ದಾವಣಗೆರೆ ಜ.15
ವಿಶ್ವವನ್ನೇ ಬಾಧಿಸಿದ ಕೊರೊನಾಗೆ ಲಸಿಕೆ ಸಿದ್ದವಾಗಿದ್ದು,
ಇಂದಿನಿಂದ ಮೊದಲ ಹಂತದ ಲಸಿಕೆ ನೀಡಿಕೆ ಕಾರ್ಯ ಜಿಲ್ಲೆಯಲ್ಲಿ
ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಲಸಿಕೆ ನೀಡಿಕೆ ಏರ್ಪಾಟು ಕುರಿತು
ಪರಿಶೀಲನೆ ನಡೆಸಿ ನಂತರ ಪತ್ರಕರ್ತರನ್ನು ಉದ್ದೇಶಿಸಿ
ಮಾತನಾಡಿ, ಶನಿವಾರ ಬೆಳಿಗ್ಗೆ ಮಾನ್ಯ ಪ್ರಧಾನಮಂತ್ರಿಗಳು
ನವದೆಹಲಿಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವರು.
ಅವರು ಚಾಲನೆ ನೀಡಿದ ನಂತರ ಜಿಲ್ಲೆಗಳಲ್ಲಿ ಲಸಿಕೆ
ನೀಡಬೇಕೆಂದು ನಿರ್ದೇಶನ ಬಂದಿದ್ದು, ಅದರಂತೆ ಮೊದಲ
ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
ನೀಡಲಾಗುವುದು. ಆರೋಗ್ಯ ಇಲಾಖೆಯ 19,070 ಆರೋಗ್ಯ
ಕಾರ್ಯಕರ್ತರು ನೋಂದಾಯಿಸಿಕೊಂಡಿದ್ದು, ಇದರಲ್ಲಿ ‘ಡಿ’
ಗ್ರೂಪ್ ನೌಕರರಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಲಸಿಕೆ
ನೀಡಲಾಗುವುದು ಎಂದರು.
6826 ಸರ್ಕಾರಿ ಹಾಗೂ 12,194 ಖಾಸಗಿ ಆರೋಗ್ಯ ಕ್ಷೇತ್ರದ
ಕಾರ್ಯಕರ್ತರು ಲಸಿಕೆ ಪಡೆಯಲಿದ್ದಾರೆ. ಜಿಲ್ಲೆಗೆ 13,500
ಡೋಸ್ ಲಸಿಕೆಗಳನ್ನು ಸ್ವೀಕರಿಸಿದೆ. ಎಲ್ಲಾ ಲಸಿಕಾ ಕೇಂದ್ರಗಳಿಗೆ
ಪೊಲೀಸ್ ಭದ್ರತೆಯೊಂದಿಗೆ ಕಳುಹಿಸಿಕೊಡಲಾಗಿದ್ದು,
ಕೋಲ್ಡ್ ಸ್ಟೋರೇಜ್‍ನಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 36 ಲಸಿಕಾ
ಕೇಂದ್ರಗಳನ್ನು ಗುರುತಿಸಲಾಗಿದ್ದು, ಇಂದು 7
ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ. ಎಲ್ಲಾ
ತಾಲ್ಲೂಕು ಆಸ್ಪತ್ರೆ, ಸಿಜಿ ಆಸ್ಪತ್ರೆ, ಜೆಜೆಎಂಸಿ ಹಾಗೂ ಬಿಳಿಚೋಡಿನ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುವುದು
ಎಂದರು.
ಈ ಕೇಂದ್ರಗಳಲ್ಲಿ ಲಸಿಕೆ ತೆಗೆದುಕೊಂಡವರಿಗೆ ಪ್ರತಿಕೂಲ
ಪರಿಣಾಮವಾದರೆ ತಕ್ಷಣ ಸ್ಪಂದಿಸಲು ಎಇಎಫ್‍ಐ ಕಿಟ್‍ಗಳು ಹಾಗೂ
ನುರಿತ ವೈದ್ಯರು, ಆಂಬುಲೆನ್ಸ್ ಸೇರಿದಂತೆ ಅಗತ್ಯ ಮಾನವ
ಸಂಪನ್ಮೂಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಪ್ರಥಮ ಹಂತದಲ್ಲಿ ಗರ್ಭಿಣಿಯರು, ಹಾಲುಣಿಸುವ
ತಾಯಂದಿರು, ಇನ್ನಿತರೆ ಅಲರ್ಜಿ, ಕೋಮಾರ್ಬಿಡಿಟಿ ಇರುವವರನ್ನು
ಹೊರತುಪಡಿಸಿ 18 ವರ್ಷ ಮೇಲ್ಪಟ್ಟ ಎಲ್ಲಾ ಆರೋಗ್ಯ
ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಸ್ಥಳೀಯ
ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಮುಂದಿನ ಹಂತದಲ್ಲಿ ಲಸಿಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ
ನಮ್ಮ ಅವಶ್ಯಕತೆಗಿಂತ ಹೆಚ್ಚು ಲಸಿಕಾ ಸ್ಟೋರೇಜ್ ಸಾಮಥ್ರ್ಯ
ನಮ್ಮಲ್ಲಿದೆ. ಹಾಗೂ ಪಶುಪಾಲನಾ ಇಲಾಖೆಯ ಸ್ಟೋರೇಜ್‍ನ್ನು
ಬಳಸಿಕೊಳ್ಳಲಾಗುವುದು. ಬೆಸ್ಕಾಂ ನವರಿಗೆ ಸೂಚನೆ
ನೀಡಲಾಗಿದ್ದು ವಿದ್ಯುತ್ ವ್ಯತ್ಯಯವಾಗದಂತೆ ಸೂಚಿಸಲಾಗಿದೆ.
ಎರಡನೇ ಹಂತದಲ್ಲಿ ಫ್ರಂಟ್‍ಲೈನ್ ವರ್ಕರ್ಸ್
ಫಲಾನುಭವಿಗಳ ಪಟ್ಟಿ ಅಪ್‍ಲೋಡ್ ಮಾಡಲಾಗುತ್ತಿದ್ದು,
ಇದರಲ್ಲಿ ಮುನ್ಸಿಪಾಲಿಟಿ, ಸ್ಥಳೀಯ ಸಂಸ್ಥೆಗಳು, ನಗರಪಾಲಿಕೆ,
ಕಂದಾಯ, ಪೊಲೀಸ್ ಇಲಾಖೆ, ಹೋಂ ಗಾಡ್ರ್ಸ್, ಎನ್‍ಸಿಸಿ ಗ್ರಾ.ಪಂ, ಬಿಲ್
ಕಲೆಕ್ಟರ್, ಕಾರ್ಯದರ್ಶಿ, ಪಿಡಿಓಗಳಿಗೆ ನೀಡಲಾಗುವುದು.
ಮೂರನೇ ಹಂತದಲ್ಲಿ ಕೋಮಾರ್ಬಿಡಿಟಿ, ಮಕ್ಕಳು ಮತ್ತು
60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಸಾಮಾನ್ಯರಿಗೆ
ಸರ್ಕಾರದ ನಿರ್ದೇಶನ ಬಂದ ನಂತರ
ತೀರ್ಮಾನಿಸಲಾಗುವುದು ಎಂದರು.
ಈ ವೇಳೆ ಡಿಹೆಚ್‍ಓ ಡಾ.ನಾಗರಾಜ್, ಚಿಗಟೇರಿ ಜಿಲ್ಲಾಸ್ಪತ್ರೆ ಶಸ್ತ್ರ
ಚಿಕಿತ್ಸಕ ಜಯಪ್ರಕಾಶ್, ಡಿಎಸ್‍ಓ ಡಾ.ರಾಘವನ್, ಆರ್‍ಸಿಹೆಚ್‍ಓ
ಡಾ.ಮೀನಾಕ್ಷಿ ಇತರರು ಇದ್ದರು.