ನ್ಯಾಮತಿ: ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವತಿಯಿಂದ ಶ್ರೀ ರಾಮದೇವರ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಎರಡನೇ ವರ್ಷದ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಏ: 4ರಂದು ಮಂಗಳವಾರ ಸಂಜೆ 6:30 ರಿಂದ ರಾತ್ರಿ 10.30 ರವರೆಗೆ ಆಂಜನೇಯ ಸ್ವಾಮಿಯ ದ್ವಜಾರೋಹಣ ಮತ್ತು ಕಂಕಣದಾರಣೆಯಾಗಿ ಬುಧವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದ ಎಲ್ಲಾ ದೇವಾನುದೇವತೆಗಳಿಗೆ ಮಹಾರುದ್ರಾಭಿಷೇಕ ನೆರವೇರಿ,ಆಂಜನೇಯ ಸ್ವಾಮಿಗೆ ಭಾಸಿಂಗ ಧಾರಣೆ, ಮಧ್ಯಾಹ್ನ 4 ಗಂಟೆಗೆ ರಥಗಳಿಗೆ ಕಳಸಾರೋಹಣ ಹೂವಿನ ತೇರು ನೆರವೇರಿತು. ಇದರೊಂದಿಗೆ ಶ್ರೀ ಸಂಜೆ 7 ಗಂಟೆಗೆ ಸರಿಯಾಗಿ ಸ್ವಾಮಿಯ ಕೋರೂಟಕ್ಕೆ ಭಕ್ತರ ಮನೆಗೆ ತೆರಳಿದಾಗ ಮಡಿ ಸ್ನಾನದೊಂದಿಗೆ ಭಕ್ತರು ನೈವೇದ್ಯ ಅರ್ಪಿಸಿದರು. ಗುರುವಾರ ಬೆಳಗ್ಗೆ ಶ್ರೀಮದ್ ವೃಷಭ ಪುರಿ ಸೂರ್ಯ ಸಿಂಹಾಸನಾದೀಶ್ವರ 1108 ಜಗದ್ಗುರು ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿ ಬೃಹನ್ ಮಠ ನಂದಿಗುಡಿ ಇವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ವೇದಮೂರ್ತಿ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀರಾಮದೇವರ ಮತ್ತು ಆಂಜನೇಯಸ್ವಾಮಿಯ ಮಹಾ ರಥೋತ್ಸವ ಗ್ರಾಮದ ಎಲ್ಲಾ ದೇವಾನುದೇವತೆಗಳ ಹಾಗೂ ಗ್ರಾಮಸ್ಥರು ಮತ್ತು ಭಕ್ತ ಸಮೂಹದೊಂದಿಗೆ ವೀರಗಾಸೆ, ಡೊಳ್ಳು ಕುಣಿತ, ಹಲಗೆ, ಭಜನೆ ಹಾಗೂ ಮಂಗಳವಾದ್ಯಗಳೊಂದಿಗೆ ಮಹಾ ರಥೋತ್ಸವವು ಶೂಲದ ರಾಮ ದೇವಸ್ಥಾನದಿಂದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಬಂದು ತಲುಪಿತು. ತದಾದ ನಂತರ ಬಂದಿರುವ ಭಕ್ತರಿಗೆ ಅನ್ನ ಸಂತರ್ಪಣೆ ಸಹ ನಡೆಯಿತು. ನಂತರ ಸಂಜೆ 4:00ಗೆ ಹರಿಸೇವೆ (ಮಣೆವು) ನಡೆದು ಕಂಕಣ ವಿಸರ್ಜನೆ ಮತ್ತು ಶ್ರೀ ಸ್ವಾಮಿಯ ಓಕುಳಿ ಆಡುವುದರೊಂದಿಗೆ ಮೂರು ದಿವಸದ ಧಾರ್ಮಿಕ ಕಾರ್ಯ ಮುಕ್ತಾಯಗೊಂಡಿತು. ಊರಿನ ಗ್ರಾಮಸ್ಥರು ಸುತ್ತಮುತ್ತಲಿನ ಹಳ್ಳಿಯ ಭಕ್ತಾದಿಗಳು ಸಹ ಪಾಲ್ಗೊಂಡಿದ್ದರು.