ದಾವಣಗೆರೆ ಜ.21
ಜ.23 ರಂದು ನಗರದ 2 ಪರೀಕ್ಷಾ ಕೇಂದ್ರಗಳು ಹಾಗೂ
24 ರಂದು 33 ಸೇರಿದಂತೆ ಒಟ್ಟು 35 ಪರೀಕ್ಷಾ ಕೇಂದ್ರಗಳಲ್ಲಿ
ಕೆಪಿಎಸ್‍ಸಿಯಿಂದ ನಡೆಸಲಾಗುತ್ತಿರುವ ಎಫ್‍ಡಿಎ/ಎಸ್‍ಡಿಎ ಪರೀಕ್ಷೆಗಳಿಗೆ
ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ
ಪೂಜಾರ ವೀರಮಲ್ಲಪ್ಪ ತಿಳಿಸಿದರು.
ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಎಫ್‍ಡಿಎ/ಎಸ್‍ಡಿಎ
ಪರೀಕ್ಷೆಗೆ ಸಂಬಂಧಿಸಿದ ಸ್ಥಾನಿಕ ಪರಿವೀಕ್ಷಕರು,
ಮಾರ್ಗಾಧಿಕಾರಿಗಳು ಮತ್ತು ವೀಕ್ಷಕರುಗಳಿಗೆ
ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು,
ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಆಯೋಗದ
ನಿರ್ದೇಶನಗಳನ್ನು ಪಾಲಿಸಿ, ಪರೀಕ್ಷಾ ಕೇಂದ್ರಗಳಲ್ಲಿ
ಸ್ವಚ್ಚತೆ, ಆಸನ ವ್ಯವಸ್ಥೆ, ಬಂದೋಬಸ್ತ್ ವ್ಯವಸ್ಥೆ ಸೇರಿದಂತೆ ಎಲ್ಲ
ಸಿದ್ದತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.
ಜ.23 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು
ಬೆಳಿಗ್ಗೆ 10 ರಿಂದ 11.30 ರವರೆಗೆ ನಡೆಯಲಿದೆ. ಜ.24 ರ
ಭಾನುವಾರ ಬೆಳಿಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಜ್ಞಾನ
ವಿಷಯ ಹಾಗೂ ಮಧ್ಯಾಹ್ನ 2 ರಿಂದ 3.30. ರವರೆಗೆ ಸಾಮಾನ್ಯ
ಕನ್ನಡ ಹಾಗೂ ಸಾಮಾನ್ಯ ಇಂಗ್ಲಿಷ್ ವಿಷಯ ಕುರಿತು
ಪರೀಕ್ಷೆಗಳು ನಡೆಯಲಿವೆ.
ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ
ನಗರಪಾಲಿಕೆ ವತಿಯಿಂದ ಡಿಸ್‍ಇನ್‍ಫೆಕ್ಟ್ ಮಾಡಲಾಗಿದ್ದು, ಕೋವಿಡ್
ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರಗಳಲ್ಲಿ
ಪ್ರತ್ಯೇಕವಾಗಿ ಎರಡು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಅಭ್ಯರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಹಾಕಿದ ನಂತರ
ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ನೀಡಲಾಗುವುದು
ಎಂದರು.
ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳು ಕಡ್ಡಾಯವಾಗಿ
ಯಾವುದಾದರೂ ಒಂದು ಮೂಲ ಗುರುತಿನ ಚೀಟಿಯನ್ನು
ತರಬೇಕು. ಒಂದು ವೇಳೆ ಮೂಲ ಗುರುತಿನ ಚೀಟಿ
ತರದಿದ್ದಲ್ಲಿ ಪರೀಕ್ಷೆಗೆ ಅವಕಾಶ ಇರುವುದಿಲ್ಲ. ಯಾವುದೇ
ಅಭ್ಯರ್ಥಿಗಳು ಮೊಬೈಲ್,ಕ್ಯಾಲಿಕ್ಯುಲೇಟರ್ ಸೇರಿದಂತೆ
ಯಾವುದೇ ವಿಧವಾದ ಎಲೆಕ್ಟ್ರಾನಿಕ್ ವಸ್ತುಗಳನ್ನು
ಕೊಠಡಿಗೆ ತರುವಂತಿಲ್ಲ. ಹಾಗೂ ಕರ್ತವ್ಯ ನಿರತ ಸಿಬ್ಬಂದಿ ಸಹ
ಮೊಬೈಲ್ ಬಳಕೆ ಮಾಡುವಂತಿಲ್ಲ ಎಂದರು.
ಪರೀಕ್ಷಾ ನಿಯೋಜಿತ ಸಿಬ್ಬಂದಿಗಳು ಪ್ರಶ್ನೆ ಮತ್ತು ಉತ್ತರ
ಪತ್ರಿಕೆಗಳನ್ನು ಸ್ವೀಕರಿಸುವಾಗ, ಪರೀಕ್ಷೆ ಮುಗಿದು ಬಂಡಲ್
ಮಾಡುವಾಗ ಜಾಗರೂಕತೆಯಿಂದ ಕಾಳಜಿ ವಹಿಸಬೇಕು ಎಂದ
ಅವರು ಈ ಪರೀಕ್ಷೆಗಳು ಸುಗಮವಾಗಿ ನಡೆಯಲು ಮತ್ತು
ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರಗಳು ನಡೆಯದಂತೆ
ತಡೆಗಟ್ಟುವ ಸಲುವಾಗಿ ಪರೀಕ್ಷೆ ನಡೆಯುವ
ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ
200 ಮೀಟರ್ ಪರಿಧಿ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ
ಪ್ರವೇಶಕ್ಕೆ ನಿಷೇಧಿತ ಪ್ರದೇಶವೆಂದು ಮತ್ತು ಪರೀಕ್ಷಾ
ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್
ಅಂಗಡಿಗಳನ್ನು, ಸೈಬರ್ ಕೆಫೆಗಳನ್ನು ಪರೀಕ್ಷಾ
ಅವಧಿಯಲ್ಲಿ ಮುಚ್ಚಬೇಕೆಂದು ಜಿಲ್ಲಾಧಿಕಾರಿಗಳು
ಆದೇಶಿಸಿದ್ದಾರೆ ಎಂದರು.
ಸಭೆಯಲ್ಲಿ ಡಿಡಿಪಿಯು ನಾಗರಾಜ, ಡಿಡಿಪಿಯು(ಆಡಳಿತ)ಲಿಂಗರಾಜ್,
ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ
ಡಾ.ಭಾಸ್ಕರ್‍ನಾಯಕ್, ಯುವಸಬಲೀಕರಣ ಇಲಾಖೆಯ
ಸಹಾಯಕ ನಿರ್ದೇಶಕ ಶ್ರೀನಿವಾಸ, ವಿವಿಧ ಕಾಲೇಜುಗಳ
ಪ್ರಾಂಶುಪಾಲರು ಹಾಜರಿದ್ದರು.