ಶಿವಮೊಗ್ಗ, ಜನವರಿ 22 : ರಾಜ್ಯದ ನಾಡು-ನುಡಿ, ನೆಲ-ಜಲ, ಸಂಸ್ಕøತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡುವ ಕೊಡುಗೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಣ್ಯರ ನೆನಪಿಗಾಗಿ ಸರ್ಕಾರವು ಆಚರಿಸುತ್ತಿರುವ ಹಲವು ಜಯಂತಿಗಳಂತೆ ರಾಜ್ಯ ಸರ್ಕಾರದ ಕಾರ್ಯಾಂಗದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳೂ ಸೇರಿದಂತೆ ರಾಜ್ಯದ, ಜಿಲ್ಲೆಯ, ತಾಲೂಕು ಮಟ್ಟದ ಎಲ್ಲಾ ಅಧಿಕಾರಿ-ನೌಕರರನ್ನು ಒಳಗೊಂಡು ದಿನಾಚರಣೆಯನ್ನು ಪ್ರತಿವರ್ಷ ಏಪ್ರಿಲ್ 21ರಂದು ಆಚರಿಸಲು ಆದೇಶ ಹೊರಡಿಸಿರುವ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾರ್ಯಾಂಗದ ಆಧಾರ ಸ್ತಂಭವಾಗಿರುವ ರಾಜ್ಯ ಸರ್ಕಾರಿ ನೌಕರರನ್ನು ಪ್ರೋತ್ಸಾಹಿಸುವ ಹಾಗೂ ಕರ್ತವ್ಯದಲ್ಲಿ ಒತ್ತಡ ನಿವಾರಿಸಿ, ಕ್ರಿಯಾಶೀಲತೆ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಆಚರಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರ ದಿನಾಚರಣೆಯಂತೆಯೇ ರಾಜ್ಯದಲ್ಲೂ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಲು ಉದ್ದೇಶಿಸಿರುವುದು ಹರ್ಷದ ಸಂಗತಿಯಾಗಿದೆ ಎಂದವರು ತಿಳಿಸಿದ್ದಾರೆ.
ಕೇಂದ್ರದ ಪ್ರಥಮ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947ರ ಏಪ್ರಿಲ್ 21ರಂದು ಆಡಳಿತ ಸೇವೆ ಸೇರಿದ ಪ್ರೊಬೇಷನರ್ ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ದಿನವನ್ನು ಕೇಂದ್ರ ಸರ್ಕಾರವು ಸಿವಿಲ್ ಸರ್ವೀಸ್ ಡೇಯನ್ನಾಗಿ ಆಚರಿಸುತ್ತಿದೆ ಎಂದು ತಿಳಿಸಿರುವ ಅವರು, ಸದರಿ ದಿನದಂದು ರಾಜ್ಯ ಸರ್ಕಾರಿ ನೌಕರರ ದಿನವನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಿ, ಇಲಾಖೆಯಲ್ಲಿ ಅಸಾಧಾರಣ ಸಾಧನೆ ಮಾಡಿದ ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿವರ್ಷ ನೀಡುತ್ತಿರುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ವಿವಿಧ ಹಂತಗಳಲ್ಲಿ ನೌಕರರ ದಿನಾಚರಣೆಯಂದೇ ಪ್ರದಾನ ಮಾಡಿ, ಅವಿಸ್ಮರಣೀಯಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸರ್ಕಾರವೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದವರು ತಿಳಿಸಿದ್ದಾರೆ.
ದೇಶದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಪ್ರತಿವರ್ಷ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಆಚರಿಸಲು ಮಹತ್ವದ ಆದೇಶ ಹೊರಡಿಸಿರುವ ಸರ್ಕಾರದ ಕ್ರಮ ಸ್ತುತ್ಯಾರ್ಹ. ನೌಕರರ ಮನವಿಗೆ ಸ್ಪಂದಿಸಿ ಆದೇಶ ಹೊರಡಿಸುಲ್ಲಿ ಸಹಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಗೂ ಸಚಿವ ಸಂಪುಟದ ಸಚಿವರು ಹಾಗೂ ರಾಜ್ಯ ಉನ್ನತ ಮಟ್ಟದ ಅಧಿಕಾರಿಗಳು ಅಭಿನಂದನಾರ್ಹರು. _ಸಿ.ಎಸ್.ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ.