ಹುಣಸಘಟ್ಟ : ಮಡಿವಾಳ ಮಾಚಿದೇವರು ಬಸವಣ್ಣವನವರಿಗಿಂತಲೂ ಹಿರಿಯರು ಬಸವಣ್ಣನವರ ಎಲ್ಲಾ ಸಮಾಜ ಸುಧಾರಕ ಚಟುವಟಿಕೆಗಳಲ್ಲಿ ಅತ್ಯಂತ ಸಮೀಪದಲ್ಲಿದ್ದು ಸಹಕರಿಸುತ್ತಿದ್ದರು. ಬಸವಣ್ಣನವರು ಮಾಚಿದೇವರನ್ನು ಮಾಚಿ ತಂದೆ ಎಂದು ಸಂಬೋಧಿಸುತ್ತಿದ್ದರು ಎಂದು ಕ್ಯಾಸಿನಕೆರೆ ನಿವೃತ್ತ ಉಪನ್ಯಾಸಕ ಎಂ ಚಂದ್ರಪ್ಪನವರು ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹುಣಸಘಟ್ಟ ಗ್ರಾಮದಲ್ಲಿ ಮಡಿವಾಳ ಸಮುದಾಯದ ಯುವಕರು ಆಯೋಜಿಸಿದ ಶ್ರೀ ಮಡಿವಾಳ ಮಾಚಿದೇವರ 913ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ 12ನೇ ಶತಮಾನದಲ್ಲಿನ ಶಿವಶರಣರು ಬರೆದ ವಚನ ಸಾಹಿತ್ಯಗಳನ್ನು ಜೋಪಾನವಾಗಿಡಲು ಮಾಚಯ್ಯನವರಲ್ಲಿ ನೀಡುತ್ತಿದ್ದರಂತೆ. ವಚನಗಳನ್ನು ಧ್ವಂಸ ಮಾಡಲು ಹಲವಾರು ಬಾರಿ ರಾಜನಾದ ಬಿಜ್ಜಳ ದಾಳಿ ಮಾಡಿದಾಗ ಬಿಜ್ಜಳನ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿ ಶಿವಶರಣರ ಲಕ್ಷಾಂತರ ವಚನಗಳನ್ನು ಸಂರಕ್ಷಿಸಿದ ಖ್ಯಾತಿ ಮಾಚಿದೇವರಿಗೆ ಸಲ್ಲಿಸುತ್ತದೆ ಎಂದರು.
ಮಡಿವಾಳ ಜನಾಂಗ : ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಒಂದು ರಾಜ್ಯಮಟ್ಟದ ಮಡಿವಾಳ ಜನಾಂಗದ ಸಮಾವೇಶದಲ್ಲಿ 5 ಲಕ್ಷಕ್ಕೂ ಅಧಿಕ ಮಡಿವಾಳರು ಪಾಲ್ಗೊಂದಿದ್ದರು. ಒಂದು ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಮಡಿವಾಳ ಜನಾಂಗವಿದೆ. ಈ ರಾಷ್ಟ್ರದ 18 ರಾಜ್ಯಗಳಲ್ಲಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶದಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು ಕರ್ನಾಟಕದಲ್ಲಿಯೂ ಈ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ನಿರಂತರ ಹೋರಾಟ ನಡೆಯುತ್ತಾ ಬಂದಿದೆ. ಈಗಿನ ಸರ್ಕಾರ ತಕ್ಷಣ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿದರು.
ದಶಕದ ಹಿಂದೆ ಗುರು ಮಾಚಿದೇವರ ಮಹಾಸಂಸ್ಥಾನದ ಮಠವನ್ನು ಸ್ಥಾಪಿಸಲು 21ನೇ ಶತಮಾನದ ಶರಣರ ಸಂಸ್ಕೃತಿಯ ಯುಗಪುರುಷ ಡಾ. ಶಿವಮೂರ್ತಿ ಮುರುಗ ಶರಣರ ಮಾರ್ಗದರ್ಶನದಲ್ಲಿ ಚಿತ್ರದುರ್ಗದಲ್ಲಿ ಶಂಕುಸ್ಥಾಪನ ಕಾರ್ಯಕ್ರಮದ ಸಂದರ್ಭದಲ್ಲಿ ಅಂದಿನ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಲು ಬಂದ ಉಡುಪಿ ಪೇಜಾವರ ಮಠದ ತೀರ್ಥ ಶ್ರೀಪಾದರು ರಾಜಕಾರಣಿಗಳು ಮತ್ತು ಮಡಿವಾಳರನ್ನು ಉದ್ದೇಶಿಸಿ ಎಲ್ಲಾ ರಾಜಕಾರಣಿಗಳು ಮಡಿವಾಳರಂತೆ ಆಗಬೇಕು ಎಂದು ಹೇಳಿದ್ದರು. ಅಂದರೆ ಮಡಿವಾಳರು ಬಟ್ಟೆಗಳನ್ನು ಹೇಗೆ ಶುದ್ಧೀಕರಣ ಮಾಡುತ್ತಾರೋ… ಅದೇ ರೀತಿ ರಾಜಕಾರಣಿಗಳು ಸಮಾಜವನ್ನು ಕೋಮು ಗಲಭೆ ಭ್ರಷ್ಟಾಚಾರಗಳಿಂದ ಶುದ್ಧ ಮಾಡಬೇಕೆನ್ನುವುದು ಶ್ರೀಗಳ ಮಾತಿನ ಒಳ ಅರ್ಥ. ವಿಶ್ವಧರ್ಮದ ನೈತಿಕ ಆಚರಣೆ ತತ್ವಗಳ ಮೇಲೆ ಶಿವಶರಣರು ಸೃಷ್ಟಿಸಿದ ವಚನಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುನ್ನ ಮಾಚಿದೇವರ ಭಾವಚಿತ್ರದ ದೊಡ್ಡ ಬ್ಯಾನರ್ ಫೋಟೋವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ರಾಜಬೀದಿಗಳಲ್ಲಿ ಡಿಜೆ ಜಾನಪದ ಕಲಾ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು.
