ಚಿತ್ರದುರ್ಗ ಜ.16; ಸವಿತಾ ಸಮಾಜದ ಮೀಸಲಾತಿ ಸಂಬಂಧಿಸಿದಂತೆ ಹೋರಾಟದ
ರೂಪುರೇಷೆಗಳ ಬಗ್ಗೆ ಚರ್ಚಿಸಲು ರಾಜ್ಯ ಮಟ್ಟದ ಮೀಸಲಾತಿ ಚಿಂತನ ಸಭೆಯನ್ನು
ಚಿತ್ರದುರ್ಗ ನಗರದಲ್ಲಿ ಇದೇ ತಿಂಗಳು 19ರಂದು ಹಮ್ಮಿಕೊಳ್ಳಲಾಗಿದೆ. ಚಿಂತನ
ಸಭೆಯ ಸಾನಿಧ್ಯವನ್ನು ಶ್ರೀ ಸವಿತಾ ಪೀಠದ ಸ್ವಾಮೀಜಿಗಳಾದ ಶ್ರೀ ಶ್ರೀಧರಾನಂದ
ಸರಸ್ವತಿ ಸ್ವಾಮೀಜಿಗಳು ವಹಿಸಲಿದ್ದಾರೆ. ಕಾರ್ಯಕ್ರಮ ಜಿಲ್ಲಾ ಸವಿತಾ ಸಮಾಜದ
ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಎನ್.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ
ಜರುಗಲಿದೆ.
ಈ ಬಗ್ಗೆ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ಹಾಗೂ
ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ಟಿ.ತಿಪ್ಪೇಸ್ವಾಮಿ ಸಂಪಿಗೆ ಜಂಟಿ ಪತ್ರಿಕಾ ಹೇಳಿಕೆಯಲ್ಲಿ
ತಿಳಿಸಿದ್ದಾರೆ.
ಚಿಂತನ ಸಭೆ ಚಿತ್ರದುರ್ಗ ನಗರದ ಚಳ್ಳಕೆರೆ ಬೆಂಗಳೂರು ಬೈಪಾಸ್
ರಸ್ತೆಯಲ್ಲಿರುವ ಶ್ರೀಕಬೀರಾನಂದ ಮಠದ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10-30ರಿಂದ
ಸಭೆ ನಡೆಯಲಿದೆ.
ಸವಿತಾ ಸಮಾಜದ ಬಹು ವರ್ಷಗಳ ಬೇಡಿಕೆಯಾದ ಮೀಸಲಾತಿ ಬಗ್ಗೆ, ಪ್ರಸ್ತುತ
ಸಮಾಜ 2ಎ ನಲ್ಲಿರುವ ಮೀಸಲಾತಿಯ ಸಾಧಕ ಬಾದಕಗಳು, ಸಮಾಜಕ್ಕೆ ಯಾವ
ರೀತಿಯ ಮೀಸಲಾತಿ ಅಗತ್ಯ ಇದೆ. ಮೀಸಲಾತಿಗಾಗಿ ಕೈಗೊಳ್ಳುವ ಹೋರಾಟಗಳ ಬಗ್ಗೆ
ವ್ಯಾಪಕವಾಗಿ ಚರ್ಚೆ ನಡೆಯಲಿದೆ.
ಸಭೆಯಲ್ಲಿ ಸವಿತಾ ಸಮಾಜದ ಹೆಸರಿನಲ್ಲಿ ಗುರುತಿಸಿರುವ ಎಲ್ಲಾ ಉಪಜಾತಿಗಳ ಉಪ
ಪಂಗಡಗಳ ಪ್ರತಿನಿಧಿಗಳು, ಪದಾಧಿಕಾರಿಗಳು, ಸಮಾಜದ ಮುಖಂಡರು,
ಬುದ್ಧಿಜೀವಿಗಳು ಭಾಗವಹಿಸಲಿದ್ದಾರೆ.
ಚಿಂತನ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಿ
ಯಶಸ್ವಿಗೊಳಿಸಬೇಕಾಗಿ ಸಮಾಜದ ಮುಖಂಡರು ಹಾಗೂ ನಗರಸಭಾ ಮಾಜಿ
ಸದಸ್ಯರಾದ ಗ.ನ.ಲಿಂಗರಾಜು, ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಹಾಗೂ
ವಕೀಲರಾದ ಜಿ.ಜಿ.ಸಾಯಿನಾಥ್, ಉಪಾಧ್ಯಕ್ಷರಾದ ಶ್ರೀನಿವಾಸ್, ಜಿಲ್ಲಾ ಖಜಾಂಚಿ ಹನುಮಂತಪ್ಪ
ಮದಕರಿಪುರ, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ನಾಗರಾಜ್,
ಮುಖಂಡರಾದ ಪಲ್ಲವಿ ಪ್ರಸನ್ನ ಅವರುಗಳು ಮನವಿ ಮಾಡಿದ್ದಾರೆ.