ಹುಣಸಘಟ್ಟ: ಕಳೆದ ಆರು ತಿಂಗಳಿಂದ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಪಶು ಚಿಕಿತ್ಸ ಕೇಂದ್ರದಲ್ಲಿ ಕಾಯಂ ಪಶು ವೈದ್ಯರಿಲ್ಲದೆ ಚರ್ಮದ ರೋಗ ಕಾಲುಬಾಯಿ ಜ್ವರದಿಂದ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಅಧಿಕ ಸಂಖ್ಯೆಯಲ್ಲಿ ಜಾನುವಾರುಗಳು ಸಾಯುತ್ತಿದ್ದು ತಕ್ಷಣ ಕಾಯಂ ಪಶು ವೈದ್ಯರನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಪಶು ಚಿಕಿತ್ಸ ಕೇಂದ್ರದ ಮುಂದೆ ಜಾನುವಾರುಗಳನ್ನು ಹಿಡಿದು ಪ್ರತಿಭಟಿಸಿ ಒತ್ತಾಯಿಸಿದರು.
ಬೆನಕನಹಳ್ಳಿ ಗ್ರಾಮದ ಶಾಸ್ತ್ರಿ ಮನೆ ಲಿಂಗರಾಜು ಪತ್ರಿಕೆಯೊಂದಿಗೆ ಮಾತನಾಡಿ ಬೆನಕನಹಳ್ಳಿ ಹೋಬಳಿಯಲ್ಲಿ ದೊಡ್ಡ ಗ್ರಾಮವಾಗಿದ್ದು ಇಲ್ಲಿ ಜಾನುವಾರಗಳ ಸಂಖ್ಯೆ ಅಧಿಕವಾಗಿದ್ದು ಇಲ್ಲಿನ ಪಶು ಚಿಕಿತ್ಸ ಕೇಂದ್ರಕ್ಕೆ ಅಕ್ಕಪಕ್ಕದ ಗ್ರಾಮಗಳಾದ ಹುಣಸೆಹಳ್ಳಿ, ಚಿಕ್ಕಬಾಸುರು, ಚಿಕ್ಕಬಾಸೂರು ತಾಂಡ, ವಿಜಯಪುರ, ಕಮ್ಮಾರಗಟ್ಟೆ, ಗಂಟ್ಯಾಪುರ, ತಕ್ಕನಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ನಿತ್ಯವೂ ಅಧಿಕ ಸಂಖ್ಯೆಯಲ್ಲಿ ರೋಗದಿಂದ ನರಳುವ ಜಾನುವಾರಗಳು ಪಶು ಆಸ್ಪತ್ರೆ ಮುಂದೆ ದಿನಗಟ್ಟಲೆ ಕಾಯುವುದೇ ಇಲ್ಲಿನ ರೈತರ ಕಾಯಕವಾಗಿದೆ.
ಇಲ್ಲಿ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಶಿಕುಮಾರ್ ಪಶು ವೈದ್ಯರು ಆರು ತಿಂಗಳ ಹಿಂದೆಯೇ ವರ್ಗಾವಣೆಯಾಗಿ ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಎರಡು ಹುದ್ದೆಗಳು ಖಾಲಿ ಇವೆ. ಲಿಂಗಾಪುರ ಪಶು ಚಿಕಿತ್ಸ ಕೇಂದ್ರದಿಂದ ಪಶು ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಅವರು ಸರ್ಕಾರದ ಆದೇಶದಂತೆ ಹಳ್ಳಿಗಳ ಮೇಲೆ ಜಾನುವಾರಗಳಿಗೆ ಲಸಿಕೆ ನೀಡಲು ತೆರಳುತ್ತಾರೆ. ದಿನವಿಡೀ ಆಸ್ಪತ್ರೆಯು ಬೀಗ ಹಾಕಲಾಗಿರುತ್ತದೆ ರೋಗಸ್ಥ ಜಾನುವಾರುಗಳನ್ನು ರೈತರು ಇಂಜೆಕ್ಷನ್ ಗಾಗಿ ದಿನವಿಡೀ ಕಾಯುವ ಅನಿವಾರ್ಯತೆ ಇದೆ. ರೈತರು ಖಾಸಗಿ ಪಶು ವೈದ್ಯರಿಗೆ ದುಬಾರಿ ಔಷಧಿ ಖರ್ಚು ವೆಚ್ಚ ನೀಡಲಾಗದೆ ಜಾನುವಾರುಗಳು ಅಧಿಕ ಸಂಖ್ಯೆಯಲ್ಲಿ ಹಸು ನೀಗುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಇಲ್ಲಿನ ಪಶು ಆಸ್ಪತ್ರೆಗೆ ಖಾಲಿ ಇರುವ ಎರಡು ಹುದ್ದೆಗಳನ್ನು ಭರ್ತಿ ಮಾಡಿ ಜಾನುವಾರುಗಳ ರೋಗ ನಿಯಂತ್ರಣಗೊಳಿಸಬೇಕು. ಪಶು ವೈದ್ಯರ ನೇಮಕ ವಿಳಂಬವಾದಲ್ಲಿ, ತಾಲೂಕು ಆಡಳಿತ ಕಚೇರಿಯ ಮುಂದೆ ರೈತರು ಜಾನುವಾರುಗಳ ಹಿಡಿದು ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಲಿಂಗಾ ನಾಯ್ಕ, ಗಣೇಶಪ್ಪ, ಶಿವಲಿಂಗಪ್ಪ, ಗಜೇಂದ್ರ ಗೌಡ, ವೆಂಕಟೇಶ್ ಲಕ್ಷ್ಮಣ ನಾಯ್ಕ ಮುಂತಾದವ್ರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *