ದಾವಣಗೆರೆ ಜ. 02
ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಬಳಸಲಾಗುವ ಇಲ್ಲಿನ ಕುಂದವಾಡ ಕೆರೆಯನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿ 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಶನಿವಾರ ಕುಂದವಾಡ ಕೆರೆ ಬಳಿ ಚಾಲನೆ ನೀಡಿದರು.
15 ಕೋಟಿ ರೂ. ವೆಚ್ಚದಲ್ಲಿ ಕುಂದವಾಡ ಕೆರೆಯನ್ನು ಅಭಿವೃದ್ಧಿಗೊಳಿಸುವ ಕಾಮಗಾರಿ ಕುರಿತು ವಿವರಣೆ ನೀಡಿದ ಸ್ಮಾರ್ಟ್‍ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರು, ಕುಂದವಾಡ ಕೆರೆಯು ದಾವಣಗೆರೆ ನಗರದ ಕುಡಿಯುವ ನೀರಿನ ಪ್ರಮುಖ ಸಂಗ್ರಹಗಾರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕುಂದವಾಡ ಕೆರೆಯ ಏರಿಯ ಮೇಲೆ ಮತ್ತು ಕೆರೆಯಲ್ಲಿ ಬೆಳೆದಿರುವ ಸಾಕಷ್ಟು ಕಳೆ, ಹೂಳು ಇತ್ಯಾದಿಗಳಿಂದ ಬೇಸಿಗೆಯಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ, ಅಲ್ಲದೆ, ಕೆರೆಯ ಮುಖ್ಯ ಏರಿಯಲ್ಲಿ ನೀರು ಸೋರಿಕೆಯಾಗುತ್ತಿತ್ತು, ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಕೆರೆಯ ಒಟ್ಟು 4.90 ಕಿ.ಮೀ. ಉದ್ದದ ಏರಿಯನ್ನು ಅಭಿವೃದ್ಧಿಪಡಿಸಲಾಗುವುದು. ಕೆರೆ ಏರಿ ಆವರಣದಲ್ಲಿ ಬೆಳೆದಿರುವ ಪೊದೆ, ಮುಳ್ಳನ್ನು ತೆರವುಗೊಳಿಸಿ, ಕೆರೆ ಏರಿಯನ್ನು ಎತ್ತರಿಸಲಾಗುವುದು ಅಲ್ಲದೆ ವಿಸ್ತರಿಸಲಾಗುವುದು. ಕೆರೆಯ ಒಳಮುಖದ ಇಳಿಜಾರಿನ ರಕ್ಷಣಾ ಕಾರ್ಯ ಕೈಗೊಳ್ಳಲಾಗುವುದು. ಪಾದಚಾರಿಗಳ ವಾಕಿಂಗ್ ಪಥ ರಚಿಸಿ, ಸುಧಾರಿಸಲ”ಆಗುವುದು. ಆರ್ಕಿಟೆಕ್ಚರಲ್ ಫೆನ್ಸಿಂಗ್ ಮಾಡಲಾಗುವುದು. ಸಾಧರಹಳ್ಳಿ ಕಲ್ಲಿನ ಆಸನಗಳು ಮತ್ತು ಇತರೆ ಅಲಂಕಾರಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸ್ಥಿರವಾದ ಪಾಲಿಥಿಲಿನ್ ಡಸ್ಟ್‍ಬಿನ್‍ಗಳ ಅಳವಡಿಕೆ, ವಿದ್ಯುತ್ ಕಂಬ ಹಾಗೂ ದೀಪಗಳನ್ನು ಅಳವಡಿಸುವಂತಹ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷದ ಕಾಲಮಿತಿ ನಿಗದಿಪಡಿಸಲಾಗಿದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಮಾತನಾಡಿ, ಕುಂದವಾಡ ಕೆರೆ ಏರಿಗೆ ಬೆಳಿಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ಸಾಕಷ್ಟು ಜನ ವಾಯುವಿಹಾರಕ್ಕೆ ಬರುತ್ತಾರೆ. ಇಲ್ಲಿನ ವಾತಾವರಣ ಆಹ್ಲಾದಕರವಾಗಿರಬೇಕು, ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಿ ಎಂದರು.
ಶಾಸಕ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *