ತುರುವೇಕೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ 169 ಕೋಟಿ ವೆಚ್ಚ ಮಾಡಿ ಸಿದ್ಧಪಡಿಸದ ಶೈಕ್ಷಣಿಕ ಜಾತಿಗಣತಿಯನ್ನು ಸರ್ಕಾರ ಕೂಡಲೇ ಬಿಡುಗಡೆಗೊಳಿಸಬೇಕು, ಇಲ್ಲವಾದಲ್ಲಿ ಹಿಂದುಳಿದ ವರ್ಗಗಳ ವತಿಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಶಾಸಕ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.52 ರಷ್ಟು ಹಿಂದುಳಿದ ವರ್ಗಗಳ ಜನರಿದ್ದಾರೆ. 197 ಜಾತಿಗಳಿದೆ. ಈ ಎಲ್ಲ ಜಾತಿಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಬೇಕಿಲ್ಲ. ಮುಂದುವರೆದ ಜಾತಿ ಜನಾಂಗಳ ವಿಶ್ವಾಸದೊಂದಿಗೆ ಹಿಂದುಳಿದ ಜನಾಂಗಗಳು ಸಹ ಅಭಿವೃದ್ಧಿ ಆಗಲಿ ಎಂಬ ಚಿಂತನೆಯಾಗಲೀ, ಶೈಕ್ಷಣಿಕ ಜಾತಿಗಣತಿ ಬಿಡುಗಡೆಗೊಳಿಸಿ ಸಮಾಜದಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕೆಂಬ ಆಶಯವಾಗಲೀ ಬಿಜೆಪಿ ಸರ್ಕಾರಕ್ಕಿಲ್ಲವಾಗಿದೆ ಎಂದು ಕಿಡಿಕಾರಿದರು.