ಜಗದೀಶ ಶೆಟ್ಟರ
ದಾವಣಗೆರೆ ಜ. 27
ಹೊಸ ಕೈಗಾರಿಕಾ ನೀತಿಯನ್ವಯ ಬೆಂಗಳೂರು
ಹೊರತುಪಡಿಸಿ ದಾವಣಗೆರೆಯಂತಹ ನಗರಗಳಲ್ಲಿ ಬೃಹತ್
ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬರುವ
ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ ಮತ್ತು
ಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಬೃಹತ್
ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ
ಸಚಿವರಾದ ಜಗದೀಶ ಶೆಟ್ಟರ ತಿಳಿಸಿದರು.
ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ಜಿಲ್ಲೆಯ ಅಭಿವೃದ್ದಿ ಕಾರ್ಯಕ್ರಮಗಳ
ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಕೈಗಾರಿಕೋದ್ಯಮ ಬೆಂಗಳೂರಿನಲ್ಲಿ ಮಾತ್ರ
ಕೇಂದ್ರೀಕೃತವಾಗುವುದನ್ನು ತಪ್ಪಿಸಲು ಟೈರ್ 2 ಮತ್ತು
ಟೈರ್ 3 ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು
ಬೆಳೆಸುವ ಸಲುವಾಗಿ ನಗರಗಳಲ್ಲಿ ಬೃಹತ್
ಕೈಗಾರಿಕೆಗಳನ್ನು ಕೈಗೊಳ್ಳಲು ಮುಂದಾಗುವ
ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ, ಇತರೆ
ಸೌಲಭ್ಯ ನೀಡಲಾಗುವುದು. ಹಿಂದೆ ದಾವಣಗೆರೆ ಜವಳಿಗೆ
ಹೆಸರಾಗಿದ್ದು ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಎಂದು ಹೆಸರು
ಮಾಡಿತ್ತು. ಇದೀಗ ಜವಳಿ ಉದ್ಯಮ ಇಳಿಮುಖವಾಗಿದೆ. ಜವಳಿ
ಸೇರಿದಂತೆ ಯಾವುದೇ ಕೈಗಾರಿಕೆಗಳಿಗೆ ಉದ್ಯಮಿಗಳು
ಮುಂದೆ ಬಂದಲ್ಲಿ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ
ಎಂದರು.
ಸಭೆಯಲ್ಲಿ ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ
ಸಂಘದ ಅಧ್ಯಕ್ಷ ಸಿದ್ದನಗೌಡ ಮಾತನಾಡಿ, ಕೆಎಸ್ಎಸ್ಐಡಿಸಿಯ
ಹರಿಹರ ಕೈಗಾರಿಕಾ ವಸಾಹತುವಿನ ನಿವೇಶನಗಳಿಗೆ
ಕ್ರಯಪತ್ರ ನೀಡಿಲ್ಲ. ಹಲವಾರು ಬಾರಿ ಈ ಬಗ್ಗೆ ಮನವಿ ಸಲ್ಲಿಸುತ್ತಾ
ಬಂದಿದ್ದು, ಸಚಿವರೇ ಖುದ್ದಾಗಿ ಸೇಲ್ಡೀಡ್ನ್ನು ನಮಗೆ
ವಿತರಿಸಬೇಕು ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಪಕ್ಕಾ ರಸ್ತೆ
ಆಗಬೇಕು, ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಈ ಬಗ್ಗೆಯೂ
ಹಲವಾರು ಬಾರಿ ನಗರಸಭೆಗೆ ಮನವಿ ಮಾಡಿದ್ದೇವೆ. ಅನುಕೂಲ
ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು.
ಸಚಿವರು ಪ್ರತಿಕ್ರಿಯಿಸಿ, ಕ್ರಯಪತ್ರ ವಿಚಾರದ ಕುರಿತು
ನನಗೆ ಅರಿವಿದ್ದು ಇದನ್ನು ನಾನು ಅನುಸರಣೆ ಮಾಡುತ್ತಾ
ಬಂದಿದ್ದೇನೆ. ಈಗ ಈ ನಿವೇಶನಗಳಿಗೆ ಖಾತೆ ಆಗಿದ್ದು ಇನ್ನೊಂದು
ವಾರದಲ್ಲಿ ಪೋಡಿ ಮಾಡುವಂತೆ ಹರಿಹರ ತಹಶೀಲ್ದಾರರಿಗೆ
ಸೂಚನೆ ನೀಡಿದ್ದೇನೆ. ಇನ್ನೊಂದು ವಾರದಲ್ಲಿ ಸೇಲ್ಡೀಡ್
ಪ್ರಕ್ರಿಯೆ ಆಗಿ, 15 ದಿನಗಳ ಒಳಗೆ ತಮಗೆ ಸ್ಥಳೀಯ
ಸಚಿವರು, ಶಾಸಕರನ್ನೊಳಗೊಂಡಂತೆ ನಾನೇ
ಕ್ರಯಪತ್ರಗಳನ್ನು ವಿತರಿಸುತ್ತೇನೆ ಎಂದರು.
ಇಲ್ಲಿನ ಉದ್ಯಮಿಗಳು ಸುಮಾರು 10 ವರ್ಷಗಳಿಂದ
ನಗರಸಭೆಗೆ ತೆರಿಗೆ ಪಾವತಿಸಿಲ್ಲ. ಅದಕ್ಕೆ ದಂಡ ಹಾಕಿದ್ದಾರೆ
ಹೌದು. ಆದರೆ ಪ್ರಸಕ್ತ ಸಾಲಿನ ತೆರಿಗೆ ಪಾವತಿಸಿಕೊಳ್ಳುವಂತೆ
ನಗರಸಭೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು
ಹಾಗೂ ನಾವು ಅನುದಾನ ನೀಡುತ್ತೇವೆ ರಸ್ತೆ
ನಿರ್ಮಿಸಿಕೊಡುವಂತೆ ತಿಳಿಸಿದರು. ಉದ್ಯಮಿಗಳು ಒಂದು
ವಾರದಲ್ಲೇ ಪ್ರಸಕ್ತ ಸಾಲಿನ ತೆರಿಗೆ ತುಂಬುವುದಾಗಿ ಭರವಸೆ
ನೀಡಿದರು.
ಸಚಿವರು ಮಾತನಾಡಿ, ಜವಳಿ ಪಾರ್ಕಿನಲ್ಲಿ ಜವಳಿ ಹೊರತಾಗಿ ಇತರೆ
ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡಬೇಕೆಂದು ನನಗೆ
ಮನವಿಗಳು ಬಂದಿವೆ ಈ ಬಗ್ಗೆ ಜವಳಿ ಇಲಾಖೆ ಅಧಿಕಾರಿಗಳು
ಮತ್ತು ಜವಳಿ ಉದ್ದಿಮೆದಾರರ ಅಭಿಪ್ರಾಯ ಕೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್
ಎನ್.ತಡಕನಹಳ್ಳಿ ಮಾತನಾಡಿ, 2002 ನೇ ಸಾಲಿನಲ್ಲಿ ಟೆಕ್ಸ್ಟೈಲ್
ಪಾರ್ಕ್ ಉದ್ದೇಶಕ್ಕಾಗಿ ಕೆಐಎಡಿಬಿಯಿಂದ 64 ಎಕರೆ ಕೈಗಾರಿಕಾ
ಪ್ರದೇಶಾಭಿವೃದ್ದಿ ಮಾಡಲಾಗಿದ್ದು 71 ಜವಳಿ ಘಟಕಗಳನ್ನು
ಪ್ರಾರಂಭಿಸಲಾಗಿತ್ತು. ಅದರಲ್ಲಿ 51 ಘಟಕಗಳು
ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ ಕೊರೊನಾ ಹಿನ್ನೆಲೆಯಲ್ಲಿ
23 ಘಟಕಗಳು ಸ್ಥಗಿತಗೊಂಡಿವೆ. 2012 ರಿಂದ 19ನೇ
ಸಾಲಿನವರೆಗೆ 39 ಘಟಕಗಳಿಗೆ ಒಟ್ಟು ರೂ.9.15 ಕೋಟಿ ಸಬ್ಸಿಡಿ
ನೀಡಲಾಗಿದೆ. ಈ ಪ್ರದೇಶವನ್ನು ಜವಳಿ ಉದ್ಯಮಗಳಿಗೆ
ಮೀಸಲಿಟ್ಟರೆ ಒಳಿತು ಎಂದು ಹೇಳಿದರು.
ಜವಳಿ ಪಾರ್ಕಿನ ಉದ್ಯಮಿಯೋರ್ವರು ಮಾತನಾಡಿ 2006 ರಲ್ಲಿ
ಕರೂರು ಕೈಗಾರಿಕಾ ಪ್ರದೇಶದಲ್ಲಿ ಜವಳಿ ಪಾರ್ಕ್ಗೆಂದು 64
ಎಕರೆ ಜಾಗ ನೀಡಲಾಗಿದ್ದು, ಇಲ್ಲಿ ಪ್ರಸ್ತುತ 30 ಜವಳಿಗೆ
ಸಂಬಂಧಿಸಿದ ಘಟಕಗಳು ಸಕ್ರಿಯವಾಗಿವೆ. ಇತರೆ
ಘಟಕಗಳಿಗೆ ಅವಕಾಶ ನೀಡಿದರೆ ಪರಿಸರ ಮಾಲಿನ್ಯ ಇತರೆ
ಸಮಸ್ಯೆಗಳಿಗೆ ಕಾರಣವಾಗಿ ಜವಳಿ ಉದ್ಯಮಕ್ಕೆ
ಅನಾನುಕೂಲವಾಗಲಿದೆ. ಆದ ಕಾರಣ ಜವಳಿಗೆ ಪೂರಕವಾದ
ಕೈಗಾರಿಕೆಗಳಿಗೇ ಅವಕಾಶ ನೀಡಬೇಕೆಂದು ಮನವಿ
ಮಾಡಿದರು. ಹಾಗೂ ಡೈಯಿಂದ ಯುನಿಟ್ ಇಲ್ಲದ ಕಾರಣ ಹೊರ
ರಾಜ್ಯಗಳಿಗೆ ಹೋಗ್ತಾ ಇದ್ದೇವೆ. ಡೈಯಿಂಗ್ ಯುನಿಟ್ ಆದರೆ
ಒಳಿತು ಎಂದರು.
ಉದ್ಯಮಿ ಮಂಜುನಾಥ್ ಮಾತನಾಡಿ, ಇಲ್ಲಿ ಸಹ
ಕ್ರಯಪತ್ರ(ಸೇಲ್ಡೀಡ್) ಮಾಡಿಕೊಡದೇ ಇರುವುದರಿಂದ
ಬ್ಯಾಂಕ್ನವರು ಸಾಲ ಕೊಡುತ್ತಿಲ್ಲ ಎಂದರು.
ಸಚಿವರು ಪ್ರತಿಕ್ರಿಯಿಸಿ ಭೂಮಿಯ ಪರಿಹಾರದ ಕುರಿತು
ಯಾವುದೂ ಸಮಸ್ಯೆಯಿಲ್ಲ. ಈ ಜಾಗಕ್ಕೆ ಸಂಬಂಧಿಸಿದಂತೆ
ಕ್ರಯಪತ್ರ ನೀಡಲು ನನಗೆ ಪ್ರಸ್ತಾವನೆ ಕಳುಹಿಸಿಕೊಡಿ,
ಶೀಘ್ರದಲ್ಲೇ ಮಾಡಿಕೊಡಲಾಗುವುದು ಎಂದರು.
ಹರಿಹರದ ವೆಲ್ಕಾಸ್ಟ್ ಫೌಂಡ್ರಿಯ ಉದ್ಯಮಿ ಸತ್ಯನಾರಾಯಣ
ಮಾತನಾಡಿ, ತಾವೊಬ್ಬ ರಫ್ತುದಾರರಾಗಿದ್ದು, ಪ್ರತಿ ವರ್ಷ
ವಿದ್ಯುತ್ ದರ ಹೆಚ್ಚುಸುತ್ತಿರುವ ಕಾರಣ ರಫ್ತಿಗೆ
ತೊಂದರೆಯಾಗುತ್ತಿದೆ. ಆದ ಕಾರಣ ಕೈಗಾರಿಕೆಗಳಿಗೆ ಕನಿಷ್ಟ
ಮೂರು ವರ್ಷಗಳಿಗೊಮ್ಮೆ ದರ ಹೆಚ್ಚಿಸಬೇಕೆಂದು ಹಾಗೂ
ಕುಡಿಯುವ ನೀರು ವ್ಯವಸ್ಥೆ ಮಾಡಿಕೊಡಬೇಕೆಂದು ಸಚಿವರಿಗೆ
ಮನವಿ ಮಾಡಿದರು.
ಸಚಿವರು ಪ್ರತಿಕ್ರಿಯಿಸಿ ಕೈಗಾರಿಕೋದ್ಯಮಿಗಳಿಗೆ ವಿದ್ಯುತ್
ದರ ಹೆಚ್ಚಳದಿಂದ ಆಗುತ್ತಿರುವ ತೊಂದರೆ ನನ್ನ
ಗಮನಕ್ಕೆ ಬಂದಿದ್ದು, ಕೈಗಾರಿಕೆಗಳಿಗೆ ವಿದ್ಯುತ್ ದರ ಕ್ಕೆ
ಸಂಬಂಧಿಸಿದಮತೆ ಪ್ರತ್ಯೇಕ ನಿಯಮ ರೂಪಿಸುವ ಬಗ್ಗೆ
ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದರು.
ಹರಿಹರದ ಸಮರ್ಥ ಇಂಡಸ್ಟ್ರಿಯ ಮಾಲೀಕರು ಮಾತನಾಡಿ,
ಪ್ರಸ್ತುತ ದಿನಗಳಲ್ಲಿ ಕೈಗಾರಿಕೆ ನಡೆಸುವುದೇ
ಕಷ್ಟವಾಗುತ್ತಿದೆ. ಅದರಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು
ನೌಕರರಿಗೆ ನೀಡುತ್ತಿರುವ ಸಂಬಳ, ಪಿಎಫ್, ಇಎಸ್ಐ ಸಲುವಾಗಿ ಪದೇ
ಪದೇ ತೊಂದರೆ ಕೊಡುತ್ತಿದ್ದಾರೆ ಹಾಗೂ ತಮ್ಮ ವಿರುದ್ದ
ಪ್ರಕರಣ ದಾಖಲಿದ್ದಾರೆಂದು ದೂರಿದರು.
ಸಚಿವರು ಕಾರ್ಮಿಕ ಅಧಿಕಾರಿಗೆ ಕೈಗಾರಿಕೆಗಳು
ನಡೆಯುವುದೇ ಕಷ್ಟವಾಗಿದ್ದು ಈ ರೀತಿ ತೊಂದರೆ
ಕೊಡಬಾರದು. ಕಾರ್ಮಿಕ ಸಚಿವರು ಕೂಡ ತಮಗೆ
ಉತ್ತಮವಾಗಿ ಸ್ಪಂದಿಸುತ್ತಿದ್ದು, ತಾವು
ಕೈಗಾರಿಕೋದ್ಯಮಿಗಳಿಗೆ ಸಹಕಾರ ನೀಡಬೇಕು ಎಂದರು.
ಗ್ರೀನ್ ಆಗ್ರೋಪ್ಯಾಕ್ ಪ್ರೈ.ಲಿ ನ ದೇವಯ್ಯ ಮಾತನಾಡಿ,
ತಾವು ತರಕಾರಿಗಳನ್ನು ಯೂರೋಪ್ಗೆ ರಫ್ತು
ಮಾಡುತ್ತಿದ್ದು, ತಮ್ಮ 15 ಬ್ರಾಂಚ್ಗಳಿವೆ, ಸುಮಾರು 10 ಸಾವಿರ
ರೈತರಿಗೆ ಈ ಉದ್ದಿಮೆಯಿಂದ ಅನುಕೂಲವಾಗುತ್ತಿದೆ.
ಕೊಗ್ಗನೂರಿನಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲಾಗುತ್ತಿದ್ದು,
ಗ್ರಾಮೀಣ ಫೀಡರ್ನಿಂದ ವಿದ್ಯುತ್ಗೆ ತೊಂದರೆಯಾಗುತ್ತಿದೆ.
ಹಾಗೂ ರಫ್ತು ಮಾಡಲು ಕಂಟೈನರ್ ಕೊರತೆ ಜೊತೆಗೆ
ಕಂಟೈನರ್ ದರ ಮೂರು ಪಟ್ಟು ಹೆಚ್ಚಿದೆ ಈ ಬಗ್ಗೆ ಸೂಕ್ತ
ಕೈಗೊಳ್ಳುವಂತೆ ಕೋರಿದರು.
ಮೆಕ್ಕೆಜೋಳ ಉದ್ಯಮಿ ಹಾಗೂ ರೈತರಾದ ಬಸವರಾಜಪ್ಪ
ಮಾತನಾಡಿ, ತಾವು ರೈತರಾಗಿದ್ದು ಮೆಕ್ಕೆಜೋಳ ಸಂಸ್ಕರಿಸಿ
ಇತರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ತಾವು
ಸೇರಿದಂತೆ ಮೆಕ್ಕೆಜೋಳ ಸಂಸ್ಕರಣಾ ಘಟಕಕ್ಕೆ ತಮಗೆ
ರೂ.2.5 ಕೋಟಿ ಮಂಜೂರಾಗಿದ್ದು ಬ್ಯಾಂಕಿನಿಂದ ರೂ.1 ಕೋಟಿ
ಮಾತ್ರ ಬಿಡುಗಡೆ ಆಗಿದೆ. ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ ಆಗಿಲ್ಲ.
ಅದರ ಹೊರತು ಕೆಲಸ ಮಾಡುವುದು ಕಷ್ಟವಾಗಿದೆ
ಎಂದರು.
ಲೀಡ್ಬ್ಯಾಂಕ್ ಮ್ಯಾನೇಜರ್ ಸುಶೃತ ಡಿ ಶಾಸ್ತ್ರಿ ಪ್ರತಿಕ್ರಿಯಿಸಿ, 8
ಮೆಕ್ಕೆಜೋಳ ಘಟಕಗಳಿಗೆ ಸಾಲ ಮಂಜೂರಾಗಿದ್ದು, ಯೋಜನಾ
ವರದಿ ಪ್ರಕಾರ 2 ವರ್ಷದೊಳಗೆ ಮಷಿನರಿ ಅಳವಡಿಕೆ
ಆಗಿಬೇಕು. ಆಗ ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ
ಮಾಡಲಾಗುವುದು. ಆದರೆ ಈ ಘಟಕಗಳಲ್ಲಿ ಮಷಿನರಿ ಸೆಟ್ಅಪ್
ಆಗಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲದ ಕಾರಣ ವರ್ಕಿಂಗ್ ಕ್ಯಾಪಿಟಲ್
ನೀಡಿಲ್ಲವೆಂದರು.
ಸಚಿವರು ಹಾಗೂ ಎಂಡಿ ಯವರು, ರೈತರು ಉದ್ಯಮ
ಮಾಡುತ್ತಿರುವುದು ಸಂತಸದ ವಿಚಾರವಾಗಿದ್ದು,
ಅಧಿಕಾರಿಗಳು, ಸಾಲ ನೀಡುವಲ್ಲಿ ಆಗುತ್ತಿರುವ
ಗೊಂದಲಗಳನ್ನು ನಿವಾರಿಸಿ ಪರಿಹಾರ ಹುಡುಕಿ ವರ್ಕಿಂಗ್ ಕ್ಯಾಪಿಟಲ್
ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಇಲ್ಲಿ ಇಂದು ಅನೇಕರು ಬ್ಯಾಂಕ್ ಸಾಲ ನೀಡುತ್ತಿಲ್ಲವೆಂದು
ದೂರುತ್ತಿದ್ದೀರಿ. ಇದು ಎಲ್ಲೆಡೆ ಇರುವ ಸಮಸ್ಯೆ. ಹಂತ
ಹಂತವಾಗಿ ಬಗೆಹರಿಯಲಿದೆ ಎಂದರು.
ನೇಕಾರರೋರ್ವರು ತಾವು ಕರೂರು ಟೆಕ್ಸ್ಟೈಲ್ಸ್
ಪಾರ್ಕ್ನಲ್ಲಿ ವೀವಿಂಗ್ ಮಷಿನ್ ಮತ್ತು ಇತರೆ ಮಷೀನ್ ಅಳವಡಿಸಿದ್ದು,
ನಷ್ಟ ಹೊಂದಿ ಬ್ಯಾಂಕ್ ಸಾಲ ತೀರಿಸಲು ತಮ್ಮ ಮಳಿಗೆ ಮತ್ತು
ಹೊರ ಮಾರಿದ್ದು ತಮಗೆ ಅಲ್ಲಿ ಇತರೆ ಕೈಗಾರಿಕೆ ಮಾಡುವಂತೆ
ಅನುಮತಿ ಕೋರಿದರು. ಕಾರ್ಗಿಲ್ ಸಂಸ್ಥೆಯವರು ತಮ್ಮ
ಸಂಸ್ಥೆ ಬಳಿ ರೈತರಿಂದ ರಸ್ತೆ ಸಮಸ್ಯೆ ಇದ್ದು
ಬಗೆಹರಿಸಿಕೊಡಬೇಕೆಂದು ಕೋರಿದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಉದ್ಯಮಿ
ಶಂಭುಲಿಂಗಪ್ಪ ಮಾತನಾಡಿ, ವಿದ್ಯುತ್ ಸಂಪರ್ಕಕ್ಕೆ
ಸಂಬಂಧಿಸಿದಂತೆ ಎಲ್ಟಿ ಸಂಪರ್ಕಕ್ಕೆ 65 ಹೆಚ್ಪಿ ನೀಡಲಾಗುತ್ತಿದ್ದು
ಮುಂದಿನ ಬಜೆಟ್ನಲ್ಲಿ 100 ಕ್ಕೆ ಹೆಚ್ಚಿಸುವಂತೆ ಹಾಗೂ ಕರೂರಿನಲ್ಲಿ
ಯುಜಿಡಿ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಕೆಎಸ್ಎಸ್ಐಡಿ ಎಂಡಿ ವಿ.ರಾಮಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿ,
ಪಾಲಿಕೆಯ ಅಮೃತ್ ಯೋಜನೆಯಡಿ ಯುಜಿಡಿ ಗೆ ಕ್ರಮ
ವಹಿಸಬಹುದು. ಜೊತೆಗೆ ಯುಜಿಡಿ ನಿರ್ಮಾಣ ಕುರಿತು ನಿಗಮಕ್ಕೆ
ಪ್ರಸ್ತಾವನೆ ಸಲ್ಲಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ
ತಿಳಿಸಿದರು.
ಎಸ್.ಎನ್ ಬಾಲಾಜಿ ಮಾತನಾಡಿ, ಸಾರಥಿ ಕುರುಬರಹಳ್ಳಿಯಲ್ಲಿ ಎಸ್ಸಿ/ಎಸ್ಟಿ
ಗೆ 5 ಎಕರೆ ಎಂದು ನಿಗದಿಪಡಿಸಿದ್ದು ಇದನ್ನು ಸಬ್ ಲೇಔಟ್
ಮಾಡಬೇಕೆಂದರು ಕೋರಿದರು.
ಸಚಿವರು ಪ್ರತಿಕ್ರಿಯಿಸಿ ಕೈಗಾರಿಕಾ ಪ್ರದೇಶಗಳಲ್ಲಿ
ಭೂಮಿಗೆ ತಾತ್ಕಾಲಿಕ ದರ ನಿಗದಿಪಡಿಸುವಾಗ ಮುಂದೆ
ಮಾರುಕಟ್ಟೆಯಲ್ಲಿ ಆಗಬಹುದಾದ ದರವನ್ನು
ದೃಷ್ಟಿಯಲ್ಲಿಟ್ಟುಕೊಂಡು ನಿಗದಿಪಡಿಸಬೇಕು ಎಂದರು.
ಪರಿಹಾರದ ಭೂಮಿ ಕೊಡುವಂತೆ ರೈತರ ಮನವಿ :
ಕರೂರು ಕೈಗಾರಿಕಾ ಪ್ರದೇಶಕ್ಕೆ ಸುಮಾರು 15
ವರ್ಷಗಳ ಹಿಂದೆ ರೈತರು 143 ಎಕರೆ ಭೂಮಿಯನ್ನು
ಕೆಐಎಡಿಬಿಯವರಿಗೆ ನೀಡಿದ್ದು, ಈ ಭೂಮಿಗೆ ಬದಲಾಗಿ ತಮಗೆ ಬೇರೆ
ಭೂಮಿ ನೀಡುವಂತೆ ಕೋರಿದ್ದು, ಈವರೆಗೆ ಭೂಮಿ ನೀಡಿಲ್ಲ. 15
ವರ್ಷಗಳಿಂದ ಸತತವಾಗಿ ಹೋರಾಡುತ್ತಾ ಬಂದಿದ್ದೇವೆ. ಇದರಲ್ಲಿ
ಕೆವಲರು ಮೃತ ಹೊಂದ್ದಾರೆ. ತಕ್ಷಣ ತಮಗೆ ಭೂಮಿ
ನೀಡಬೇಕೆಂದು ರೈತರು ಒತ್ತಾಯಿಸಿದರು.
ಸಚಿವರು ಪ್ರತಿಕ್ರಿಯಿಸಿ ಇದು ಸುಮಾರು 15 ವರ್ಷಗಳ
ಸಮಸ್ಯೆಯಾಗಿದ್ದು ಇದಕ್ಕೆ ಪರಿಹಾರ ಒದಗಿಸಲಾಗುತ್ತಿದೆ.
ಭೂಮಿಗೆ ಪರಿಹಾರವಾಗಿ ಭೂಮಿ ನೀಡುವ ಬಗ್ಗೆ ಸರ್ಕಾರದ
ಹಂತದಲ್ಲಿ ನಿಯಮ ರೂಪಿಸಲಾಗುತ್ತಿದೆ. ಸ್ವಲ್ಪ ಸಮಯ ನೀಡಿ.
ಶೀಘ್ರದಲ್ಲೇ ತಮಗೆ ಪರಿಹಾರ ಒದಗಿಸಲಾಗುವುದು ಎಂದು
ರೈತರ ಮನವೊಲಿಸಿದರು.
ರೈಸ್ಮಿಲ್ ಮಾಲೀಕರು ಮಾತನಾಡಿ ಹಿಂದೆ ದಾವಣಗೆರೆಯಲ್ಲಿ 100
ರೈಸ್ಮಿಲ್ಗಳಿದ್ದವು ಈಗ 40 ರಿಂದ 50 ಮಾತ್ರ ಇವೆ.
ರೈಸ್ಮಿಲ್ಗಳಿಗೆ ಬರುವ ಸಬ್ಸಿಡಿ ನಿಂತಿದ್ದು, ಶೀಘ್ರವೇ ಇದನ್ನು
ನೀಡುವಂತೆ ಹಾಗೂ ವಿದ್ಯುತ್ ಸಬ್ಸಿಡಿ ನೀಡುವಂತೆ ಕೋರಿದರು.
ಶಾಸಕರಾದ ಎಸ್.ಎ.ರವೀಂದ್ರನಾಥ್, ಅಪರ ಜಿಲ್ಲಾಧಿಕಾರಿ
ಪೂಜಾರ ವೀರಮಲ್ಲಪ್ಪ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ
ಶಿವಕುಮಾರ್, ಗ್ರಾಮಾಂತರ ಕೈಗಾರಿಕೆ ಇಲಾಖೆ ಉಪ
ನಿರ್ದೇಶಕರ ಮನ್ಸೂರ್, ಕೈಗಾರಿಕೆ ಇಲಾಖೆಯ ಜಂಟಿ
ನಿರ್ದೇಶಕರಾದ ಜಯಪ್ರಕಾಶ್ ನಾರಾಯಣ್, ಉಪ
ನಿರ್ದೇಶಕರಾದ ಮಂಜುನಾಥ್, ಭೂಸ್ವಾಧೀನ ಅಧಿಕಾರಿ
ಸರೋಜಾ, ಕೆಎಸ್ಎಫ್ಸಿ ಪ್ರಧಾನ ವ್ಯವಸ್ಥಾಪಕರಾದ ಬಸವರಾಜು,
ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಉಪ ಜಿಲ್ಲಾ ಪರಿಸರ ಅಧಿಕಾರಿ
ಸಂತೋಷ್, ಹರಿಹರ ನಗರಸಭೆ ಆಯುಕ್ತ ಉದಯ್
ಕುಮಾರ್.ಬಿ.ಟಿ, , ಕಾರ್ಮಿಕ ಅಧಿಕಾರಿ ಇಬ್ರಾಹೀಂ ಸಾಬ್, ಹರಿಹರ
ಕೈಗಾರಿಕ ಸಂಘದ ಅಧ್ಯಕ್ಷರು ಇತರೆ ಕೈಗಾರಿಕಾ ಸಂಘದ
ಅಧಿಕಾರಿಗಳು, ಉದ್ಯಮಿಗಳು, ರಫ್ತುದಾರರು
ಉಪಸ್ಥಿತರಿದ್ದರು.