ದಕ್ಷಿಣ ಭಾರತದ ರಾಜ್ಯಗಳ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಶನಿವಾರ, ಜ.16 ಭದ್ರಾವತಿಯಲ್ಲಿ ಆರಂಭಿಸಲಾಗುತ್ತಿರುವ ಕೇಂದ್ರ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ ಗೋವಾ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನೆರವಾಗಲಿದೆ ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಹೇಳಿದರು.
ಅವರು ಶನಿವಾರ ಭದ್ರಾವತಿ ಡಿಎಆರ್ ಮೈದಾನದಲ್ಲಿ ಕ್ಷಿಪ್ರ ಕಾರ್ಯ ಪಡೆ (ಆರ್‍ಎಎಫ್) 97ನೇ ಬೆಟಾಲಿಯನ್ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಭದ್ರಾವತಿಯಲ್ಲಿ ಆರ್ ಎ ಎಫ್ ಬೆಟಾಲಿಯನ್ ಸ್ತಾಪನೆಯಿಂದ ಇಡೀ ದಕ್ಷಿಣ ಭಾರತದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಾಯಕವಾಗಲಿದೆ. ಇಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣವಾಗಲಿದ್ದು, ರಾಜ್ಯ ಸರಕಾರ 50ಎಕ್ರೆ ಜಮೀನು ನೀಡಿದೆ. ಇಲ್ಲಿ ಸುಸಜ್ಜಿತವಾದ ವಸತಿಗೃಹಗಳು, ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣವಾಗಲಿದೆ. ಇದರ ಪ್ರಯೋಜನ ಸ್ಥಳೀಯರಿಗೂ ದೊರೆಯುವಂತೆ ಮಾಡಲಾಗುವುದು. ಸ್ಥಳೀಯರು ಇಲ್ಲಿನ ಎಲ್ಲಾ ಸೌಲಭ್ಯಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರು.
ಸಿಆರ್ ಪಿಎಫ್ ಪಡೆ ಅತ್ಯಂತ ಸುಸಜ್ಜಿತವಾಗಿದ್ದು, ಇದರಲ್ಲಿ 3.50 ಲಕ್ಷ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರು ಸ್ಥಾಪಿಸಿದ ಪಡೆ ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಸಹ ಸಿಆರ್ ಪಿಎಫ್ ಜನತೆಯ ರಕ್ಷಣೆಗೆ ಮುಂಚೂಣಿ ಪಾತ್ರ ವಹಿಸಿದ್ದಾರೆ. ಪೊಲೀಸರು ವಿಶ್ರಾಂತಿ ಇಲ್ಲದೆ ದೇಶ ಸೇವೆ ಮಾಡುತ್ತಿದ್ದು, ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರ ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಪೋರೆನ್ಸಿಕ್ ಸೈನ್ಸ್ ವಿಶ್ವವಿದ್ಯಾಲಯ ಸ್ಥಾಪಿಸಿದೆ. ಜಗತ್ತಿನಲ್ಲಿಯೇ ಇದು ಮೊದಲನೆಯದ್ದಾಗಿದೆ. ಫೋರೆನ್ಸಿಕ್ ಸೈನ್ಸ್ ನಲ್ಲಿ ವಿಶೇಷ ತರಬೇತಿ ನೀಡಿ ಈ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಇದು ಸಹಕಾರಿಯಾಗಲಿದೆ. ಈ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆ ಮಾಡಿಕೊಂಡು ರಾಜ್ಯಗಳು ಸಹ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಇದೊಂದು ಐತಿಹಾಸಿಕ ದಿನ. ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ 97ಎಕ್ರೆ ಪ್ರದೇಶದಲ್ಲಿ ಆರ್‍ಎಎಫ್ ಘಟಕಕ್ಕೆ ರಾಜ್ಯ ಸರ್ಕಾರ 50ಎಕ್ರೆ ಪ್ರದೇಶ ನೀಡಿದೆ.
ಈವರೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಯುಂಟಾದಾಗ ನೆರೆಯ ತೆಲಂಗಾಣ ಅಥವಾ ಇತರ ರಾಜ್ಯಗಳಿಂದ ಆರ್ ಎ ಎಫ್ ತಂಡಗಳನ್ನು ನಿಯೋಜಿಸಲಾಗುತ್ತಿತ್ತು. ಪ್ರಯಾಣದ ಅವಧಿ ಹೆಚ್ಚಾಗಿದ್ದರಿಂದ ಈ ತಂಡ ಆಗಮಿಸುವಲ್ಲಿ ವಿಳಂಬವಾಗುವ ಸಾಧ್ಯತೆಯಿತ್ತು. ಆದರೆ ಇದೀಗ ನಮ್ಮ ರಾಜ್ಯದಲ್ಲೇ, ಅದರಲ್ಲೂ ಉತ್ತಮ ಸಾರಿಗೆ ಸಂಪರ್ಕ ಲಭ್ಯವಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬೆಟಾಲಿಯನ್ ಸ್ಥಾಪನೆಯಾಗುತ್ತಿರುವುದು ಸಂತೋಷ ತಂದಿದೆ ಎಂದರು.
ಈ ಬೆಟಾಲಿಯನ್ ಕರ್ನಾಟಕದೊಂದಿಗೆ ಕೇರಳದ ನಾಲ್ಕು, ಗೋವಾದ 2, ಪುದುಚೇರಿ ಮತ್ತು ಲಕ್ಷದ್ವೀಪದ ತಲಾ ಒಂದು ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ತುರ್ತು ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಆರ್‍ಎಎಫ್ ಕೈಜೋಡಿಸಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇದಕ್ಕೆ ಆರ್ ಎ ಎಫ್ ಬೆಟಾಲಿಯನ್ ಇನ್ನಷ್ಟು ಶಕ್ತಿ ತುಂಬಲಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಅಶ್ವಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಸಂಗಮೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.