಹರಕ್ಷಕದಳ ಸಿಬ್ಬಂದಿ ಸೇವೆ ನೀಡುವಂತೆ ಪ್ರಸ್ತಾವನೆ
ಸಲ್ಲಿಸಲಾಗಿದೆ. ಇದಲ್ಲದೆ, ಕೋವಿಡ್ ಲಸಿಕೆ ಬಳಕೆ ಪ್ರಾರಂಭವಾದ ಬಳಿಕ,
ಪೊಲೀಸ್ ಇಲಾಖೆ ಸಿಬ್ಬಂದಿಯ ಜೊತೆಜೊತೆಗೆ
ಗೃಹರಕ್ಷಕದಳದವರಿಗೂ ಲಸಿಕೆ ನೀಡಲು ಅನುಕೂಲವಾಗುವಂತೆ
ಎಲ್ಲರ ಪಟ್ಟಿಯನ್ನು ಸಿದ್ದಪಡಿಸಿ ನೀಡುವಂತೆ ಸರ್ಕಾರ ಪೊಲೀಸ್
ಇಲಾಖೆಗೆ ಸೂಚನೆ ನೀಡಿದ್ದು, ಅದರಂತೆ ಕ್ರಮ ವಹಿಸಲಾಗುವುದು.
ಗೃಹರಕ್ಷಕದಳದವರು ತಮ್ಮ ಹಾಗೂ ತಮ್ಮ ಕುಟುಂಬದ
ಆರೋಗ್ಯವನ್ನೂ ಕಾಪಾಡಿಕೊಂಡು, ಕರ್ತವ್ಯದ ಜೊತೆಗೆ ಸೇವಾ
ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಹನುಮಂತರಾಯ ಅವರು ಹೇಳಿದರು.
ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಠರಾದ ಡಾ. ಬಿ.ಹೆಚ್. ವೀರಪ್ಪ
ಮಾತನಾಡಿ, ಗೃಹರಕ್ಷಕದಳದವರಿಗೆ ಸೇವೆಯೇ ಪರಮ
ಗುರಿಯಾಗಿದ್ದು, ತ್ಯಾಗ ಬಲಿದಾನಗಳು ಶ್ರೇಷ್ಠ ಕರ್ತವ್ಯಕ್ಕೆ
ಸ್ಫೂರ್ತಿ ನೀಡುತ್ತವೆ ಎಂದರು.
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಗೃಹರಕ್ಷಕದಳದ
ದಿನದರ್ಶಿಕೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ನಿವೃತ್ತ ಗೃಹರಕ್ಷಕದಳದ
ಸಿಬ್ಬಂದಿಗಳನ್ನು ಹಾಗೂ ಉತ್ತಮ ಘಟಕಾಧಿಕಾರಿಗಳಿಗೆ ಸನ್ಮಾನಿಸಿ
ಗೌರವಿಸಲಾಯಿತು. ಅಲ್ಲದೆ ಮೃತ ಗೃಹರಕ್ಷಕದಳದ ಕುಟುಂಬಕ್ಕೆ
ಪರಿಹಾರಧನ ವಿತರಿಸಲಾಯಿತು. ಗೃಹರಕ್ಷಕದಳದ
ಉಪಸಮಾದೇಶೇಷ್ಠ ಸಂದೀಪ್ ಅವರು ಅಖಿಲ ಭಾರತ
ಗೃಹರಕ್ಷಕದಳ ದಿನಾಚರಣೆ ನಿಮಿತ್ತ ರಾಷ್ಟ್ರಪತಿಗಳು
ನೀಡಿರುವ ಸಂದೇಶ ವಾಚನ ಮಾಡಿದರು. ಗೃಹರಕ್ಷಕದಳದ
ಅಧಿಕಾರಿ ಪುಷ್ಪಾವತಿ ಗೃಹರಕ್ಷಕದಳದ ವಾರ್ಷಿಕ ವರದಿ
ಮಂಡಿಸಿದರು.
ಕಾರ್ಯಕ್ರಮದಲ್ಲಿ ಗೃಹರಕ್ಷಕದಳದ ವಿವಿಧ ಅಧಿಕಾರಿ,
ಸಿಬ್ಬಂದಿಗಳು ಭಾಗವಹಿಸಿದ್ದರು.
