ಹೊನ್ನಾಳಿ:
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯವನ್ನು 2019ರ ನಂತರದ ಜಮೀನುಗಳ ಹೊಸ ಖಾತೆದಾರರಿಗೂ ಅನ್ವಯಿಸುವಂತೆ ಸರಕಾರ ಪರಿಷ್ಕøತ ಆದೇಶ ಹೊರಡಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿದರಗಡ್ಡೆ ಬಿ.ಎಚ್. ಜಯಪ್ಪ ಒತ್ತಾಯಿಸಿದರು.
ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ ಕೃಷಿಕ ಸಮಾಜದ ಪದಾಧಿಕಾರಿಗಳ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
2019ರಿಂದ ಈವರೆಗೆ ಅನೇಕರು ಜಮೀನುಗಳನ್ನು ಖರೀದಿಸಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಅವರೆಲ್ಲರಿಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಯ ಸವಲತ್ತು ಲಭಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
1 ಎಕರೆಗೂ ಹೆಚ್ಚು ಜಮೀನಿನಲ್ಲಿ ರೇಷ್ಮೆ ಕೃಷಿಗೆ ಮುಂದಾಗುವ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 50 ಸಾವಿರ ರೂ.ಗಳಷ್ಟು ಹಣವನ್ನು ಸಹಾಯಧನವನ್ನಾಗಿ ಮಂಜೂರು ಮಾಡುವ ಬಗ್ಗೆ ಚರ್ಚಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಎಪಿಎಂಸಿ ಆವರಣದಲ್ಲಿನ ಕೃಷಿಕ ಸಮಾಜ ಭವನದ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಸಂಘಕ್ಕೆ ಅನುಕೂಲವಾಗುವಂತೆ ಒಂದು ವ್ಯವಸ್ಥಿತವಾದ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.
ಯೂರಿಯಾ ಗೊಬ್ಬರದ ಸದ್ಬಳಕೆ ಹಾಗೂ ಇದರ ಬಳಕೆಯಿಂದ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ರೈತರಿಗೆ ವಿವರಿಸಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಪ್ರತಿಮಾ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಾ, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷೆ ಆರುಂಡಿ ಜಯಮ್ಮ, ಜಿಲ್ಲಾ ಪ್ರತಿನಿಧಿ ರುದ್ರಾನಾಯ್ಕ, ನಿರ್ದೇಶಕರಾದ ಬೆಳಗುತ್ತಿ ಬಿ.ಎಚ್. ಉಮೇಶ್, ಕೆಂಚಿಕೊಪ್ಪದ ರಾಮಲಿಂಗಪ್ಪ, ಗೋವಿನಕೋವಿ ಸುರೇಶ್, ನರಸಗೊಂಡನಹಳ್ಳಿ ಕೃಷ್ಣಮೂರ್ತಿ, ಬೀರಗೊಂಡನಹಳ್ಳಿ ಜಿ.ಎನ್. ಶಿವನಗೌಡ, ಚಿನ್ನಿಕಟ್ಟೆ ಎಂ.ಎಚ್. ಕುಮಾರ್, ಉಜ್ಜನೀಪುರದ ಬಸವರಾಜಪ್ಪ, ಆರುಂಡಿ ಸೋಮಶೇಖರ್ ಇತರರು ಇದ್ದರು.