ಕ್ರಿಮಿನಲ್ ಕೇಸ್‌ಗಳ ವಿವರ ಸಲ್ಲಿಸಿ: ಕೇಂದ್ರಕ್ಕೆ ಸುಪ್ರೀಂ ಆದೇಶ
ಹಾಲಿ ಮತ್ತು ಮಾಜಿ ಶಾಸಕರು ಮತ್ತು ಸಂಸದರ ವಿರುದ್ಧ 4,442 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿದ್ದು, ಇದರಲ್ಲಿ 2,556 ಹಾಲಿ ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ದೇಶದಾದ್ಯಂತ ಸಂಸದರು, ಶಾಸಕರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ.

ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಕೋರಿ 2016 ರಲ್ಲಿ ವಕೀಲೆ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠ ನಡೆಸಿತು.

ದೇಶದ ವಿವಿಧ ಹೈಕೋರ್ಟ್‌ಗಳು ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳ ವಿಲೇವಾರಿಗಾಗಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ನೆರವು ಕೇಳುತ್ತಿವೆ ಎಂದು ವಿಚಾರಣೆಯ ವೇಳೆ, ನ್ಯಾಯಾಲಯವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ ‘ಧನಸಹಾಯ ಮಾಡಲು ತೊಂದರೆ ಇಲ್ಲ’ ಎಂದು ಹೇಳಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ ನೀಡಿ: ರಾಜ್ಯಗಳಿಗೆ ಸುಪ್ರೀಂ ಆದೇಶ

ನ್ಯಾಯಪೀಠ ವ್ಯಕ್ತಪಡಿಸಿದ ಆತಂಕವೆಂದರೆ, ಅನೇಕ ಸಂದರ್ಭಗಳಲ್ಲಿ ಪೊಲೀಸರು ಶಾಸಕರಿಗೆ ಹೆದರುತ್ತಿದ್ದರು ಮತ್ತು ಅದು ಗಂಭೀರ ವಿಷಯವಾಗಿದೆ. ಈ ವಿಷಯದ ಬಗ್ಗೆಯೂ ಗಮನಹರಿಸಲು ನ್ಯಾಯಪೀಠ ಕೇಂದ್ರವನ್ನು ಕೇಳಿತು.

ಜನಪ್ರತಿನಿಧಿಗಳ ಒತ್ತಡದಿಂದಾಗಿ ಪೊಲೀಸರು ಕೆಲವೊಮ್ಮೆ ಕಾನೂನು ಜಾರಿಗೊಳಿಸದ ಕಾರಣಕ್ಕೆ ಸಂಸತ್ ಸದಸ್ಯರು ಮತ್ತು ವಿಧಾನಸಭೆ ಸದಸ್ಯರ (ಸಂಸದರು ಮತ್ತು ಶಾಸಕರು) ವಿರುದ್ಧ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಇಂತಹ ಸನ್ನಿವೇಶದಲ್ಲಿ ಸಮಯೋಚಿತ ಸಮನ್ಸ್ ಇತ್ಯಾದಿಗಳನ್ನು ಜಾರಿಗೊಳಿಸಲು ಉನ್ನತ ನ್ಯಾಯಾಲಯವು ಪ್ರತಿ ರಾಜ್ಯದ ಪೊಲೀಸ್ ಡಿಜಿಗೆ ನಿರ್ದೇಶನಗಳನ್ನು ನೀಡಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಲಹೆ ನೀಡಿದರು.

ಮಾರ್ಚ್ 2020 ರ ವೇಳೆಗೆ ಸಂಸದರು ಮತ್ತು ಶಾಸಕರ ವಿರುದ್ಧ 4,442 ಪ್ರಕರಣಗಳು ಬಾಕಿ ಉಳಿದಿವೆ ಎಂದು ಹಿರಿಯ ವಕೀಲ ಹನ್ಸಾರಿಯಾ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ವಿವಿಧ ಹೈಕೋರ್ಟ್‌ಗಳಿಂದ ಮಾಹಿತಿ ಪಡೆದ ನಂತರ ಸಂಗ್ರಹಿಸಲಾದ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಕರಣಗಳ ಸಂಖ್ಯೆ ಇದೀಗ 4,859 ಕ್ಕೆ ಏರಿಕೆಯಾಗಿದೆ.

ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಂಸದರ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಸೆಪ್ಟೆಂಬರ್ 16 ರಂದು ನ್ಯಾಯಾಲಯ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿತ್ತು.

ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸಲು ಕೇಂದ್ರವು ಹೆಚ್ಚಿನ ಕಾಲಾವಕಾಶ ಕೋರಿದೆ. ಹೀಗಾಗಿ ನ್ಯಾಯಪೀಠ ಈ ಪ್ರಕರಣವನ್ನು ತಾತ್ಕಾಲಿಕವಾಗಿ 10 ದಿನಗಳವರೆಗೆ ಮುಂದೂಡಿದೆ.

ಹಾಲಿ ಮತ್ತು ಮಾಜಿ ಶಾಸಕರು ಮತ್ತು ಸಂಸದರ ವಿರುದ್ಧ 4,442 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ ಎಂದು ಸೆಪ್ಟೆಂಬರ್ 9 ರಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಇದರಲ್ಲಿ 2,556 ಹಾಲಿ ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

Leave a Reply

Your email address will not be published. Required fields are marked *