ಹುಣಸಘಟ್ಟ: ಇಂದು ನಾಗರಿಕತೆ ಬದಲಾವಣೆಯಾಗಿದೆ. ಹಿಂದೂ ಧರ್ಮದ ಸಂಸ್ಕಾರದಿಂದ ಹಿಂದೆ ಸರಿದ ನಾರಿಯರು ಭಾರತೀಯ ಸಂಸ್ಕಾರವಾದ ಸೀರೆ ಹಸಿರು ಬಳೆ ಹಣೆಗೆ ಕುಂಕುಮ ಧರಿಸುವುದನ್ನು ಬಿಟ್ಟು ಜೀನ್ಸ್, ಟೀ-ಶರ್ಟು, ಬರ್ಮುಡಾ ಪಾಶ್ಚಿಮಾತ್ಯ ಸಂಸ್ಕೃತಿಗೆ ದಾಸರಾಗಿದ್ದಾರೆ. ಇದರ ಜೊತೆಗೆ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡಿರುವುದಾಗಿ ಕೆಳದಿ ರಾಜಗುರು ಕವಲೆದುರ್ಗ ಹಿರೇಮಠದ ಶ್ರೀ ರುದ್ರಮುನಿ ಸ್ವಾಮೀಜಿಗಳು ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹೊಟ್ಯಾಪುರ ಹಿರೇಮಠದಲ್ಲಿ ಸೋಮವಾರ ರಾತ್ರಿ ನಡೆದ ಎಳೆ ಗೌರಮ್ಮ ದೇವಿ ಹಬ್ಬದ ಧರ್ಮಸಭೆ ದಿವ್ಯಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು ಪ್ರಾಪ್ತ ವಯಸ್ಸಿಗೆ ಬಂದ ಮಕ್ಕಳು ಶುದ್ಧವಾದ ನೀರನ್ನು ಕುಡಿಯಬೇಕು. ನೀವೇನಾದರೂ ಮಿರಿಂಡಾ, ಕೋಕೋ ಕೋಲಾ ಸ್ಪ್ರೈಟ್, ಪೆಪ್ಸಿ ಮಾಜಾ ಇಂತಹ ಅಭ್ಯಾಯಾ ಪಾನೀಯಗಳಿಗೆ ನೀವು ಹಲ್ಲು ಹತ್ತಿದರೆ ಕಿಂಗ್ ಫಿಶರ್ ರಮ್ಮು ಜಿನ್ ಸೇವಿಸಿದರೆ ಅವರು ಆಸ್ಪತ್ರೆಗೆ ಹೋದವರು ಆಕಡೆಯಿಂದ ಅಂಬುಲೆನ್ಸ್ ನಲ್ಲಿ ಮರಳಿ ಮನೆಗೆ ಬರುತ್ತಾರೆ. ಇಂತಹ ಸ್ವಯಂಕೃತ ಅಪರಾಧಗಳಿಂದ ನಾವು ನಮ್ಮ ಶರೀರವನ್ನು ಕೃಷ ಮಾಡಿಕೊಳ್ಳುವುದು ಬೇಡ ಸತ್ ಕಾರ್ಯಾಚರಣೆ, ಧರ್ಮ ಆಚರಣೆಗಳಿಂದ ಆಯಸ್ಸು ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಬೇಕು ಎಂದರು.
ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಆಯಸ್ಸು ಕೀರ್ತಿ ಯಶಸ್ಸು ಬಲ ಈ ನಾಲ್ಕು ಫಲಗಳು ತಂದೆ-ತಾಯಿಗಳ ಸೇವೆ ಗುರುಹಿರಿಯರ ಸೇವೆ ದೇವರ ಪೂಜೆ ಮಾಡುವುದರಿಂದ ಫಲಗಳು ಪಡೆಯಲು ಸಾಧ್ಯ. ಇಂದು ನೀವೆಲ್ಲರೂ ಶ್ರೀಮಠದಿಂದ ಎಳೆಯನ್ನು ಸಂಕಲ್ಪದಿಂದ ಹೊಯ್ದು ನಿಮ್ಮ ನಿಮ್ಮ ಮನೆಗಳಲ್ಲಿ ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂದರು.
ಹೊಟ್ಯಾಪುರ ಹಿರೇಮಠದ ಶ್ರೀ ಗಿರಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಹಿರೇಮಠದಲ್ಲಿ ಪೂರ್ವಜರ ಕರ್ತೃ ಗದ್ದಿಗೆಯ ನೂತನ ಶಿಲಾ ಮಟ್ಟದ ನಿರ್ಮಾಣ ಸುಮಾರು ರೂ. 2.50 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಸರ್ವ ಭಕ್ತರು ಸಹಕಾರ ನೀಡುವಂತೆ ತಿಳಿಸಿದರು.
ಧರ್ಮಸಭೆಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಗಿರೀಶ್ ಪಟೇಲ್, ಜಿಪಂ ಮಾಜಿ ಅಧ್ಯಕ್ಷೆ ಶೀಲಾಗದ್ದಿಗೇಶ್, ಜಿಪಂ ಮಾಜಿ ಸದಸ್ಯ ಚಂದ್ರಶೇಖರ್, ಕೆ ಎಸ್ ಡಿ ಎಲ್ ನಿರ್ದೇಶಕ ಶಿವು ಹುಡೇದ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಚ್ ಎ ಗದ್ದಿಗೆಶ್ ತಾಪಂ ಮಾಜಿ ಉಪಾಧ್ಯಕ್ಷ ಕೆಎಲ್ ರಂಗನಾಥ್ ಜಗನ್ನಾಥ್ ಪಾಟೀಲ್, ಇ ಸಿ ಓ ರಾಜಶೇಖರಯ್ಯ, ಗ್ರಾಮ ಪಂ ಅಧ್ಯಕ್ಷರಾದ ರೇಖಾ ಕವಿತಾ ಕವಿತಾ ಸೇರಿದಂತೆ ಹೋಬಳಿ ವ್ಯಾಪ್ತಿಯ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಎಂ ರಾಜಕೀಯ ಆಪ್ತ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ತಹಸಿಲ್ದಾರ್ ರಶ್ಮಿ ಆಗಮಿಸಿ ಎಳೆ ಗೌರಮ್ಮ ದೇವಿ ದರ್ಶನ ಪಡೆದು ಗುರುಗಳ ಆಶೀರ್ವಾದ ಪಡೆದುಕೊಂಡರು.
ಹೊಟ್ಯಾಪುರ ಹಿರೇಮಠದಲ್ಲಿ ನಡೆದ ಎಳೆ ಗೌರಮ್ಮ ದೇವಿ ಹಬ್ಬದ ಧರ್ಮ ಸಭೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಳದಿ ರಾಜಗುರು ಕವಲೇದುರ್ಗ ಹಿರೇಮಠದ ಶ್ರೀ ರುದ್ರಮುನಿ ಸ್ವಾಮಿಜಿ ನೆರವೇರಿಸಿದರು.