ಪ್ರದರ್ಶನ
ದಾವಣಗೆರೆ ಜ. 22
ತೋಟಗಾರಿಕೆ ಬಗ್ಗೆ ಸಾರ್ವಜನಿಕರಲ್ಲಿ ಅಭಿರುಚಿ ಹೆಚ್ಚಿಸಲು ಹಾಗೂ
ಮಕ್ಕಳಲ್ಲಿ ಗಿಡಗಳ ಬಗ್ಗೆ ಕುತೂಹಲ ಹೆಚ್ಚಿಸಲು ತೋಟಗಾರಿಕೆ
ಇಲಾಖೆಯಿಂದ ಗಣರಾಜ್ಯೋತ್ಸವದ ಅಂಗವಾಗಿ ಜ.23 ರಿಂದ 26
ರವರೆಗೆ ನಗರದ ಗಾಜಿನಮನೆಯ ಆವರಣದಲ್ಲಿ ನಾಲ್ಕು
ದಿನಗಳ ಕಾಲ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ
ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು
ಲಕ್ಷ್ಮೀಕಾಂತ್ ಬೊಮ್ಮನ್ನಾರ್ ತಿಳಿಸಿದರು.
ಶುಕ್ರವಾರ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ
ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಪುಷ್ಪ
ಪ್ರದರ್ಶನದ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು,
ಮನೆಗಳಲ್ಲಿ ವಿವಿಧ ಅಲಂಕಾರಿಕ ಗಿಡಗಳು ಹಾಗೂ ಹೂ
ಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸುವ ಸಲುವಾಗಿ ಮತ್ತು
ಮಕ್ಕಳಲ್ಲಿ ತೋಟಗಾರಿಕೆ ಬಗ್ಗೆ ಜ್ಞಾನ ಹೆಚ್ಚಿಸುವ ಉದ್ದೇಶದಿಂದ
ಹಾಗೂ ಆಹ್ಲಾದಕರ ವಾತಾವರಣ ನಿರ್ಮಿಸುವುದಕ್ಕಾಗಿ ನಾಲ್ಕು
ದಿನಗಳ ಪುಷ್ಪ ಪ್ರದರ್ಶನವನ್ನು ಗಾಜಿನಮನೆಯಲ್ಲಿ
ಆಯೋಜಿಸಲಾಗಿದ್ದು, ಪುಷ್ಪ ಪ್ರದರ್ಶನವನ್ನು ದಾವಣಗೆರೆ
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ
ಎಸ್.ಎ.ರವೀಂದ್ರನಾಥ ಉದ್ಘಾಟಿಸುವರು ಎಂದರು.
ಈ ಬಾರಿ ಪುಷ್ಪ ಪ್ರದರ್ಶನದ ಮುಖ್ಯ ಆಕರ್ಷಣೆ 26 ಅಡಿ
ಎತ್ತರ 17 ಅಡಿ ಅಗಲವುಳ್ಳ ಗೇಟ್ ವೇ ಆಫ್ ಇಂಡಿಯಾದ
ಪ್ರತಿರೂಪ. ಇದನ್ನು 2,10,000 ಬಿಳಿ, ಕೆಂಪು ಮತ್ತು ಹಳದಿ
ಬಣ್ಣದ ಸೇವಂತಿಗೆ ಹೂ ಹಾಗೂ 36,000 ಕೆಂಪು ಗುಲಾಬಿ ಹಾಗೂ
ಎಲೆಗಳಿಂದ ನಿರ್ಮಿಸಲಾಗುತ್ತಿದೆ. 45,000 ಹೂಗಳಿಂದ 10 ಅಡಿ
ಎತ್ತರ 7 ಅಡಿ ಅಗಲದ 4 ಫೋಟೋ ಫ್ರೇಮ್‍ಗಳನ್ನು
ಹೂವಿನ ಕಲಾಕೃತಿಯಿಂದ ಅಲಂಕರಿಸಿ ಪ್ರದರ್ಶಿಸಲಾಗುವುದು
ಎಂದರು.
ಪ್ರದರ್ಶನವು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ
ಸಾರ್ವಜನಿಕರಿಗೆ ತೆರೆದಿರುತ್ತದೆ. ವಯಸ್ಕರಿಗೆ ಪ್ರವೇಶ ಶುಲ್ಕ
ರೂ.20 ಮತ್ತು ಮಕ್ಕಳಿಗೆ ರೂ.10 ಆಗಿರುತ್ತದೆ.
ಸಾರ್ವಜನಿಕರಿಗೆ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ನಗರಸಾರಿಗೆ
ವ್ಯವಸ್ಥೆ ಇರುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರು
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆ
ಮಾಡುವಂತೆ ಈ ಮೂಲಕ ಕೋರುತ್ತಾ ಜಿಲ್ಲೆಯ ಸರ್ವ
ರೈತರು ಹಾಗೂ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ
ವೀಕ್ಷಿಸಿ ಪುಷ್ಪ ಪ್ರದರ್ಶನವನ್ನು
ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.