ಶ್ರೀ ಜಿ.ಎ ಜಗದೀಶ್ ಅವರು 1985 ನೇಯ ಇಸವಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಪದಾರ್ಪಣೆ ಮಾಡಿ,ಅತ್ಯುತ್ತಮ ಕಾನೂನು ಶಾಂತಿ ಪಾಲನೆ ಸುವ್ಯವಸ್ಥೆ,ಅಪರಾಧ ಪತ್ತೆ ಮತ್ತು ತಡೆ, ಸುಗಮ ಸಂಚಾರ ಸುವ್ಯವಸ್ಥೆ, ಅತ್ಯುತ್ತಮ ಸಾರ್ವಜನಿಕ ಸಂಬಂಧ,ಹೀಗೆ ಸರ್ವತೋಮುಖವಾಗಿ ಸಾಧನೆಗೈದು ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಛಾಪು ಮೂಡಿಸಿ 1999 ರಲ್ಲಿ ಉಡುಪಿಯ ವೃತ್ತಿದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶ್ಲಾಘನೀಯ ಸೇವೆಗಾಗಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.
ನಂತರ ಶ್ರೀ ಜಿ.ಎ.ಜಗದೀಶ್ ಅವರು 20೦2 ರಿಂದ 2012 ರವರೆಗೆ ದಾವಣಗೆರೆ ನಗರ ಹಾಗೂ ಗ್ರಾಮಾಂತರ ವೃತ್ತದಲ್ಲಿ ಸುಮಾರು 10 ವರ್ಷಗಳ ಕಾಲ ಸಿಪಿಐ ಆಗಿ ಸೇವೆ ಸಲ್ಲಿಸಿದ್ದಾರೆ. ಅತ್ಯುತ್ತಮ ಕಾನೂನು ಶಾಂತಿ ಸುವ್ಯವಸ್ಥೆ, ಅಪರಾಧ ಪತ್ತೆ ಮತ್ತು ತಡೆ,ಸುಗಮ ಸಂಚಾರ ಸುವ್ಯವಸ್ಥೆ ಕ್ಷೇತ್ರದಲ್ಲಿ ಗಮನಾರ್ಹಸೇವೆಯನ್ನು ಸಲ್ಲಿಸಿ ನಿಗೂಢ ಹಾಗೂ ಅತ್ಯಂತ ಸೂಕ್ಷ್ಮ ಹಾಗೂ ಕ್ಲಿಷ್ಟಕರ ಕೊಲೆ,ಸುಲಿಗೆ, ಮನೆಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ,ಸಾರ್ವಜನಿಕ ಸಂಬಂಧ ಗಳಿಗೆ ಒತ್ತು ನೀಡಿ ಅಪಾರ ಜನಮನ್ನಣೆ ಪಡೆದು ದಾವಣಗೆರೆ ನಗರ ಹಾಗೂ ಜಿಲ್ಲೆಯ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. 2004 ರಲ್ಲಿ ದಾವಣಗೆರೆ ನಗರಸಭೆಯುಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ*
2005 ರಲ್ಲಿ ದಾವಣಗೆರೆ ಕೇಂದ್ರ ವೃತ್ತದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪೊಲೀಸ್ ಇಲಾಖೆಯಲ್ಲಿ ವೃತ್ತಿಪರ ಕರ್ತವ್ಯ ಹಾಗೂ ಅಸಾಧಾರಣ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ ಪುರಸ್ಕೃತರಾಗಿದ್ದು ಗಮನಾರ್ಹ.
ನಂತರ 2013 – 2018 ರಲ್ಲಿ ಬೆಂಗಳೂರು ನಗರದಲ್ಲಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಆಗಿ ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 2018 – ಜನವರಿ – 26- ಗಣರಾಜ್ಯೋತ್ಸವ ಶುಭ ದಿನದಂದು ಕರ್ತವ್ಯದಲ್ಲಿ ಮಾನ್ಯರ “ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕಕ್ಕೆ” ಭಾಜನರಾಗಿದ್ದರು.ಅಲ್ಲದೆ ಶ್ರೀ ಜಿ.ಎ.ಜಗದೀಶ್ ಅವರು ಸ್ವತಃ ಸಾಹಿತಿಗಳಾಗಿದ್ದು,ಎರಡು ಕವನ ಸಂಕಲನಗಳನ್ನು ಹೊರತಂದು ಇವರ ಲೇಖನಗಳು ಹಾಗೂ ಕವನಗಳು ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಶ್ರೀ ಜಿ.ಎ.ಜಗದೀಶ್ ಅವರು ದಕ್ಷಿಣ ಕನ್ನಡ – ಉಡುಪಿ ಅವಳಿ ಜಿಲ್ಲೆಯಲ್ಲಿ 15 ವರ್ಷಗಳ ಕಾಲ ಕೋಟ, ಮಂಗಳೂರು ನಗರ,ಬಜ್ಪೆ, ಹಬ್ರಿ,ಮಣಿಪಾಲ, ಕಾರ್ಕಳ,ಹಾಗೂಉಡುಪಿಟೌನ್ ನಲ್ಲಿ ಪಿಎಸ್ಐ ಹಾಗೂ ಸಿಪಿಐ ಆಗಿ ಗಮನಾರ್ಹ ಸೇವೆ ಸಲ್ಲಿಸಿದ್ದರು. ಇವರು ಅತ್ಯಂತ ಸರಳ ಅಧಿಕಾರಿಯಾಗಿ ಜನರೊಂದಿಗೆ ಬೆರೆತು,ಅತ್ಯುತ್ತಮ ಸಾರ್ವಜನಿಕ ಸಂಬಂಧಗಳಿಗೆ ಒತ್ತು ನೀಡಿ, ಜಿಲ್ಲೆಯ ಅತ್ಯಂತ ಕ್ಲಿಷ್ಟಕರ ಸೂಕ್ಷ್ಮ ಪ್ರಕರಣಗಳನ್ನು ತ್ವರಿತವಾಗಿ ಭೇದಿಸಿ ಜನಾನುರಾಗಿಯಾಗಿ, ಕರಾವಳಿ ಭಾಗದ ಎಲ್ಲಾ ನಾಗರಿಕರ ಪ್ರೀತಿ ಪಾತ್ರರಾಗಿದ್ದರು.


ಇವರು ಸಾಹಿತ್ಯ ಕೃಷಿಯಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ತಾಲೂಕು, ಜಿಲ್ಲಾ,ರಾಜ್ಯ ಮಟ್ಟದ ವಿವಿಧ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ವಿವಿಧ ಕಾವ್ಯ ವಾಚನ ಮಾಡಿದ್ದರು. ಶ್ರೀ ಜಿ.ಎ.ಜಗದೀಶ್ ಅವರು “ಲಾಠಿ ಹಿಡಿಯುವ ಕೈ ಲೇಖನಿಯನ್ನೂ ಹಿಡಿಯಬಲ್ಲರು” ಎಂಬುದನ್ನು ಸಾಬೀತು ಪಡಿಸಿದ್ದರು.ಕೋಟ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕಡಲತೀರದ ಭಾರ್ಗವ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಕೋಟಾ ಶಿವರಾಮ ಕಾರಂತರ ನಿಕಟ ಸಂಪರ್ಕ ಹೊಂದಿದ್ದು ಇಲ್ಲಿ ಗಮನಾರ್ಹ.
ಹೀಗೆ ಶ್ರೀ ಜಿ.ಎ.ಜಗದೀಶ್ ಅವರು ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇಲಾಖೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಶಂಸೆ,ನೂರಾರು ನಗದು ಬಹುಮಾನ,ಪ್ರಶಸ್ತಿ ಪುರಸ್ಕಾರ ಅಭಿನಂದನೆ ಹಾಗೂ ಅಪಾರ ಜನಮನ್ನಣೆ ಪಡೆದು ಪೊಲೀಸ್ ಇಲಾಖೆಗೊಂದು ಆಸ್ತಿಯಾಗಿದ್ದ ಅವರು ಅಂತಿಮವಾಗಿ ದಾವಣಗೆರೆ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ದಿನಾಂಕ:30-4-2019 ರಂದು ನಿವೃತ್ತಿ ಹೊಂದಿದ್ದರು.


ಶ್ರೀ ಜಿ.ಎ ಜಗದೀಶ್ ಪೊಲೀಸ್ ಅಧೀಕ್ಷಕರು (ನಿ) ಇವರು ಇತ್ತೀಚೆಗೆ ಬೆಂಗಳೂರು ರಾಜಭವನದಲ್ಲಿ ದಿನಾಂಕ :7-1-2021 ರಂದು ಇತ್ತೀಚೆಗೆ ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರಾದ ಶ್ರೀ ವಜೂಬಾಯಿ ರೂಡಾಭಾಯಿ ವಾಲ ಅವರಿಂದ ಮಾನ್ಯ “ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ” ಪಡೆದಿರುತ್ತಾರೆ. ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಹಾಗೂ ಮಾನ್ಯ ಗೃಹ ಸಚಿವರಾದ ಶ್ರೀ ಬಸವರಾಜಬೊಮ್ಮಾಯಿ ಅವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *