ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವವು ಮಂಗಳವಾರ ಸಂಜೆ ನಾಡಿನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ರಥೋತ್ಸವದ ನಿಮಿತ್ತ ಮಂಗಳವಾರ ಮುಂಜಾನೆಯಿಂದಲೇ ಗ್ರಾಮದ ಆಂಜನೇಯ ಹಾಗೂ ಬಸವೇಶ್ವರ ದೇವಾಲಯಗಳಲ್ಲಿ ಉತ್ಸವ ಹಾಗೂ ಉದ್ಭವ ಮೂರ್ತಿಗಳಿಗೆ ಅಭಿಷೇಕ ಪಂಚಾಮೃತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಗ್ರಾಮದ ರಾಜ ಬೀದಿಗಳಿಗೆ ತಳಿರು-ತೋರಣ ಬಾಳೆ ಹೊಂಬಾಳೆಗಳಿಂದ ಅಲಂಕಾರ ಗೊಳಿಸಲಾಗಿತ್ತು. ಇಂದು ಬಸವ ಜಯಂತಿ ಅಂಗವಾಗಿ ಶ್ರೀಬಸವೇಶ್ವರರ ಫೋಟೋವನ್ನು ಸಣ್ಣ ರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ರಾಜ ಬೀದಿಯುದ್ದಕ್ಕೂ ಮೆರವಣಿಗೆ ಮಾಡಲಾಯಿತು. .
ಮಂಗಳವಾರ ಸಂಜೆ ಗೋಧೂಳಿ ಸಮಯದಲ್ಲಿ ಸುಮಾರು 45 ಅಡಿ ಎತ್ತರದ ಭವ್ಯ ರಥಕ್ಕೆ ಮಲ್ಲಿಗೆ ಸೇವಂತಿಗೆ ಜಾಜಿ ಕನಕಾಂಬರ ಸೇರಿದಂತೆ ವಿವಿಧ ಪುಷ್ಪಗಳ ಅಲಂಕಾರ, ಆಳೆತ್ತರದ ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ನಂತರ ಸೈದರ ಕಲ್ಲಹಳ್ಳಿ ಲಕ್ಷ್ಮೀ ರಂಗನಾಥ ಸ್ವಾಮಿಯ ವೈಭವದ ಕಲ್ಯಾಣ ಕಾರ್ಯ ಮುಗಿದ ನಂತರ ಆಂಜನೇಯ ಸ್ವಾಮಿ ಉತ್ಸವಮೂರ್ತಿಗಳನ್ನು ಜಾನಪದ ಕಲಾ ಮೇಳಗಳೊಂದಿಗೆ ರಾಜಬೀದಿ ಉತ್ಸವದ ನಂತರ ಶೃಂಗಾರಗೊಂಡ ಭವ್ಯ ರಥದಲ್ಲಿ ಪ್ರತಿಷ್ಠಾಪಿಸಿ, ಶ್ರೀ ಲಕ್ಷ್ಮೀ ರಮಣ ಗೋವಿಂದಾ….ಗೋವಿಂದಾ… ಶ್ರೀ ಆಂಜನೇಯ ಮಹಾರಾಜಕೀ ಜೈ… ಉದ್ಘೋಷಗಳ ಜೈ ಕಾರ ಕೂಗುತ್ತಾ ನಾಡಿನ ಸುತ್ತಮುತ್ತಲ ಗ್ರಾಮಗಳಿಂದ ಬಂದ ಭಕ್ತರು ರಥದ ಗಾಲಿಗೆ ಹಿಡಿಗಾಯಿ ಒಡೆದು ಕಳಕ್ಕೆ ಬಾಳೆಹಣ್ಣನ್ನು ತೂರಿ ತಮ್ಮ ಸಂಕಷ್ಟಗಳು ನಿವಾರಣೆಯಾಗಲಿ ನಾಡಿಗೆ ಮಳೆ-ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.